ವಿಜಯನಗರ(ಹೊಸಪೇಟೆ), ಜು.3: ಜಿಲ್ಲೆಯಲ್ಲಿರುವ ನೀರಾವರಿ ಪ್ರದೇಶಗಳಲ್ಲಿನ ನೀರಿನಾಸರೆಗಳ ಗಣತಿ ಕಾರ್ಯವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಸೂಕ್ತ ಅಂಕಿಅಂಶಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಖ್ಯಿಕ ವಿಭಾಗ ಮತ್ತು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು, ಜಲಸಂಪನ್ಮೂಲ ಇಲಾಖೆಯ ಶೇ.100 ರಷ್ಟು ಕೇಂದ್ರ ಸುರಕ್ಷಿತ ಸಣ್ಣ ನೀರಾವರಿ ಅಂಕಿ-ಅಂಶಗಳ ಸಮನ್ವಯೀಕರಣ ಯೋಜನೆಯಡಿಯಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಗಣತಿ ಕಾರ್ಯ ಮಾಡುವ ಮೇಲ್ವಿಚಾರಕರಿಗೆ ಮತ್ತು ತಾಲೂಕು ಮಟ್ಟದಲ್ಲಿ ಗಣತಿ ಕಾರ್ಯ ಕೈಗೊಳ್ಳುವ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಗಣತಿ ಕಾರ್ಯ ವಿಧಾನದ ಕುರಿತು ಸೂಕ್ತ ತರಬೇತಿ ಹೊಂದಬೇಕಿದೆ. ಕಂದಾಯ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯತೆಯಿಂದ ಗಣತಿ ಕ್ಷೇತ್ರ ಕಾರ್ಯ ಕೈಗೊಳ್ಳಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪತ್ರಿಬಸಪ್ಪ ಅವರು ಮಾತನಾಡಿ, ಪ್ರಸ್ತುತ 2023-24ನೇ ವರ್ಷವನ್ನು ಆಧರಿಸಿ 7ನೇ ಸಣ್ಣ ನೀರಾವರಿ ಹಾಗೂ 2ನೇ ನೀರಿನಾಸರೆಗಳ ಗಣತಿಯನ್ನು ಡಿಜಿಟಲ್ ಮೋಡ್‌ನೊಂದಿಗೆ ಪ್ರಥಮ ಬಾರಿಗೆ ಮೊಬೈಲ್ ಆಪ್ ಬಳಸಿ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಗಣತಿ ಕಾರ್ಯಕ್ಕೆ ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ತರಬೇತಿ ಏರ್ಪಡಿಸಲಾಗುವುದು. ಅಂತರ್ಜಲ ಯೋಜನೆಗಳು ಹಾಗೂ ಮೇಲ್ಮೈಜಲ ಯೋಜನೆಗಳು ಎಂದು ವರ್ಗೀಕರಿಸಲಾಗಿದೆ. 40 ಹೆಕ್ಟೇರ್‌ವರೆಗಿನ ಅಚ್ಚುಕಟ್ಟು ಇರುವ ಯೋಜನೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿರುತ್ತದೆ. 40 ಹೆಕ್ಟೇರ್‌ಗಳಿಗೆ ಮೇಲಿನ 2 ಸಾವಿರ ಹೆಕ್ಟೇರ್‌ವರೆಗಿನ ಅಚ್ಚುಕಟ್ಟು ಇರುವ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತವೆ. 2 ಸಾವಿರ ಹೆಕ್ಟೇರ್‌ಗಳಿಗೆ ಮೇಲಿನ ಅಚ್ಚುಕಟ್ಟು ಇರುವ ಯೋಜನೆಗಳು ಬೃಹತ್ ನೀರಾವರಿ ಇಲಾಖೆಯ ಅಧೀನದಲ್ಲಿರುತ್ತವೆ. ಅಂತರ್ಜಲ ಯೋಜನೆಗಳನ್ನು 4 ವಿಧಗಳಾಗಿ ಅಗೆದ ಬಾವಿ, ಆಳವಲ್ಲದ ಕೊಳವೆ ಬಾವಿ, ಮಧ್ಯಮ ಆಳದ ಕೊಳವೆ ಬಾವಿ ಮತ್ತು ಆಳದ ಕೊಳವೆ ಬಾವಿಗಳಾಗಿ ವರ್ಗಿಕರಿಸಲಾಗಿದೆ. ಹಾಗೂ ನೀರಿನಾಸರೆಯ ವಿಧಗಳು, ಹೊಂಡಗಳು, ಸರೋವರಗಳು, ಕೆರೆಗಳ, ಜಲಾಶಯಗಳು, ಜಲಸಂರಕ್ಷಣಾ ಯೋಜನೆಗಳಾಗಿವೆ ಎಂದರು.
ಜಿಪಂ ಮುಖ್ಯಯೋಜನಾಧಿಕಾರಿ ಅನ್ನದಾನ ಸ್ವಾಮಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸರ್ಮಪಕವಾಗಿ ಅನುಷ್ಠಾನಗೊಳಿಸಲು ಅಂಕಿ ಅಂಶಗಳು ಬಹಳ ಮುಖ್ಯ. ಆಯಾ ಇಲಾಖೆಯ ಅಧಿನಿಯಮದಲ್ಲಿರುವ ಕೆರೆಗಳ ಮಾಹಿತಿಯನ್ನು ಆಯಾ ತಾಲೂಕಿನ ತಹಶೀಲ್ದಾರರಿಗೆ ನೀಡಬೇಕು. ಅವರು ಗ್ರಾಮ ಆಡಳಿತಾಧಿಕಾರಿ ಮೊಬೈಲ್‌ನಲ್ಲಿ ಅಳವಡಿಸಲು ಅನುಕೂಲ ಮಾಡುತ್ತಾರೆ. ಜೆಸ್ಕಾಂರವರು ಕೃಷಿಗಳಲ್ಲಿ ನೀರಿನ ಮೀಟರ್ ಬೋರ್ಡ್ಗಳು ಎಷ್ಟು ಅಳವಡಿಸಿದ್ದಾರೆ ಎಂದು ಅದರ ಮಾಹಿತಿಯನ್ನು ನೀಡಿದರೆ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಕಾರ್ಯವನ್ನು ಬಹಳ ಬೇಗ ಬಗೆಹರಿಸಬಹುದು ಎಂದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಆರ್.ವೆಂಕಟೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.