ಕರ್ನಾಟಕ ಸರ್ಕಾರಿ ನೌಕರರು, ನಿವೃತ್ತ ನೌಕರರ ಮಹತ್ವದ ಬೇಡಿಕೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ. ಆದರೆ ಈ ಕುರಿತು ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.
2024ರ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿಯನ್ನು ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದೆ. ರಾಜ್ಯದ 7ನೇ ವೇತನ ಆಯೋಗವು ವರದಿಯಲ್ಲಿ ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ.
ಲೋಕಸಭೆ ಸೇರಿದಂತೆ ವಿವಿಧ ಚುನಾವಣಾ ಮಾದರಿ ನೀತಿ ಸಂಹಿತೆಯ ಕಾರಣಕ್ಕೆ ವರದಿ ಜಾರಿ ತಡವಾಗಿದೆ. ಈ ಹಿಂದೆ ನಡೆದ ಎರಡು ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತು ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗ್ರಹ ಮಾಡಿದ್ದಾರೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ವರದಿಯನ್ನು ಏಪ್ರಿಲ್ 2024ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕಿದೆ. ಆದ್ದರಿಂದ ಸರ್ಕಾರಕ್ಕೆ 2800 ಕೋಟಿ ಹೆಚ್ಚುವರಿ ಹೊಣೆಯಾಗಲಿದೆ. ಪಿಎಫ್ ವಂತಿಗೆ ಮೊತ್ತ 530.45 ಕೋಟಿ, ಮರಣ, ನಿವೃತ್ತಿ ಉಪದಾನ 1083 ಕೋಟಿ ರೂ. ಆಗಲಿದೆ. ಆದ್ದರಿಂದ ಸರ್ಕಾರ ಆಯೋಗದ ವರದಿ ಶಿಫಾರಸು ಜಾರಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕಿದೆ. ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರು ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾತನಾಡಿ, “7ನೇ ವೇತನ ಆಯೋಗದ ವರದಿ ಜಾರಿ ಬೇಡಿಕೆ ಮುಂದಿಡಲಾಗಿದೆ. ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇಲ್ಲವಾದರೆ ಜುಲೈ 7ರಂದು ನೌಕರರ ಸಂಘದ ಕಾರ್ಯಕಾರಣಿ ಸಭೆ ಕರೆದಿದ್ದು, ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ವಿಷಯ ಪ್ರಸ್ತಾಪವಾಯಿತು. ಅನೌಪಚಾರಿಕವಾಗಿ ನಡೆದ ಚರ್ಚೆಯಲ್ಲಿ ಸಚಿವರು ಬೇರೆ-ಬೇರೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲವನ್ನೂ ಆಲಿಸಿದರು. ವರದಿಯನ್ನು ಯಥಾವತ್ ಜಾರಿಗೊಳಿಸಲು ಸಚಿವರ ಅಪಸ್ವರವಿದೆ. ಮುಖ್ಯಮಂತ್ರಿಗಳು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಿದ್ದಾರೆ. ಇಲಾಖೆ ವರದಿಯನ್ನು ಹೇಗೆ ಜಾರಿಗೊಳಿಸಬೇಕು? ಎಂದು ರೂಪುರೇಷೆ ರೂಪಿಸುತ್ತಿದೆ. ಇದರ ಅನ್ವಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.