ಬಳ್ಳಾರಿ,ಜೂ.24
ಕುರುಗೋಡು ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರು ಮತ್ತು ನರ್ಸರಿ ಮಾಲೀಕರು ಉತ್ತಮ ಬೆಳೆಗಳನ್ನು ಪಡೆಯಲು ಸೂಕ್ತ ಕ್ರಮ ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ಉಪನಿರ್ದೇಶಕರಾದ ರತ್ನಪ್ರಿಯ ಯರಗಲ್ಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನರ್ಸರಿ ಮಾಲೀಕರು ತಮ್ಮ ನರ್ಸರಿ ಚಟುವಟಿಕೆಗಳನ್ನು ನಿಯಮ ಬದ್ಧಗೊಳಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ಸಸಿಗೆ ಕಡ್ಡಾಯವಾಗಿ ರೂ.40 ಪೈಸೆ ದರದಲ್ಲಿ ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.
ರೈತರಿಗೆ ಉತ್ತಮ ಗುಣಮಟ್ಟ ಸಸಿಗಳನ್ನು ನೀಡಲು ಅಳವಡಿಸಿಕೊಳ್ಳಬೇಕಾದ ವೈಜ್ಞಾನಿಕ ನರ್ಸರಿ ಕ್ರಮಗಳಾದ ಕೋಕೋಪಿಟ್ ಬಳಕೆ, ತರಕಾರಿ ನರ್ಸರಿಗಳಲ್ಲಿ ಕೀಟ ನಿರೋಧಕ ಭಲೆಗಳ ಬಳಕೆಯ ಬಗ್ಗೆ ಹಾಗೂ ಬಿಜೋಪಚಾರ ಕಟ್ಟುನಿಟ್ಟಾಗಿ ಮಾಡಬೇಕು ಎಂದು ತಿಳಿಸಿದ್ದಾರೆ.
ಮೆಣಸಿನಕಾಯಿ ಬೆಳೆಗಾರರು ಕಡ್ಡಾಯವಾಗಿ ನರ್ಸರಿ ಮೆಣಸಿನಕಾಯಿ ಸಸಿಗಳನ್ನು ಜಿಎಸ್ಟಿ ನೋಂದಣಿ ಹೊಂದಿರುವ ನರ್ಸರಿಗಳಿಂದಲೇ ಖರೀದಿಸಬೇಕು. ಬಿಲ್ನ್ನು ಪಹಣಿಯಲ್ಲಿರುವ ರೈತನ ಹೆಸರಿಗೆ ನೀಡಬೇಕು. ರೈತರು ಪಡೆದಂತಹ ಬಿಲ್ನ್ನು ಬೆಳೆ ಮಾರಾಟ ಆಗುವವರೆಗೂ ಭದ್ರವಾಗಿಟ್ಟುಕೊಳ್ಳಬೇಕು.
ನರ್ಸರಿ ಮಾಲೀಕರು ತಾವು ಉಪಯೋಗಿಸುವ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ವಿವರ ಕಡ್ಡಾಯವಾಗಿ ವಹಿಯಲ್ಲಿ ನಮೂದಿಸಬೇಕು. ರೈತರಿಂದ ಬೀಜ ಪಡೆದಿರುವ ಮತ್ತು ಸಸಿ ವಿತರಿಸಿದ ದಿನಾಂಕಗಳ ವಹಿ ತಪ್ಪದೇ ನಿರ್ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.