Ad image

ದಾವಣಗೆರೆ ಜಿಲ್ಲೆಯ ರೂ.1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಸಿಎಂ ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲ- ಅಭಿವೃದ್ಧಿ ಅನುದಾನವೂ ಹೆಚ್ಚಾಗಿದೆ, ಗ್ಯಾರಂಟಿಯಿಂದ ಅಭಿವೃದ್ದಿ ನಿಂತಿಲ್ಲ: ಸಿ.ಎಂ ಸಿದ್ದರಾಮಯ್ಯ

Vijayanagara Vani
ದಾವಣಗೆರೆ ಜಿಲ್ಲೆಯ ರೂ.1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಸಿಎಂ ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲ- ಅಭಿವೃದ್ಧಿ ಅನುದಾನವೂ ಹೆಚ್ಚಾಗಿದೆ, ಗ್ಯಾರಂಟಿಯಿಂದ ಅಭಿವೃದ್ದಿ ನಿಂತಿಲ್ಲ: ಸಿ.ಎಂ ಸಿದ್ದರಾಮಯ್ಯ
ದಾವಣಗೆರೆ,ಜೂನ್.16: ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ವಿರೋಧ ಪಕ್ಷದ ಹಸಿ ಸುಳ್ಳುಗಳಿಗೆ ತಕ್ಕ ಉತ್ತರ ನೀಡುವ ರೀತಿಯಲ್ಲಿ ಒಂದೇ ದಿನ ದಾವಣಗೆರೆ ಜಿಲ್ಲೆಯ 1350 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಲಾಗಿದೆÉ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಅವರು ಸೋಮವಾರ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಜಿಲ್ಲೆಯ ರೂ.1350 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಹಲವು ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ದಾವಣಗೆರೆಯಲ್ಲಿ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರ 95 ನೇ ಜನ್ಮ ದಿನಾಚರಣೆ ಮತ್ತು ಅವರದೇ ಆದ ಆಧುನಿಕ ತಂತ್ರಜ್ಞಾನವುಳ್ಳ ತೊಗರಿ, ಕಡ್ಲೆಬೇಳೆ ಮಾಡುವ ಮಿಲ್ಗಳ ಉದ್ಘಾಟನೆಯ ಜೊತೆಗೆ ಸರ್ಕಾರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಹವಾಮಾನ ವೈಪರಿತ್ಯದಿಂದ ಹೆಲಿಕ್ಯಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಹೆಚ್ಚಿನ ಸಮಯ ತೆಗೆದುಕೊಂಡರೂ ಈ ಮೂರು ಕಾರ್ಯಕ್ರಮಕ್ಕೆ ಬರಲೇಬೇಕೆಂದು ಆಗಮಿಸಲಾಗಿದೆ ಎಂದರು.
ಸರ್ಕಾರದ ಬಳಿ ಹಣ ಇಲ್ಲ ಎನ್ನುವವರ ಕುರುಡು ಕಣ್ಣುಗಳಿಗೆ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಮನೆ ಬಾಗಿಲಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ತಲುಪುತ್ತಿವೆ. ನಮ್ಮ ಬಳಿ ಹಣ ಇಲ್ಲದೇ ಹೋಗಿದ್ದರೆ ಒಂದೇ ದಿನ 1350 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು.
ನಾವು ಗ್ಯಾರಂಟಿಗಳನ್ನು ಘೋಷಿಸಿದಾಗ ವಿರೋಧ ಪಕ್ಷದವರು “ಗ್ಯಾರಂಟಿಗಳು ಜಾರಿಯೇ ಆಗುವುದಿಲ್ಲ” ಎಂದು ಹಸಿ ಸುಳ್ಳು ಹೇಳಿದ್ದರು. ಈಗ ಐದೂ ಗ್ಯಾರಂಟಿಗಳೂ ಜಾರಿ ಆಗಿವೆ. ಟೀಕೆ ಮಾಡುವವರು ಕೂಡ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ ಎಂದರು.
ರಾಜ್ಯದ ಬಜೆಟ್ ಗಾತ್ರ ಹೆಚ್ಚಾಗಿರುವುದು ಮಾತ್ರವಲ್ಲದೆ, ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ರಾಜ್ಯದ ಆರ್ಥಿಕತೆ ಏರುಮುಖದಲ್ಲಿ, ಪ್ರಗತಿ ಪಥದಲ್ಲಿ ಇರುವುದಕ್ಕೆ ಸಾಕ್ಷಿ, 2024-25 ನೇ ಸಾಲಿನ ಬಜೆಟ್ ರೂ.3.71 ಲಕ್ಷ ಕೋಟಿ ಇದ್ದರೆ, ಇದು 2025-26 ರಲ್ಲಿ 4.09 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮತ್ತು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಟಾನದ ಜೊತೆಗೆ ಹಿಂದಿನ ವರ್ಷ ಆಸ್ತಿ ಸೃಜನೆಗಾಗಿ ರೂ.51 ಸಾವಿರ ಕೋಟಿ ಮತ್ತು ಈ ವರ್ಷ 83 ಸಾವಿರ ಕೋಟಿಗೆ ಏರಿಕೆಯಾಗಿದೆ ಎಂದರು.
15 ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರೂ.11495 ಕೋಟಿ ರಾಜ್ಯಕ್ಕೆ ಬರಬೇಕಾಗಿತ್ತು. ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿವರ್ತಿಸಿ ಇದಕ್ಕಾಗಿ ರೂ.5300 ಕೋಟಿ ನೀಡಲಾಗುತ್ತದೆ ಎಂದು ಕೇಂದ್ರ ಬಜೆಟ್ನಲ್ಲಿ ತಿಳಿಸಿದ್ದರೂ ಯಾವುದೇ ಅನುದಾನ ನೀಡಿಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ನೀಡಿದಂತೆ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಅನೇಕ ವರ್ಷಗಳಿಂದ ವಾಸವಾಗಿದ್ದರೂ ಯಾವುದೇ ದಾಖಲೆ ಇಲ್ಲದಿರುವುದನ್ನು ಗಮನಿಸಿ ಬಡವರಿಗಾಗಿ ಏನನ್ನಾದರೂ ಮಾಡಬೇಕೆಂಬ ಸರ್ಕಾರದ ಆಶಯದಂತೆ ಭೂ ಗ್ಯಾರಂಟಿಯಡಿ ದಾಖಲೆಗಳನ್ನು ನೀಡಲಾಗಿದೆ. ಚುನಾವಣಾ ಸಂದರ್ಭದಲ್ಲಿ 593 ಭರವಸೆಗಳನ್ನು ನೀಡಿದ್ದು 242 ಈಡೇರಿಸಲಾಗಿದೆ. ಉಳಿದವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಈಡೇರಿಸಲಾಗುತ್ತದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಒಂದೇ ದಿನ ಪೌರ ಕಾರ್ಮಿಕ ವರ್ಗಕ್ಕೆ 1892 ಮನೆಗಳನ್ನು ವಿತರಿಸಿದ್ದೇವೆ ಮತ್ತು 14 ಇಂದಿರಾ ಕ್ಯಾಂಟಿನ್ ನೀಡಲಾಗಿದೆ ಎಂದರು.
ಸಮಾಜದ ಎಲ್ಲಾ ಜಾತಿ, ವರ್ಗ ಮತ್ತು ಸಮುದಾಯಗಳಿಗೆ ಆರ್ಥಿಕ ಶಕ್ತಿ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಾವು ಸಾಮಾಜಿಕ ನ್ಯಾಯದ ಕಾರ್ಯಗಳನ್ನು ಜಾರಿಗೊಳಿಸುತ್ತಾ ಸಮ ಸಮಾಜದ ಆಶಯವನ್ನು ಈಡೇರಿಸುತ್ತಿದ್ದೇವೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ದೀಪ ಮಾತನಾಡುವುದಿಲ್ಲ, ಆದರೆ ಬೆಳಕನ್ನು ಪರಿಚಯಿಸುತ್ತದೆ. ಅದರಂತೆ ಕರ್ನಾಟಕ ಜನತೆಯ ಆಶೀರ್ವಾದದಿಂದ ಸರ್ಕಾರ ರಚನೆ ಮಾಡಿ ರಾಜ್ಯದ ಎಲ್ಲಾ ವರ್ಗ, ಎಲ್ಲಾ ಸಮಾಜದವರಿಗೆ ಪಂಚ ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಅಲ್ಲದೇ ಹಲವಾರು ವರ್ಷಗಳಿಂದ ಯಾವುದೇ ರೀತಿಯ ನೆಲೆಯಿಲ್ಲದೇ ಬದುಕುತ್ತಿರುವ ಹಟ್ಟಿ, ತಾಂಡ, ಇನ್ನಿತರೆ ವಲಯಗಳಲ್ಲಿ ಬದುಕುತ್ತಿರುವವರುಗೆ ಹಕ್ಕುಪತ್ರಗಳನ್ನು ನೀಡುವ ಮೂಲಕ ಸಾರ್ವಜನಿಕರ ಜೀವನ ಹಸನಾಗಿಸಿದೆ ಎಂದರು.
ನಮ್ಮ ಪಕ್ಷದ ಸರ್ಕಾರ ಬಡವರ, ದೀನ ದಲಿತರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಲೇ ಬಂದಿದೆ. ಅದಕ್ಕೆ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ. ಅಧಿಕಾರ ಶಾಶ್ವತವಲ್ಲ, ಸಮಾಜದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಷ್ಟೇ ಶಾಶ್ವತ. ಹಾಗಾಗಿ ಕಂದಾಯ, ಲೋಕೋಪಯೋಗಿ, ಶಿಕ್ಷಣ, ಕೃಷಿ, ಆರೋಗ್ಯ ಇಲಾಖೆ ಹೀಗೆ ವಿವಿಧ ಇಲಾಖೆಯಡಿ ಜನರ ಜೀವನ ಕಟ್ಟಿಕೊಳ್ಳಲು ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿದೆ. ಪ್ರತಿಯೊಬ್ಬರೂ ಈ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಉತ್ತಮವಾದ ಜೀವನ ಕಟ್ಟಿಕೊಳ್ಳಬೇಕು ಎಂದರು.
ಡಾ;ಶಾಮನೂರು ಶಿವಶಂಕರಪ್ಪ ಪಕ್ಷದ ಶಕ್ತಿಯಾಗಿದ್ದಾರ, ದಾವಣಗೆರೆಯಲ್ಲಿ ಉದ್ಯಮವನ್ನು ಬೆಳೆಸಿ ಉದ್ಯೋಗ ನೀಡುವ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ದಾವಣಗೆರೆ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದರು.
ಗೃಹ ಸಚಿವ ಡಾ; ಜಿ.ಪರಮೇಶ್ವರ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ದಾವಣಗೆರೆಯಲ್ಲಿ ರೂ.30 ಕೋಟಿ ವೆಚ್ಚದಲ್ಲಿ 96 ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಿದ್ದು ಉದ್ಘಾಟನೆ ನೆರವೇರಿಸಲಾಗಿದೆ. ಪ್ರಣಾಳಿಕೆ ನಿರ್ಮಾಣ ಸಮಿತಿ ಅಧ್ಯಕ್ಷನಾಗಿ ಘೋಷಿಸಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನತೆಗೆ 21 ಕೋಟಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ರೂ.45 ಸಾವಿರ ಕೋಟಿ ಹಣ ಪಾವತಿಸಿದೆ. ಗೃಹಜ್ಯೋತಿಯಡಿ 15700 ಕೋಟಿ ವೆಚ್ಚದಲ್ಲಿ 1.6ಕೋಟಿ ಜನತೆಗೆ ಉಚಿತ ವಿದ್ಯುತ್ ಒದಗಿಸಿದೆ. ಶಕ್ತಿ ಯೋಜನೆಯಡಿ 12 ಸಾವಿರ ಕೋಟಿ ಖರ್ಚು ಮಾಡಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಡಿಪ್ಲೊಮಾ ಹಾಗೂ ಪದವೀಧರÀರಿಗೆ ರೂ.437 ಕೋಟಿ ವ್ಯಯಿಸುವುದರೊಂದಿಗೆ ಕೊಟ್ಟ ಮಾತಿನಂತೆ ಅನುಷ್ಠಾನ ಮಾಡಲಾಗಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೇ ವಿವಿಧ ಇಲಾಖೆಗಳ ಸುಮಾರು ರೂ.1350 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2400ಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯ ಯುವ ಮತ್ತು ಬಡ ಪ್ರತಿಭಾನ್ವಿತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ಸಹಯೋಗದೊಂದಿಗೆ 1225 ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡಲಾಗಿದೆ. ಉಚಿತ ಉದ್ಯೋಗಾಧಾರಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳಿಂದ ಆಯ್ಕೆಯಾದ 200 ವಿದ್ಯಾರ್ಥಿಗಳಿಗೆ ಉಚಿತ ಆಫ್ಲೈನ್ ತರಬೇತಿ ನೀಡಲಾಗಿದೆ. ಸರ್ಕಾರದಿಂದ ಮಂಜೂರಾದ ಹಾಸ್ಟೆಲ್ ಮತ್ತು ಇತರೆ ಇಲಾಖೆಗಳಿಗೆ ಒಟ್ಟು 260 ಎಕರೆ ಜಮೀನು ಒದಗಿಸಲಾಗಿದೆ. ನಗರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಿಂಗ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ನಗರದ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲಾಗಿದೆ.
ಅನೇಕ ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣ ಬಾಕಿ ಇತ್ತು, ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸುವರು. ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದ ಸಂಕೀರ್ಣಕ್ಕೆ ರೂ.260 ಕೋಟಿ ಮಂಜೂರಾಗಿದೆ. ಜಿಲ್ಲೆಯಲ್ಲಿ 23 ಸಾವಿರ ಜನರಿಗೆ ಹಕ್ಕುಪತ್ರ ನೀಡಿದ್ದು 12 ಸಾವಿರ ಜನರಿಗೆ ವಿವಿಧ ಭೂ ದಾಖಲೆಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಪಂಚ ಗ್ಯಾಂಟಿ ಯೋಜನೆಗಳ ಪ್ರದರ್ಶನ, ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಕೃಷಿ ಸಿಂಚಾಯಿ ಯೋಜನೆ, ರೇಷ್ಮೆ ಇಲಾಖೆಯಿಂದ ರೋಟರಿ ಚಂದ್ರಿಕೆ, ಜಿಲ್ಲಾ ಪಂಚಾಯತ್ವತಿಯಿಂದ ನರೇಗಾ ಮಾದರಿ ಶಾಲೆ ಮತ್ತು ಸ್ವಚ್ಚ ಭಾರತ್ ಮಿಷನ್, ಆಹಾರ ಇಲಾಖೆ ಅನ್ನಭಾಗ್ಯ, ಕೆಎಸ್ಆರ್ಟಿಸಿಯಿಂದ ಶಕ್ತಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮೀ, ಬೆಸ್ಕಾಂನಿಂದ ಗೃಹ ಜ್ಯೋತಿ ಯೋಜನೆ ಕುರಿತು ಮತ್ತು ಕೃಷಿ ಇಲಾಖೆಯಿಂದ ಕೃಷಿಭಾಗ್ಯದಡಿ ಕೃಷಿ ಹೊಂಡವನ್ನು ಅದ್ಬುತವಾಗಿ ನಿರ್ಮಾಣ ಮಾಡಿ ಜನರ ಗಮನ ಸೆಳೆಯಿತು.
ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸೌಲಭ್ಯ; ಕಮಲಿಬಾಯಿ, ಸಂಗೀತಬಾಯಿ, ಕಡ್ಲೆಬಾಳು ಗ್ರಾಮದಿಂದ ಶಿವಪ್ಪ ರಶೀದ್ ಖಾನ್, ಕಸಬಾ ಹೋಬಳಿಯಿಂದ ಮಂಜಮ್ಮ, ಲಲಿತ, ಜಯಪ್ಪ, ಚನ್ನಗಿರಿ ತಾಲ್ಲೂಕು ಉಬ್ರಾಣಿಯಿಂದ ಉಮೇಶ್, ನಾಗರಾಜಪ್ಪ, ಹೊನ್ನಾಳಿ ತಾಲ್ಲೂಕಿನಿಂದ ಲಕ್ಷ್ಮೀಬಾಯಿ, ಪಾರ್ವತಿಬಾಯಿ, ಚಂದ್ರಿಬಾಯಿ ಇವರಿಗೆ ಮಂಜೂರಾತಿ ಆದೇಶ ಪ್ರತಿ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಆದರ್ಶ, ಸಂತೋಷ, ಜಯಮ್ಮ ಇವರಿಗೆ ಸಹಾಯಧನ ಹಾಗೂ ಆಟೋ, ಟ್ಯಾಕ್ಸಿ ಕೀ ನೀಡಲಾಯಿತು.
ಯೋಜನಾ ಮತ್ತು ಸಂಖ್ಯಿಕ ಸಚಿವರಾದ ಸುಧಾಕರ್, ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ಚಿತ್ರದುರ್ಗದ ಶಾಸಕರಾದ ವಿರೇಂದ್ರ ಪಪ್ಪಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ, ಕರ್ನಾಟಕ ರಾಜ್ಯ ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಯದೇವನಾಯ್ಕ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಮಾಜಿ ಸಚಿವರಾದ ಆಂಜನೇಯ, ತೋಟಗಾರಿಕೆ, ರೇಷ್ಮೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ವಿಶೇಷ ಚೇತನರ, ಹಿರಿಯ ನಾಗರಿಕರ ಸಬಲೀಕಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸ್ವಾಗತಿಸಿದರು. ಸಿಇಓ ಸುರೇಶ.ಬಿ.ಇಟ್ನಾಳ್ ವಂದಿಸಿದರು.

Share This Article
error: Content is protected !!
";