ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್’

Vijayanagara Vani
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್’
ಬಳ್ಳಾರಿ,ಆ.16
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ ಯೋಜನೆ’ಯು ಅನುಕೂಲವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ಹೇಳಿದರು.
ಬುಧವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಪಕ್ಕದಲ್ಲಿನ ರುಡ್‌ಸೆಟ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ ಯೋಜನೆ’ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಚೇರಿ ವತಿಯಿಂದ 78 ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಪ್ಯಾನ್ ಇಂಡಿಯಾ ಮೆಗಾ ಸಿಎಸ್‌ಆರ್ ಇನಿಶಿಯೇಟಿವ್ ಆಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ ಯೋಜನೆ’ ಪರಿಚಯಿಸಿದ್ದು, ಹೆಣ್ಣುಮಕ್ಕಳ ಶಿಕ್ಷಣವನ್ನು ಅರ್ಥಪೂರ್ಣ ಅಭಿವೃದ್ಧಿಗೆ ಮೂಲಭೂತ ಅಗತ್ಯವೆಂದು ಪ್ರಚಾರ ಮಾಡಿದ ಸಂಸ್ಥಾಪಕ ಅಮ್ಮೆಂಬಳ ಸುಬ್ಬಾರಾವ್ ಪೈ ಅವರಿಗೆ ಗೌರವಾರ್ಥವಾಗಿ “ಕೆನರಾ ವಿದ್ಯಾ ಜ್ಯೋತಿ” ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಕೆನರಾಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಡಿ.ವಿ.ಪಿ.ಆರ್.ಮುರಳಿಕೃಷ್ಣ ಅವರು ಮಾತನಾಡಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
2013-14 ರಲ್ಲಿ ಸಿಎಸ್‌ಆರ್ ಉಪಕ್ರಮಗಳ ಅಡಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ವಿಸ್ತರಿಸಲು ಪ್ರಾರಂಭಿಸಲಾಯಿತು. ಬರು ಬರುತ್ತಾ 2015-16 ರಿಂದ ಗ್ರಾಮೀಣ, ಅರೆ-ನಗರ ಮತ್ತು ನಗರ ಶಾಖೆಗಳ ಮೂಲಕ ವಿಸ್ತರಿಸಲಾಯಿತು ಎಂದರು.
ಕಳೆದ 11 ವರ್ಷಗಳಲ್ಲಿ 95 ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ರೂ.46 ಕೋಟಿ ಮೊತ್ತದೊಂದಿಗೆ ವಿದ್ಯಾರ್ಥಿವೇತನ ಒದಗಿಸಲಾಗಿದೆ. 2023-24 ರವರೆಗೆ 44742 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ರೂ.18 ಕೋಟಿ ನೀಡಿದೆ. ಇದುವರೆಗೆ ಒಟ್ಟು 139742 ಪ್ರಯೋಜನ ಪಡೆದ ವಿದ್ಯಾರ್ಥಿಗಳು, ಒಟ್ಟು ರೂ.64 ಕೋಟಿ ವಿತರಿಸಿದ ಮೊತ್ತವಾಗಿದೆ ಎಂದು ತಿಳಿಸಿದರು.
ಯೋಜನೆಯ ವಿವರ:
ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ ಯೋಜನೆಯಡಿ 2024-25ರ ಸಾಲಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ನೆರವು ನೀಡಲಾಗುತ್ತಿದೆ ಮತ್ತು ಯೋಜನೆಯನ್ನು ಎಲ್ಲಾ ಗ್ರಾಮೀಣ, ಅರೆ-ನಗರ ಮತ್ತು ನಗರ ಶಾಖೆಗಳಲ್ಲಿ ಜಾರಿಗೊಳಿಸಲಾಗಿದೆ.
5, 6, 7, 8, 9 ಮತ್ತು 10 ನೇ ತರಗತಿಯಿಂದ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಂದ ತಲಾ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿವೇತನಕ್ಕಾಗಿ ಆಯಾ ವ್ಯಾಪ್ತಿಯ ಶಾಖೆಗಳು ಕಾರ್ಯ ಮಾಡುತ್ತವೆ.
ವಿದ್ಯಾರ್ಥಿವೇತನದ ಸಹಾಯವು 5, 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಪ್ರತಿ ವಿದ್ಯಾರ್ಥಿಗೆ ರೂ.3 ಸಾವಿರ ಮತ್ತು 8ನೇ, 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ ರೂ.5 ಸಾವಿರ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ವೇದಾವತಿ, ಕೆನೆರಾ ಬ್ಯಾಂಕ್‌ನ ವ್ಯವಸ್ಥಾಪಕರು, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Share This Article
error: Content is protected !!
";