ಕಾಯಕ ಪರಂಪರೆಗೆ ಶಕ್ತಿ ನೀಡಿದವರು ಶ್ರೀ ನುಲಿಯ ಚಂದಯ್ಯನವರು : ಚನ್ನಬಸಪ್ಪ

Vijayanagara Vani
ಕಾಯಕ ಪರಂಪರೆಗೆ ಶಕ್ತಿ ನೀಡಿದವರು ಶ್ರೀ ನುಲಿಯ ಚಂದಯ್ಯನವರು : ಚನ್ನಬಸಪ್ಪ
ಶಿವಮೊಗ್ಗ,
ಕಾಯಕವೇ ಶ್ರೇಷ್ಟವೆಂದು ಕಾಯಕ ಪರಂಪರೆಗೆ ಶಕ್ತಿ ನೀಡಿದ ಶ್ರೀ ನುಲಿಯ ಚಂದಯ್ಯನವರ ವಚನಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ ಹಾಗೂ ಕೊರಚ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮoದಿರದಲ್ಲಿ ಏರ್ಪಡಿಸಲಾಗಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
48 ಕ್ಕೂ ಹೆಚ್ಚು ವಚನಗಳನ್ನು ನೀಡಿದ ಚೇತನ ಇವರು. ಇವರ ಚಿಂತನೆಗಳು ಸಮಾಜದಲ್ಲಿ ಮುಂದೆ ಸಾಗಬೇಕು. ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ನುಲಿಯ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಮಾಡುವ ಮೂಲಕ ಅವರ ಯೋಚನೆಯನ್ನು ಮುನ್ನಡೆಸಬೇಕು. ಹುಟ್ಟಿನಿಂದಲೂ ಹಗ್ಗ ಮಾಡುವ ಕೆಲಸ ಮಾಡುತ್ತಿದ ಅವರು ಶೂನ್ಯ ಸಂಪಾದನೆಯಲ್ಲಿ ಕಾಯಕ ಯೋಗ ಮುನ್ನಡೆಸಿದರು. ಇವರ ಸಾಧನೆಯು ನಮ್ಮೆಲ್ಲರಿಗೆ ಮಾದರಿಯಾಗಿದ್ದು ಅವರ ವಚನಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಬಸವಾದಿ ಶರಣದಾರ ನುಲಿಯ ಚಂದಯ್ಯನವರು ತಮ್ಮ ಕಾಯಕದಿಂದ ಹೆಸರಾದವರು. ದುಡಿದು ತಿನ್ನಬೇಕು ಎನ್ನುತ್ತಿದ್ದ ಇವರು ತಮ್ಮ ದುಡಿಮೆಯ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಇಂತಹ ಮಹಾನುಭಾವರ ಸಂದೇಶಗಳನ್ನು ನಾವೆಲ್ಲ ಎಲ್ಲೆಡೆ ಪ್ರಚಾರ ಮಾಡಬೇಕು ಎಂದ ಅವರು ರಾಜ್ಯ ಸರ್ಕಾರ ಬಡವರು, ಹಿಂದುಳಿದ ವರ್ಗಗಳ ಏಳ್ಗೆಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅರ್ಹರೆಲ್ಲ ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಬೇಕೆಂದರು.
ಶಿವಮೊಗ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ರವೀಂದ್ರಕುಮಾರ್ ಕೆ ಆರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನುಲಿಯ ಚಂದಯ್ಯನವರು ಕಾಯಕಯೋಗಿ ಬಸವಣ್ಣನವರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಅನುಭವ ಮಂಟಪಕ್ಕೆ ಸೇರುತ್ತಾರೆ. ಹುಲ್ಲು ತಂದು ಹಗ್ಗ ಹೊಸೆದು ಮಾರಿ ಬಂದ ಹಣದಲ್ಲಿ ಜಂಗಮ ದಾಸೋಹ ಮಾಡುತ್ತಿದ್ದರು. ಮಡಿವಾಳ ಮಾಚಯ್ಯ, ಚನ್ನಬಸವಣ್ಣ, ಅಕ್ಕ ನಾಗಮ್ಮ ಹೀಗೆ ಹಲವಾರು ಶರಣರೊಂದಿಗೆ ಕಾಯಕದಲ್ಲಿ ನಿರತರಾಗಿ ಲಿಂಗಧಾರಣೆ ಮಾಡಿ, ಸಹ್ಯಾಹಾರಿಗಳಾಗಿ ತಮ್ಮ ಕಾಯಕ ಹಾಗೂ ಜಂಗಮ ದಾಸೋಹದಲ್ಲಿ ತೊಡಗುತ್ತಾರೆ. ಕಲ್ಯಾಣ ಕ್ರಾಂತಿಯ ವೇಳೆ ಶರಣರ ವಚನಗಳನ್ನು ಸುಟ್ಟು ಹಾಕಲಾಗುತ್ತದೆ. ಆಗ ನುಲಿಯ ಚಂದಯ್ಯನವರು ಕಲ್ಯಾಣ ತ್ಯಜಿಸಿ ಎಣ್ಣೆಹೊಳೆ ನಂತರ ನಂದಿಗ್ರಾಮಕ್ಕೆ ಬಂದು ತಮ್ಮ ವಚನಗಳ ಮೂಲಕ ಶರಣ ತತ್ವವನ್ನು ಸಾರುತ್ತಾರೆ. ತದನಂತರ ನುಲೇನೂರಿನಲ್ಲಿ ಐಕ್ಯವಾಗುತ್ತಾರೆ ಎಂದು ತಿಳಿಸಿದರು
ಶಿವಮೊಗ್ಗ ತಾಲ್ಲೂಕು ತಹಶೀಲ್ದಾರರಾದ ಗಿರೀಶ್ ಮಾತನಾಡಿ, ಶರಣರು ರಚಿಸಿರುವ, ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥ ಆಗುವ ವಚನಗಳಲ್ಲಿರುವ ಸಾರವನ್ನು ನಾವೆಲ್ಲವರೂ ಅಳವಡಿಸಿಕೊಳ್ಳಬೇಕು. ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆ ಮನೆಗಳಲ್ಲಿ ದಿನಕ್ಕೆ ಒಂದಾದರೂ ವಚನಗಳನ್ನು ಓದುವಂತಾಗಬೇಕು. ವಚನಗಳು ಶರಣರ ಜೀವಾನುಭವವನ್ನು ತಿಳಿಸುತ್ತದೆ. ಕಾಯಕದ ಮಹತ್ವವನ್ನು ಸಾರುತ್ತದೆ. ಇಂತಹ ಮಹಾನುಭಾವರ ಜಯಂತಿಯoದು ಎಲ್ಲ ಸಮುದಾಯವರು ಒಟ್ಟಿಗೆ ಸೇರಿ ಜಯಂತಿಯನ್ನು ಆಚರಿಸಬೇಕು ಹಾಗೂ ಅವರ ಕೆಲವಾದರೂ ತತ್ವಗಳನ್ನು ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಕೊರಮ ಜನಾಂಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪಕೀರಪ್ಪ ಭಜಂತಿ ಮಾತನಾಡಿ, ನೂಲು ಹುಣ್ಣಿಮೆಯ ಪವಿತ್ರ ದಿನದಂದು ಶರಣ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆ.ಕಾಯಕದ ಮುಂದೆ ಏನೂ ಇಲ್ಲ. ಕಾಯಕವೇ ಶ್ರೇಷ್ಟವೆಂದು ಪ್ರತಿಪಾದಿಸಿದವರು ನುಲಿಯ ಚಂದಯ್ಯನವರು. ಇಂತಹ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬರಬೇಕು. ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಇನ್ನು ಮುಂದೆ ಸಂಘಟಿತರಾಗಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆಂದು ಆಶಿಸಿದರು.
ಜಿಲ್ಲಾ ಕೊರಚರ ಮಹಾಸಂಘದ ಅಧ್ಯಕ್ಷ ಶ್ರೀನಿವಾಸ್ ಜಿ ಮಾತನಾಡಿ, ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಶುಭ ಕೋರಿ, ಸೆ.18 ರಂದು ನಗರ ಅಂಬೇಡ್ಕರ್ ಭವನದಲ್ಲಿ ಸಂಘದ ವತಿಯಿಮದ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಬಂದು ಯಶಸ್ವಿಗೊಳಿಸಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.
WhatsApp Group Join Now
Telegram Group Join Now
Share This Article
error: Content is protected !!