Ad image

ಬಾಲ್ಯವಿವಾಹ ನಿಷೇಧ: ಹನುಮನಾಳದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪುನರ್ ಮನನ ತರಬೇತಿ

Vijayanagara Vani
ಬಾಲ್ಯವಿವಾಹ ನಿಷೇಧ: ಹನುಮನಾಳದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪುನರ್ ಮನನ ತರಬೇತಿ
ಕೊಪ್ಪಳ ಜೂನ್ 21 : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಟಗಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ಬಾಲ್ಯವಿವಾಹ ನಿಷೇಧ” ಕುರಿತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪುನರ್ ಮನನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಬಾಲ್ಯವಿವಾಹ ನಮ್ಮ ಸಮಾಜದ ಒಂದು ಪಿಡುಗು ಇದರ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಿ ಯುವಪಿಳಿಗೆಗೆ ಮತ್ತು ಪಾಲಕರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹ ಎಂದರೆ ಯಾವುದೇ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಅಥವಾ 21 ವರ್ಷದೊಳಗಿನ ಗಂಡುಮಕ್ಕಳಿಗೆ ಮದುವೆ ಮಾಡುವುದಕ್ಕೆ ಬಾಲ್ಯವಿವಾಹ ಎಂದೆನಿಸಿಕೊಳ್ಳುತ್ತದೆ. ಬಾಲ್ಯವಿವಾಹಕ್ಕೆ ಕಾರಣಗಳೆಂದರೆ ಬಡತನ, ಅನಕ್ಷರತೆ, ಮೂಡನಂಬಿಕೆ, ಬಾಲ್ಯವಿವಾಹದ ದುಷ್ಪರಿಣಾದ ಬಗ್ಗೆ ಅರಿವು ಇಲ್ಲದೇ ಇರುವುದು, ರಕ್ತ ಸಂಬಂಧವನ್ನು ಉಳಿಸಿಕೊಳ್ಳುವುದು, ಕುಟುಂಬ ಆಸ್ತಿಯನ್ನು ಉಳಿಸಿಕೊಳ್ಳುವುದು, ಪಾಲಕರು ಮದುವೆ ಮಾಡಿ ಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಸಾಮೂಹಿಕ ವಿವಾಹದಲ್ಲಿ ಕಡಿಮೆ ಖರ್ಚು ಆಗುತ್ತದೆ ಎಂಬ ಬಾವನೆ, ವೃದ್ಧರು ಹಾಗೂ ಅನಾರೋಗ್ಯದ ಹಿರಿಯರ ಆಸೆ ಈಡೆರಿಸುವ ಉದ್ದೇಶದಿಂದ ಬಾಲ್ಯವಿವಾಹ ಮಾಡುತ್ತಾರೆ. ಬಾಲ್ಯವಿವಾಹ ಮಾಡುವುದರಿಂದ ಆರೋಗ್ಯ ಮತ್ತು ಸಮಾಜದ ಮೇಲೆ ದುಷ್ಪಪರಿಣಾಮ ಬಿರುತ್ತದೆ. ಬಾಲ್ಯವಿವಾಹ ಮಾಡುವುದರಿಂದ ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ ಎಂದರು.
ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ವಿಕಲಾಂಗ ಮಕ್ಕಳ ಜನನ ಉಂಟಾಗುತ್ತದೆ. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ.ವಿ/ಏಡ್ಸ್ ರೋಗಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ ಹಾಗೂ ರಕ್ತಹೀನತೆ ಉಂಟಾಗುತ್ತದೆ ಮತ್ತು ಕಡಿಮೆ ತೂಕದ ಮಗುವಿನ ಜನನವಾಗುವ ಸಾಧ್ಯತೆ ಇರುತ್ತದೆ. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಎಲ್ಲಾ ಗ್ರಾಮಗಳಲ್ಲಿ ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ತಮ್ಮ ಕಾರ್ಯಕ್ಷೇತ್ರಗಳಲ್ಲಿ ಬಾಲ್ಯವಿವಾಹ ನಿಷೇಧ ಕುರಿತು, ನಿರಂತರವಾಗಿ ಮನೆ ಭೇಟಿನೀಡಿದಾಗ ಪಾಲಕರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಬಾಲ್ಯವಿವಾಹ ಮಾಡುವುದು ಶಿಕ್ಷಾರ್ಯ ಅಪರಾಧವಾಗಿದೆ. ಇದನ್ನು ಮಾಡುವವರಿಗೆ ಮತ್ತು ಮಾಡಿಸುವವರಿಗೆ ದಂಡ ಮತ್ತು ಜೈಲುವಾಸ ಮತ್ತು 1ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀದೇವಿ ವಸ್ತçದ ಅವರು ಮಳೆಗಾಲದಲ್ಲಿ ಸೋಂಕಿತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ, ಮೆದುಳುಜ್ವರ, ಆನೆಕಾಲುರೋಗ ಹರಡದಂತೆ ಜಾಗೃತಿವಹಿಸಲು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ ಮೇಟಿ ಅವರು, ತಾಯಿ ಮಕ್ಕಳ ಆರೋಗ್ಯ ರಕ್ಷಣೆ, ಕ್ಷಯರೋಗ ನಿರ್ಮೂಲನೆ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮಗಳ ಕುರಿತು ವಿವರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಯ್ಯ ಕಂಠಿಮಠ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಎಸ್ ಗೌಡರ್, ಆರೋಗ್ಯ ಇಲಾಖೆಯ ಸಿಬ್ಬಂದಿ ದಂಜಪ್ಪ ರಾಠೋಡ್, ರಂಗಮ್ಮ, ಶಾರದ, ಮಂಗಳಗೌರಿ, ಮಂಜುಳಾ, ಭೀಮಮ್ಮ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಹಾಗೂ ಆಶಾ/ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Share This Article
error: Content is protected !!
";