ಮುಖ್ಯಮಂತ್ರಿಗಳ ಆದೇಶಕ್ಕೆ ಜಿಲ್ಲಾಧಿಕಾರಿಗಳ ತಕ್ಷಣದ ಸ್ಪಂದನೆ* *ಅವಳಿನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ಸೂಚನೆ; ಶೀಘ್ರದಲ್ಲಿ ಬೀದಿ ವ್ಯಾಪಾರಿಗಳ ಸಮತಿ ಸಭೆ ಜರುಗಿಸಲು ಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು*

Vijayanagara Vani
ಮುಖ್ಯಮಂತ್ರಿಗಳ ಆದೇಶಕ್ಕೆ ಜಿಲ್ಲಾಧಿಕಾರಿಗಳ ತಕ್ಷಣದ ಸ್ಪಂದನೆ* *ಅವಳಿನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ಸೂಚನೆ; ಶೀಘ್ರದಲ್ಲಿ ಬೀದಿ ವ್ಯಾಪಾರಿಗಳ ಸಮತಿ ಸಭೆ ಜರುಗಿಸಲು ಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು*
*
ಧಾರವಾಡ  ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಆದೇಶಕ್ಕೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಕ್ಷಣ ಸ್ಪಂದಿಸಿದ್ದು, ಸಾರ್ವಜನಿಕರ ಸಂಚಾರ ಮತ್ತು ದೂರುಗಳಿಗೆ ಆಸ್ಪದವಾಗದಂತೆ ಅವಳಿನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಲು ತಕ್ಷಣ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತರಿಗೆ ಇಂದು ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅವಳಿನಗರದಲ್ಲಿ 2018-19 ರಲ್ಲಿ ನಡೆಸಿದ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆಯಲ್ಲಿ 6172 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿತ್ತು. ಅವರಿಗೆ ನಿಯಮದ ಪ್ರಕಾರ ಗುರುತಿನ ಚೀಟಿ ಸಹ ನೀಡಲಾಗಿದೆ. 2014 ರ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ಹಾಗೂ 2019 ರ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ನಿಯಮ ಅನುಸಾರ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಅಸ್ತಿತ್ವದಲ್ಲಿದೆ. ಮಹಾನಗರಪಾಲಿಕೆ ಹಾಗೂ ಪೊಲೀಸ ಇಲಾಖೆಯ ಸಮನ್ವಯದಲ್ಲಿ ಧಾರವಾಡದಲ್ಲಿ 7 ಮತ್ತು ಹುಬ್ಬಳ್ಳಿಯಲ್ಲಿ 33 ಸೇರಿದಂತೆ ಬೀದಿ ಬದಿ ವ್ಯಾಪಾರಿಗಳಿಗಾಗಿ ಒಟ್ಟು 40 ವ್ಯಾಪರ ವಲಯಗಳನ್ನು ಗುರುತಿಸಲಾಗಿದೆ. ಅಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅಗತ್ಯ ಅನುಕೂಲ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಕಾಯ್ದೆ ಪ್ರಕಾರ ಸೌಲಭ್ಯ ಕಲ್ಪಸಲಾಗುತ್ತದೆ. ಕಿಮ್ಸ್ ಆಸ್ಪತ್ರೆ ಹಿಂಭಾಗ ಮತ್ತು ಆಸ್ಪತ್ರೆ ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಆಗಿದ್ದ ಕೆಲವು ಡಬ್ಬಾ ಅಂಗಡಿಗಳನ್ನು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ತೆರವುಗೊಳಿಸಲಾಗಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಯುಕ್ತರಿಗೆ ತಿಳಿಸಲಾಗಿದೆ. ಮತ್ತು ಶೀಘ್ರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮತಿ ಸಭೆ ಕರೆದು, ಅವರ ಸಮಸ್ಯೆ, ಸೌಲಭ್ಯಗಳ ಕುರಿತು ಸಭೆ ಜರುಗಿಸಿ, ವರದಿ ನೀಡಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸಮೀಕ್ಷೆ ಮೂಲಕ ಗುರುತಿಸಿ ಗುರುತಿನ ಚೀಟಿ ವಿತರಿಸಲಾದ ಬೀದಿ ಬದಿ ವ್ಯಾಪಾರಿಗಳು ಪಿ.ಎಂ.ಸ್ವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
ಸಮೀಕ್ಷೆಯಿಂದ ಹೊರಗುಳಿದವರೂ ಕೂಡಾ ತಾವು ಬೀದಿ ಬದಿ ವ್ಯಾಪಾರಿ ಎಂಬುದಕ್ಕೆ ಅಗತ್ಯ ದಾಖಲೆ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಪಿ.ಎಮ್ ಸ್ವ-ನಿಧಿ ಯೋಜನೆಯಡಿ, ಸೆಪ್ಟೆಂಬರ್-2023ರ ಮಾಹೆಯಿಂದ ಪಿ.ಎಂ.ಸ್ವನಿಧಿ ಯೋಜನೆಯನ್ನು ಪತ್ರಿಕಾ ವಿತರಕರಿಗೆ, ಹಾಲು ಮಾರಾಟಗಾರರಿಗೆ, ದೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚೆಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರರು, ಹೂವಿನ ಕುಂಡಗಳನ್ನು ಮಾರುವವರು, ನೇಯ್ಕೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರಿಗೆ (ಕ್ಯಾಟರಿಂಗ್ ಸರ್ವಿಸಸ್) ವಿಸ್ತರಿಸಲಾಗಿದೆ.
ಪಿ.ಎಂ.ಸ್ವನಿಧಿ ಯೋಜನೆಯಡಿ ಇಲ್ಲಿಯವರೆಗೆ ಅವಳಿನಗರದ ಸುಮಾರು 16115 ಜನ ಬೀದಿ ಬದಿ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಮಹಾನಗರಪಾಲಿಕೆಯಿಂದ ವಿವಿಧ ಬ್ಯಾಂಕಗಳ ಮೂಲಕ ಸಾಲಸೌಲಭ್ಯ ಕಲ್ಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದ್ದು, ಬಾಕಿ ಇರುವ ಅರ್ಜಿಗಳನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಮನ್ವಯ ಸಾಧಿಸಿ, ಆದಷ್ಟು ಬೇಗ ಇತ್ಯರ್ಥ ಪಡಿಸಿ, ಸೌಲಭ್ಯ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!