ಆಕೆಗೆ ಹೊಲಿಯಲು ಯಾರೂ ಕಲಿಸಲಿಲ್ಲ… ಹೊಲಿಗೆಯು ಆಕೆಯ ಪಾಲಿಗೆ ಕೇವಲ ಕಲೆಯಾಗಿರಲಿಲ್ಲ, ಜೀವನೋಪಾಯವಾಗಿತ್ತು. ಬದುಕಿನ ಬಂಡಿಯನ್ನು ಸಾಗಿಸಲು ಆಧಾರವಾಗಿತ್ತು. ಬಡತನದಲ್ಲಿಯೇ ಆಕೆ ಹುಟ್ಟಿ ಬೆಳೆದಳು. ಆಕೆಗೆ 12 ವರ್ಷ ಇದ್ದಾಗಲೇ ತಾಯಿ ತೀರಿಕೊಂಡಳು. ಇನ್ನು ಆಕೆಯ ತಂದೆ ಓರ್ವ ಬೇಜವಾಬ್ದಾರಿ ಮನುಷ್ಯನಾಗಿದ್ದ. ಕುಟುಂಬದ ಜವಾಬ್ದಾರಿಯೆಲ್ಲ ತನ್ನ ಮೇಲೆ ಬೀಳುತ್ತದೆ ಎಂದು ಹೆಂಡತಿ ಸಾಯುವ ಮುನ್ನವೇ ಅವರನ್ನು ತೊರೆದುಹೋಗಿದ್ದನಾತ.
ಆಕೆಯ ಅಮ್ಮ ಸಾಯುತ್ತಲೇ ಯಾರೋ ಪುಣ್ಯಾತ್ಮರು ಆಕೆಯನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಅತ್ಯಂತ ತಣ್ಣಗಿನ ನೀರಸ ವಾತಾವರಣದ ಅನಾಥಾಶ್ರಮದಲ್ಲಿ ಅವರೆಲ್ಲ ಪ್ರಾರ್ಥನೆ ಹೇಳುತ್ತಿದ್ದರೆ ಅದರ ಜೊತೆ ಜೊತೆಗೆ ಕತ್ತರಿಯಿಂದ ಬಟ್ಟೆಯನ್ನು ಕತ್ತರಿಸುವ ಶಬ್ದವನ್ನು ಕೇಳುತ್ತಲೇ ಬೆಳೆದಳಾಕೆ. ಆಕೆ ಬೆಳೆಯುತ್ತಿದ್ದ ಆಶ್ರಮದಲ್ಲಿ ಆಕೆಗೆ ಬಟ್ಟೆ ಹೊಲಿಯುವುದನ್ನು ಕಲಿಸಿದರು.
ಈ ಹೊಲಿಗೆ ನಿನಗೆ ಒಂದು ಒಳ್ಳೆಯ, ಯೋಗ್ಯವಾದ ಜೀವನವನ್ನು ಕೊಡಲು ಸಹಾಯಕವಾಗುತ್ತದೆ ಎಂದು ಬಟ್ಟೆಯನ್ನು ಕತ್ತರಿಸುವಾಗ, ಹೊಲಿಯುವಾಗ ಆಕೆಗೆ ಅನಾಥಾಶ್ರಮದ ನನ್ ಗಳು ಹೇಳುತ್ತಿದ್ದರು… ಆದರೆ ಆಕೆಯೆಂದೂ ಒಳ್ಳೆಯ ಮತ್ತು ಯೋಗ್ಯವಾದ ಜೀವನವನ್ನು ಬಯಸಲಿಲ್ಲ…. ಆಕೆಯ ಹೃದಯ ತುಸು ಹೆಚ್ಚಿನದನ್ನು ಬಯಸುತ್ತಿತ್ತು.
ಯೋಗ್ಯವಾದ ಜೀವನ ಹಾಗೆಂದರೇನು? ಯಾವಾಗಲೂ ಸ್ವಚ್ಛವಾಗಿ ಹಾಗೂ ಶಾಂತವಾಗಿ ಇರುವುದು ಎಂದರ್ಥವೇ? ಎಂದು ಆಕೆ ಅವರನ್ನು ಮರು ಪ್ರಶ್ನಿಸುತ್ತಿದ್ದಳು.
ಮರಳಿ ಬೀದಿಯಲ್ಲಿ ಬೀಳಬಾರದು ಅಲ್ಲವೇ? ನಿನ್ನದೇ ಆದ ಪುಟ್ಟ ಬೆಚ್ಚಗಿನ ಗೂಡು ನಿನಗಿರುವುದೇ ಒಳ್ಳೆಯ ಜೀವನ ನಸುನಗುತ್ತಾ ಮತ್ತೆ ಅವರು ಉತ್ತರಿಸುತ್ತಿದ್ದರು
ಆದರೆ ತುಸು ಬೇರೆಯದೇ ಆದ ವಿಷಯ ಆಕೆಯ ತಲೆಯಲ್ಲಿತ್ತು…. ತಾನು ಕೇವಲ ಬದುಕಲಿಕ್ಕಾಗಿ ಹುಟ್ಟಿಲ್ಲ. ತಾನು ಎತ್ತರ, ಬಲು ಎತ್ತರಕ್ಕೆ ಬೆಳೆಯಲು ಹುಟ್ಟಿರುವೆ ಎಂಬ ಭಾವ ಆಕೆಯಲ್ಲಿತ್ತು. ಆಕೆ ಬಟ್ಟೆಯ ಮೇಲೆ ಹಾಕುವ ಪ್ರತಿಯೊಂದು ಹೊಲಿಗೆಯೂ ಬಟ್ಟೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಆಕೆಯ ನಿರ್ಧಾರವನ್ನು ಕೂಡ ಮತ್ತಷ್ಟು ಗಟ್ಟಿಗೊಳಿಸುತ್ತಿತ್ತು. ಆಕೆ ಅತ್ಯಂತ ಶಾಂತವಾಗಿ ಬಟ್ಟೆಯನ್ನು ಹೊಲಿಯುತ್ತಿದ್ದಳು,ಆದರೆ ಆಕೆಯ ಒಳಗಿನ ಮನ ‘ನನ್ನ ಭವಿಷ್ಯವನ್ನು ನಾನೇ ಬರೆಯಬೇಕು ಬೇರಾರು ಅದನ್ನು ನಿರ್ಧರಿಸಲಾರರು’ ಎಂದು ಭೋರಿಡುತ್ತಿತ್ತು.
ಮುಂದೆ ಕೆಲವರ್ಷಗಳ ನಂತರ ಆಕೆ ತನ್ನದೇ ಆದ ಹ್ಯಾಟ್ ಗಳನ್ನು ಮಾರಲಾರಂಭಿಸಿದಳು. ಹೆಣ್ಣು ಮಗಳು ಕ್ಯಾಪ್ ಗಳನ್ನು ಮಾರುವುದೇ ಅದು ತನ್ನದೇ ಅದ ಅಂಗಡಿಯನ್ನು ಹೊಂದುವುದು ಎಂದು ಜನ ಆಕೆಯನ್ನು ನೋಡಿ ತಮಾಷೆ ಮಾಡಿ ನಗುತ್ತಿದ್ದರು. ಆದರೆ ಆಕೆ ಯಾರ ಮಾತಿಗೂ ಕಿವಿಗೊಡಲಿಲ್ಲ.
ರಸ್ತೆಯಲ್ಲಿ ಟೊಪ್ಪಿಗೆಗಳನ್ನು ಮಾರುವ ವ್ಯಕ್ತಿ ತನ್ನನ್ನು ತಾನು ಡಿಸೈನರ್ / ವಿನ್ಯಾಸಕಾರ್ತಿ ಎಂದು ಕರೆದು ಕೊಳ್ಳುತ್ತಾಳೆ ಎಂದು ಹಾಸ್ಯ ಮಾಡಿ ನಕ್ಕರು.
ಆಕೆಯ ಮನಸ್ಸಿನಲ್ಲಿ ಏನಿತ್ತೋ ಅವರಿಗೆ ಗೊತ್ತಿಲ್ಲ…ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದಳು.
ಆಕೆಗೆ ಇದ್ದ ಮನಸ್ಥಿತಿಗೆ ಯಾರ ಕುಹಕಗಳೂ ಆಕೆಯನ್ನು ತಾಕುತ್ತಿರಲಿಲ್ಲ.
ಒಂದು ದಿನ ಓರ್ವ ವ್ಯಕ್ತಿ ಆಕೆಯ ಪುಟ್ಟ ಅಂಗಡಿಗೆ ಬಂದು ಆಕೆ ಮಾರಾಟ ಮಾಡುವ ಹ್ಯಾಟ್ ಗಳನ್ನು ನೋಡಲಾರಂಭಿಸಿದ. ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸದ ಹ್ಯಾಟ್ಗಳನ್ನು ನೋಡಿ ಆತನ ಕಣ್ಣುಗಳು ಮಿನುಗಿದವು.
ನಂಬಲಸಾಧ್ಯ ಎಂಬಂತೆ ಮುಖ ಮಾಡಿ ಇವುಗಳನ್ನು ನೀನು ವಿನ್ಯಾಸ ಮಾಡಿರುವೆಯಾ ಎಂದು ಆತ ಕೇಳಲು ಈಗಾಗಲೇ ಇಂತಹ ನೂರಾರು ಕುಹಕದ ಮಾತುಗಳನ್ನು ಕೇಳಿದ್ದ ಆಕೆಗೆ ಈತನೂ ಹಾಗೆಯೇ ಪ್ರಶ್ನಿಸುತ್ತಿದ್ದಾನೆ ಎಂದು ಉದಾಸಭಾವದಿಂದ ಹೌದು ಎಂದಷ್ಟೇ ಉತ್ತರಿಸಿದಳು.
ನಿಜವಾಗಿಯೂ ಇವುಗಳ ವಿನ್ಯಾಸ ಉತ್ತಮವಾಗಿದೆ… ಇವುಗಳನ್ನು ಪ್ಯಾರಿಸ್ ನಿಂದ ತರಿಸಿ ಮಾರುತ್ತಿರುವೆ ಎಂದು ನನಗೆ ತೋಚಿತು ಎಂದು ಆತ ಹೇಳಿದ. ಅದೇಕೋ ಗೊತ್ತಿಲ್ಲ ಆಕೆಗೇನು ತೋಚಿತೋ ನಿಜ ಇವುಗಳು ಪ್ಯಾರಿಸ್ನವೆ ಕಾರಣ ನಾನೇ ಪ್ಯಾರಿಸ್ ಎಂದು ಆಕೆ ನಗುನಗುತ್ತಾ ಉತ್ತರಿಸಿದಳು.
ಆಕೆ ಮಾರಾಟ ಮಾಡಿದ ಪ್ರತಿಯೊಂದು ಹ್ಯಾಟ್ ಗಳು ಮತ್ತು ಪ್ರತಿಯೊಂದು ಬಟ್ಟೆಗಳು ಯಾವುದೇ ರೀತಿಯ ನಿಯಮಗಳಿಗೆ ಒಳಪಟ್ಟಿರಲಿಲ್ಲ. ತಾನು ಏನಾಗಬೇಕೆಂದು ಬಯಸಿದ್ದಳು ಅಂತದ್ದೇ ಬಟ್ಟೆಗಳನ್ನು ಹಾಕಿ ವಿನ್ಯಾಸಗೊಳಿಸಿದ್ದಳು. ಸ್ವತಂತ್ರ ಪ್ರವೃತ್ತಿ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವುಳ್ಳ ವ್ಯಕ್ತಿಯಾಗಿ ಆಕೆ ತನ್ನನ್ನು ತಾನು ಕಂಡುಕೊಂಡಿದ್ದಳು. ಇದು ಆಕೆಯಂತೆಯೇ ನಿರ್ಭೀತ ಸ್ವತಂತ್ರ ಮತ್ತು ನಿರಾತಂಕ ಮನೋಭಾವದ ಬದುಕಿನ ಕನಸು ಕಾಣುವ ಬಹಳಷ್ಟು ಹೆಣ್ಣುಮಕ್ಕಳಿಗೆ ಹಿಡಿಸುವಂತಹ ಹ್ಯಾಟುಗಳು ಮತ್ತು ಬಟ್ಟೆಗಳ ವಿನ್ಯಾಸ ಆಕೆಯದಾಗಿತ್ತು. ಯಾವುದೇ ಭಯವಿಲ್ಲದ, ಯಾವುದೇ ಅನುಮತಿಗೆ ಕಾಯದ ಆಕೆಯ ಮಾನಸಿಕ ಸ್ಥೈರ್ಯ ಆಕೆಯ ಬಟ್ಟೆಗಳಲ್ಲೂ ಇತ್ತು.
ಚಿಕ್ಕದಾಗಿ ಕತ್ತರಿಸಿದ ಕೂದಲಿನ ಆಕೆ ಉದ್ದವಾದ ಮತ್ತು ತುಸು ದೊಡ್ಡದಾದ ಹ್ಯಾಟ್ ಗಳನ್ನು ಧರಿಸಿ ನಿಂತಾಗ ಬಹಳಷ್ಟು ಜನ ಆಕೆಯನ್ನು ಗಂಡು ಹುಡುಗ ಇರಬಹುದು ಎಂದು ಭಾವಿಸುತ್ತಿದ್ದರು. ಓರ್ವ ಸ್ನೇಹಿತನಂತೂ ನೀನು ಗಂಡು ಹುಡುಗನೇ ಸೈ ಎಂದು ತಮಾಷೆ ಮಾಡಿ ನಕ್ಕಿದ್ದನು.
ಅದಕ್ಕೆ ಉತ್ತರವಾಗಿ ಆಕೆಯೂ ಕೂಡ ನೋ ನಾನು ಗಂಡು ಹುಡುಗನಲ್ಲ ನಾನು ನನ್ನಿಷ್ಟದ ಮತ್ತು ನನ್ನಂತೆಯೇ ಕಾಣುವ ನಾನು ಮಾತ್ರ… ಮತ್ತು ನನ್ನನ್ನು ಪ್ರೀತಿಸುವ ನಾನು ಮಾತ್ರ ಎಂದು ಆತನಿಗೆ ನಗುತ್ತಲೇ ಉತ್ತರಿಸಿದ್ದಳು.
ಬಂಡಾಯ ಮನೋಭಾವದ, ಅಸಭ್ಯ, ಅಹಂಕಾರಿ ಪ್ರವೃತ್ತಿಯ ಹೆಣ್ಣು ಮಗಳು ಎಂದು ಆಕೆಯನ್ನು ಜನರು ಹೀಯಾಳಿಸಿದರು. ಆಕೆ ಓರ್ವ ವಿಧೇಯ ವ್ಯಕ್ತಿಯಾಗಿರಬಹುದು ಎಂದು ಜನರಿಗೆ ತೋಚಲೇ ಇಲ್ಲ.
ಯುದ್ಧದ ಕಾರ್ಮೋಡದ ಭಯ ಎಲ್ಲರ ಕಣ್ಣುಗಳಲ್ಲಿ ತುಳುಕುತ್ತಿತ್ತು… ಇದೇ ಕಾರಣಕ್ಕಾಗಿ ಆಕೆಯ ಅಂಗಡಿ ಕೂಡ ಮುಚ್ಚುವ ಪರಿಸ್ಥಿತಿಯಲ್ಲಿತ್ತು. ಆಯ್ತು ಆಕೆಯ ಸಮಯ ಮುಗೀತು ಇನ್ನೆಂದೂ ಆಕೆ ಮತ್ತೆ ಅಂಗಡಿ ತೆರೆಯಳು ಎಂದು ಜನ ಮಾತನಾಡಿಕೊಂಡರು, ಆದರೆ ಆಕೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಆಕೆ ಮತ್ತೆ ಪ್ಯಾರಿಸ್ ಗೆ ಮರಳಿದಳು. ಜನರ ಪಾಲಿಗೆ ಆಕೆ ಮುಗಿದ ಅಧ್ಯಾಯವಾಗಿದ್ದಳು ಆದರೆ ಆಕೆ ಮಾತ್ರ ತನ್ನ ಪಾಡಿಗೆ ತಾನು ಖುದ್ದು ಹೊಸದೊಂದು ಅಧ್ಯಾಯವನ್ನು ಬರೆಯಲು ಆರಂಭಿಸಿದ್ದಳು.
ಆಕೆ ಕೇವಲ ಒಂದು ಬ್ರಾಂಡ್ ಆಗಿರಲಿಲ್ಲ ಬದಲಾಗಿ ಒಂದು ಹೇಳಿಕೆಯಾಗಿದ್ದಳು. ಯುದ್ಧವನ್ನು ಸೋತು ಹೋದವರ ಅನುಸರಣೆಯನ್ನು ಆಕೆ ಮಾಡಲಿಲ್ಲ.ಆಕೆ ತನ್ನದೇ ರೀತಿಯ ಸುಗಂಧ ದ್ರವ್ಯವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದಳು. ಕೆಲವೇ ದಿನಗಳಲ್ಲಿ ಆಕೆಯ ಸುಗಂಧ ದ್ರವ್ಯ ಜಗತ್ಪ್ರಸಿದ್ಧವಾಗಿತ್ತು. ಚಾನೆಲ್ ನಂಬರ್ 5 ಎಂಬ ಪ್ಯಾರಿಸ್ ನ ಅತಿ ದೊಡ್ಡ ಸುಗಂಧ ದ್ರವ್ಯ…. ಅದು ಆಕೆಯದಾಗಿತ್ತು….ಆಕೆಯ ತಯಾರಿಕೆಯ ಉತ್ಕೃಷ್ಟ ಸುಗಂಧ ಇಡೀ ಜಗತ್ತಿನಲ್ಲಿ ಪ್ಯಾರಿಸ್ ನ ಹೆಸರನ್ನು ಪ್ರಸಿದ್ಧಗೊಳಿಸಿತು, ಆಕೆಯ ನಿಜವಾದ ಗಂಧ ಆಕೆಯ ಪ್ರತಿಭಟನೆಯ ರೂಪದಲ್ಲಿ ಪ್ರಕಟವಾಗಿತ್ತು.
ಒಂದು ಬಾರಿ ಓರ್ವ ಯುವ ವಸ್ತ್ರ ವಿನ್ಯಾಸಕಾರ್ತಿ ಆಕೆಯನ್ನು ಕುರಿತು ‘ಧೈರ್ಯ ಎಂದರೆ ಏನು? ಎಂದು ಕೇಳಿದಳು ಅದಕ್ಕೆ ಆಕೆ “ಎಂದಿಗೂ ಸೋಲನ್ನು ಒಪ್ಪಿ ಸುಮ್ಮನೆ ಕೂರುವುದು ಧೈರ್ಯವಲ್ಲ, ನೂರು ಬಾರಿ ಸೋತರೂ ಮತ್ತೊಂದು ಬಾರಿ ಪ್ರಯತ್ನಿಸುವೆ ಎಂದು ಎದ್ದು ನಿಲ್ಲುವುದು ಧೈರ್ಯ” ಎಂದು ಹೇಳಿದಳು. “ನಾವು ಸುಗಂಧ ದ್ರವ್ಯವನ್ನು ಪೂಸಿಕೊಂಡಾಗ ಅಲ್ಲಲ್ಲಿ ಕಲೆಗಳು ಉಂಟಾಗುತ್ತದೆ ಅಲ್ಲವೇ ಹಾಗೆಯೇ ಧೈರ್ಯ ಕೂಡ” ಎಂದು ಆಕೆ ಸೇರಿಸಿದಳು.
ಅನಾಥಾಶ್ರಮದ ಆ ಪುಟ್ಟ ಕೋಣೆಯಲ್ಲಿ ತನ್ನ ಹಾಸಿಗೆಯ ಮೇಲೆ ಅಳುತ್ತ ಕುಳಿತುಕೊಂಡಿರುವ ಆ ಪುಟ್ಟ ಹುಡುಗಿ ಇಂದು ದಿಟ್ಟ ವ್ಯಕ್ತಿಯಾಗಿ ಪ್ರಪಂಚವೇ ಆಕೆಯತ್ತ ತಿರುಗಿ ನೋಡುವಂತಹ ಉತ್ಪಾದನೆಯನ್ನು ಹೊಂದಿದ್ದಾಳೆ ಆಕೆಯೇ ಕೋಕೋ ಚಾನೆಲ್. ಆಕೆಯ ನಿಜವಾದ ಹೆಸರು ಗ್ಯಾಬ್ರಿಯೆಲ್ ಬೊನ್ ಹೇರ್ ಚಾನೆಲ್.
ಮುಂದೆ ಅತಿ ದೊಡ್ಡ ವಸ್ತ್ರ ವಿನ್ಯಾಸಕಿ ಮತ್ತು ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡ ಆಕೆ ಚಾನೆಲ್ ಬ್ರಾಂಡ್ ಸಂಸ್ಥಾಪಕಳೂ ಹೌದು.
1921 ರಲ್ಲಿ ಆಕೆ ಆವಿಷ್ಕರಿಸಿದ ಚಾನೆಲ್ ಫೈವ್ ಎಂಬ ಸುಗಂಧ ದ್ರವ್ಯ ಪ್ಯಾರಿಸ್ ನಲ್ಲಿ ತಯಾರಿಸಲಾದ ಅತಿ ಉತ್ಕೃಷ್ಟ ಸುಗಂಧಗಳಲ್ಲಿ ಒಂದಾಗಿದ್ದು ಫ್ರೆಂಚ್ ಮತ್ತು ಪರ್ಷಿಯನ್ ಸಂಸ್ಕೃತಿಗಳ ಸಾಕಾರ ರೂಪವಾಗಿದೆ. ಇಂದಿಗೂ ಕೂಡ ಜಗತ್ತಿನ ಅತ್ಯಂತ ಹೆಚ್ಚು ಮಾರಾಟವಾಗುವ ಸುಗಂಧದವ್ಯಗಳಲ್ಲಿ ಒಂದೆಂದು ಹೆಸರಾಗಿದೆ.
ನೋಡಿದಿರಾ ಸ್ನೇಹಿತರೇ ?ಯಾವುದೇ ಮಣ್ಣಿರಲಿ ಪುಟ್ಟ ಸಸಿ ಮೊಳಕೆ ಒಡೆದು ಹೂವು ಅರಳುವುದನ್ನು ನಿಲ್ಲಿಸಲು ಸಾಧ್ಯವಿಲ್ಲ…. ಆದರೆ ಪಳೆಯುಳಿಕೆಗಳಲ್ಲೂ ಕೂಡ ಹೂವು ಅರಳಲು ಸಾಧ್ಯವಾಗುವುದು ಅಲ್ಲಿ ಬಿದ್ದ ಬೀಜಕ್ಕೆ ಮೊಳಕೆಯೊಡೆದು ಪುಟ್ಟ ಸಸಿಯಾಗಿ ಮತ್ತೆ ಮರವಾಗಬೇಕು ಎಂಬ ಹೆಬ್ಬಯಕೆ ಇರಲೇಬೇಕು.
ಅಂತೆಯೇ ಯಾವುದೇ ವ್ಯಕ್ತಿ ತಾನು ಬೆಳೆಯಬೇಕೆಂದು ಆಶಿಸಿದರೆ ಅದೆಂತಹದ್ದೇ ಅಡೆತಡೆಗಳು ಬಂದರೂ ಕೂಡ ಗಟ್ಟಿಯಾಗಿ ಎದುರಿಸಿ ನಿಲ್ಲುವ ಛಲವನ್ನು ಬೆಳೆಸಿಕೊಳ್ಳಬೇಕು. ನೋವುಗಳನ್ನು ಸಹಿಸಿಕೊಳ್ಳುವ ಬದುಕುವ ಎಲ್ಲಾ ಪೆಟ್ಟುಗಳನ್ನು ಬಿಟ್ಟವಾಗಿ ಅನುಭವಿಸುವ ಮೂಲಕ ಜಗಜಟ್ಟಿಯಾಗಿ ನಿಲ್ಲಲೇಬೇಕು. ಸತತ ಪ್ರಯತ್ನಕ್ಕೆ ಸಾಫಲ್ಯ ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಕೋಕೋ ಚಾನಲ್ ಒಂದು ಉದಾಹರಣೆಯಾಗಿ ನಮ್ಮೆದುರು ನಿಲ್ಲುತ್ತಾರೆ.
.
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ