ರೈತರು ಬೆಳೆ ವಿಮೆಗೆ ನೋಂದಾಯಿಸಲು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಸಲಹೆ ರೈತರಿಗೆ ಬೆಳೆ ವಿಮೆಯಿಂದಾಗುವ ಅನುಕೂಲದ ಬಗ್ಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್

Vijayanagara Vani
ರೈತರು ಬೆಳೆ ವಿಮೆಗೆ ನೋಂದಾಯಿಸಲು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಸಲಹೆ ರೈತರಿಗೆ ಬೆಳೆ ವಿಮೆಯಿಂದಾಗುವ ಅನುಕೂಲದ ಬಗ್ಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 02 – ರೈತರಿಗೆ ಬೆಳೆ ವಿಮೆ ನೋಂದಣಿ ಮಾಡಿಸುವದರಿಂದ ಆಗುವ ಲಾಭ ಹಾಗೂ ಅನುಕೂಲಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರೈತರ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ ಜೊತೆಗೆ ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ನೋಂದಣಿಯಾಗಿ ಗುರಿಯನ್ನು ಸಾಧಿಸಬೇಕು ಈ ಹಿನ್ನೆಲೆಯಲ್ಲಿ
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
*ಕೃಷಿ ಬೆಳೆ ವಿಮೆಗೆ ನೋಂದಾಯಿಸಿ*
2024 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ/ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ/ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿರುತ್ತವೆ.
ಆಯಾ ತಾಲ್ಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಹಾಗೂ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಹಾಗೂ ನೀರಾವರಿ), ನೆಲಗಡಲೆ (ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಮತ್ತು ಟೊಮ್ಯಾಟೋ ಬೆಳೆಗಳನ್ನು ಇತೆರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ.
ಟೊಮ್ಯಾಟೋ ಮತ್ತು ತೊಗರಿ ಬೆಳೆಗೆ ಜುಲೈ 15, ನೆಲಗಡಲೆ ಬೆಳೆಗೆ ಜುಲೈ 31 ಮತ್ತು ಉಳಿದಂತೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ.
ಅಂತಿಮ ದಿನದವರೆಗೆ ಕಾಯದೆ ರೈತರು ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸುವುದು.
ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಿ, ಕೊನೆಯ ದಿನಾಂಕದವರೆಗೆ ವಿಳಂಬಿಸದೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.
*ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮೆಗೆ ನೊಂದಾಯಿಸಿ*
2024-25ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)ಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸ ಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧೀನ ತಾಲ್ಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸರ್ಕಾರದಿಂದ ಅಧಿಸೂಚಿತ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನ ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000, ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ನೊಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.
ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ / ಕಂದಾಯ ರಶೀದಿ / ಖಾತೆ ಪುಸ್ತಕ / ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು / ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸುವುದು. ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು, ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.
ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ನೊಂದಾಯಿಸಲಿದ್ದು, ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಇಚ್ಚಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ KSHEMA(ಕ್ಷೇಮ) ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ.
ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9480461234, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880210892, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 8217210320, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880461607, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯ ಸಹಾಯವಾಣಿ ಸಂಖ್ಯೆ- 08026564537 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ, ಉಪನಿರ್ದೇಶಕಿ ಗಾಯಿತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಜೆ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ತಾಲ್ಲೂಕು ಸಹಾಯಕ ಕೃಷಿ, ತೋಟಗಾರಿಕೆ ನಿರ್ದೇಶಕರು, ವಿಮಾ ಪಾಲಿಸಿ ಕಂಪನಿಗಳ ಮುಖ್ಯಸ್ಥರು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!