Ad image

ಬಾಣಂತಿಯರ ಆರೋಗ್ಯ ರಕ್ಷಣೆಗೆ ಮಾತೃವಂದನಾ ಯೋಜನೆ ಸಹಕಾರಿ. ಮಾತೃವಂದನಾ ಶಿಬಿರ ಉದ್ಘಾಟಿಸಿ ಸಿಡಿಪಿಒ ಅಧಿಕಾರಿ ಸಿಂಧು ಅಂಗಡಿ ಹೇಳಿಕೆ.

Vijayanagara Vani

ವಿಜಯನಗರ(ಹೊಸಪೇಟೆ), ಆ.09: ಬಾಣಂತಿಯರ ಆರೋಗ್ಯ ಕ್ಷೇಮಕ್ಕಾಗಿ, ನಿರಂತರ ತಪಾಸಣೆಗೆ ಪ್ರೋತ್ಸಾಹಿಸಿ ಕೇಂದ್ರ ಸರ್ಕಾರ ಮಾತೃವಂದನಾ ಯೋಜನೆಯನ್ನು ಮಹಿಳೆಯರಿಗೆ ಕೊಡುಗೆಯಾಗಿ ನೀಡಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ಹೇಳಿದರು.
ತಾಲೂಕಿನ ಹಳೇ ಮಲಪನಗುಡಿ ಅಂಗನವಾಡಿ 2ನೇ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಾತೃವಂದನಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಪ್ರಾಯೋಜಿತ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ. ನಗದು ಪ್ರೋತ್ಸಾಹ ಧನವಾಗಿ 5000 ರೂಗಳನ್ನು ನೀಡಲಾಗುತ್ತದೆ.
ಈ ಯೋಜನೆಯಡಿ ಈವರೆಗೆ 4 ಕೋಟಿಗೂ ಅಧಿಕ ಮಹಿಳೆಯರು ಮಾತೃ ವಂದನಾ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆ-ಮನೆ ಜಾಗೃತಿ ಮತ್ತು ದಾಖಲಾತಿ ಅಭಿಯಾನದ ಮೂಲಕ ಎಲ್ಲಾ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರನ್ನು ಗುರುತಿಸಿ ಈ ಯೋಜನೆಯಡಿಯಲ್ಲಿ ನೋಂದಣಿಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಬಾಣಂತಿಯರಿಗೆ ಪೌಷ್ಠಿಕ ಅಹಾರ ಕ್ರಮವನ್ನು ಅನುಸರಿಸಲು ಮತ್ತು ಆರೋಗ್ಯ ಕಾಳಜಿಗೆ ಮೊದಲನೇ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಲಿದ್ದಾರೆ. ಮಾತೃ ವಂದನಾ ಯೋಜನೆ ಆರ್ಥಿಕ ಸಹಾಯವನ್ನು ಒದಗಿಸುವ ಜತೆಗೆ ಮಹಿಳೆಯರ ಬಗೆಗಿನ ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸುತ್ತದೆ ಎಂದರು.
ಈ ವೇಳೆ ಮಲಪನಗುಡಿ ಗ್ರಾಮ ಪಂಚಾಯಿತಿ ಆಡಳಿತ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಕೆಮ್ಮೊರ್, ಅಂಗನಾಡಿ ಕಾರ್ಯಕರ್ತೆ ಮಲ್ಲಮ್ಮ, ಬಾಣಂತಿಯರು ಮತ್ತು ಅಂಗನವಾಡಿ ಮಕ್ಕಳು ಇದ್ದರು.

Share This Article
error: Content is protected !!
";