Ad image

ವಿಶ್ವ ಮೆದುಳಿನ ದಿನಾಚರಣೆ, ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ. ನರರೋಗ ತಜ್ಞ ಡಾ. ವೀರಣ್ಣ ಗಡಾದ್.

Vijayanagara Vani
ವಿಶ್ವ ಮೆದುಳಿನ ದಿನಾಚರಣೆ, ಪಾರ್ಶ್ವವಾಯು ತಡೆಗಟ್ಟಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ. ನರರೋಗ ತಜ್ಞ ಡಾ. ವೀರಣ್ಣ ಗಡಾದ್.
ದಾವಣಗೆರೆ.ಜುಲೈ. 22   ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಅನೇಕ ಜನರು ಜೀವನವಿಡಿ ಅಂಗವೈಕಲ್ಯತೆ ಹೊಂದಿದ್ದಾರೆ, ಇದನ್ನು ತಡೆಯಲು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಬ್ರೈನ್ ಹೆಲ್ತ್ ಕ್ಲಿನಿಕ್ ನ ನರರೋಗ ತಜ್ಞರಾದ ಡಾ. ವೀರಣ್ಣ ಗಡಾದ್ ತಿಳಿಸಿದರು.
ಅವರು ಸೋಮವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ ಇವರ ಸಹಯೋಗದೊಂದಿಗೆ ಆಯೋಜಿಸಲಾದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೆದುಳು ಆರೋಗ್ಯ ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳು ಆರೋಗ್ಯ ಉಪಕ್ರಮ ( ಬ್ರೈನ್ ಹೆಲ್ತ್ ಕ್ಲಿನಿಕ್ ) ಆರಂಭಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ
ನರ ರೋಗಗಳಿಗೆ ಸಂಬಂಧಿಸಿದಂತೆ ಪಾರ್ಶ್ವವಾಯು, ಮೂರ್ಚೆರೋಗ, ತಲೆನೋವು ಹಾಗೂ ಮರೆವಿನ ಕಾಯಿಲೆಗೆ ನರರೋಗ ತಜ್ಞರು ಚಿಕಿತ್ಸೆಯನ್ನು ನೀಡುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ನರರೋಗಗಳ ಕುರಿತಂತೆ ಸಾಮಾನ್ಯ ಜನರಲ್ಲಿ ಅನೇಕ ಭಾವನೆಗಳಿದ್ದು ಮೆದುಳು ಆರೋಗ್ಯ ಮತ್ತು ಅನಾರೋಗ್ಯದ ಕುರಿತು ಅರಿವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು ಜನರು ರೋಗಗಳ ಬಗ್ಗೆ ಮಾಹಿತಿಯನ್ನು ಪಡೆದು ಗುಣಮುಖರಾಗಬೇಕೆಂದು ತಿಳಿಸಿದರು.
ಅನೇಕ ಕಾಯಿಲೆಗಳಿಗೆ ಜನರು ಭಯಭೀತರಾಗಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ, ಇವರಿಗೆ ಆತ್ಮವಿಶ್ವಾಸ ಮತ್ತು ನುರಿತ ಸಮಾಲೋಚಕರಿಂದ ಆಪ್ತ ಸಮಾಲೋಚನೆಯನ್ನು ನೀಡಲಾಗುತ್ತದೆ. ಪಾರ್ಶ್ವ ವಾಯು ಕಾಯಿಲೆಗೆ ಸಂಬಂಧಪಟ್ಟ ಹಾಗೆ ಅನೇಕ ಜನರು ಫಿಜಿಯೋಥೆರಪಿ ಮಾಡಿಸಿಕೊಳ್ಳದೇ ಜೀವನವಿಡಿ ಅಂಗ ವೈಕಲ್ಯತೆಯಲ್ಲಿಯೇ ನರಳುತ್ತಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಫಿಜಿಯೋಥೆರಪಿ ಮಾಡಿಸಿಕೊಂಡಲ್ಲಿ ದೈಹಿಕ ಚಲನವಲನಗಳು ಸಹಜ ರೀತಿಗೆ ಬರುವ ಸಾಧ್ಯತೆಗಳಿದೆ.
ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ಅನೇಕ ಬದಲಾವಣೆ ಬೇಕಾಗಿರುತ್ತದೆ, ಈ ನಿಟ್ಟಿನಲ್ಲಿ ನರ್ಸಿಂಗ್ ಸಿಬ್ಬಂದಿ ಸೂಕ್ತ ಮಾಹಿತಿ ನೀಡುವರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ನಾಗೇಂದ್ರಪ್ಪ ಮಾತನಾಡಿ ವಿಶ್ವ ಮೆದುಳು ಆರೋಗ್ಯ ದಿನದಂದು ಮಾತ್ರ ನಾವು ನಮ್ಮ ಮೆದುಳಿನ ಆರೋಗ್ಯಕ್ಕೆ ಕ್ರಮ ವಹಿಸದೆ, ಪ್ರತಿನಿತ್ಯವೂ ಉತ್ತಮ ಜೀವನಶೈಲಿ ಹಾಗೂ ಒತ್ತಡ ನಿಭಾಯಿಸುವ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನರರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಗುರುತಿಸಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ಬ್ರೈನ್ ಕ್ಲಿನಿಕ್ ಗೆ ರೋಗಿಗಳನ್ನು ಶಿಫಾರಸು ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿಗಳು, ನಿವಾಸಿ ವೈದ್ಯಾಧಿಕಾರಿ ಡಾ. ನಾಗವೇಣಿ, ಸಂಯೋಜಕ ಡಾ.ಸುನಿಲ್ ಕುಮಾರ್ ಎನ್, ಬ್ರೈನ್ ಹೆಲ್ತ್ ಕ್ಲಿನಿಕ್ ಸಂಯೋಜಕರು, ಜೆಜೆ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರೆ ವೈದ್ಯಕೀಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಆಪ್ತ ಸಮಾಲೋಚಕರಾದ ಸ್ಪೂರ್ತಿ‌. ಸಿ ಸ್ವಾಗತಿಸಿದರು, ಸುಷ್ಮಾ.ಬಿ ನಿರೂಪಿಸಿದರು. ಲತಾ. ಟಿ ವಂದಿಸಿದರು.

Share This Article
error: Content is protected !!
";