ಧಾರವಾಡ ಮಾರ್ಚ 21: ಧಾರವಾಡದ ದೊಡ್ಡನಾಯಕನಕೊಪ್ಪದ ನಿವಾಸಿ ನಾಗಯ್ಯ ಸಂಕಣ್ಣವರ ಎನ್ನುವವರು ದಿ:15/10/2021ರಂದು ರೂ.83,999 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಿಂದ ಖರೀದಿಸಿದ್ದರು. ವಾಹನವು ಬ್ಯಾಟರಿಯ ಮೇಲೆ 36 ತಿಂಗಳು ಮತ್ತು ವಾಹನದ ಬಿಡಿ ಬಾಗಗಳ ಮೇಲೆ ಒಂದು ವರ್ಷದ ವಾರಂಟಿಯನ್ನು ಹೊಂದಿತ್ತು. ದೂರುದಾರರು ಎದುರುದಾರರ ಹೇಳಿಕೆಯಂತೆ ವಾಹನವನ್ನು ಉಪಯೋಗಿಸುತ್ತಿದ್ದು ನಂತರ ಒಮ್ಮಿಂದೊಮ್ಮೆಲೆ ರಸ್ತೆಯ ಮದ್ಯ ನಿಲ್ಲಲು ಪ್ರಾರಂಭಿಸಿತು. ಅಲ್ಲದೇ ಎದುರುದಾರರು ಹೇಳಿದಷ್ಟು ಮೈಲೇಜನ್ನೂ ಸಹ ವಾಹನವು ಕೊಡುತ್ತಿರಲಿಲ್ಲ. ಈ ವಿಷಯವನ್ನು ದೂರುದಾರರು ಎದುರುದಾರರಿಗೆ ತಿಳಿಸಿದಾಗ ಅದನ್ನು ಸರಿಪಡಿಸಿಕೊಟ್ಟರೂ ಸಹ ವಾಹನವು ಯಥಾ ಪ್ರಕಾರ ಅದೇ ಸಮಸ್ಯೆಗಳನ್ನು ಕೊಡುತ್ತಿತ್ತು. ಇದರ ಬಗ್ಗೆ ದೂರುದಾರರು ಎದುರುದಾರರಿಗೆ ತಿಳಿಸಲು ಹೋದಾಗ ಎದುರುದಾರರು ತಮ್ಮ ಮಳಿಗೆಯನ್ನು ಶಾಶ್ವತವಾಗಿ ಮುಚ್ಚಿರುತ್ತಾರೆ. 2ನೇ ಎದುರುದಾರರಿಗೆ ತಿಳಿಸಿದಾಗ ಅವರು ವಾಹನವನ್ನು ರಾಯಚೂರಿಗೆ ರಿಪೇರಿಗಾಗಿ ತರಲು ಹೇಳಿರುತ್ತಾರೆ. ಇದು ದೂರುದಾರರಿಗೆ ಕಷ್ಟವಾದ ಕಾರಣ ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 13/03/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಾದ ಟ್ರೈಯೋ ಗ್ರೂಪ್ಸ್ ಇವರಲ್ಲಿ ರೂ.84,000 ಹಣ ಪಾವತಿಸಿ ಪ್ಯೂವರ್ ಎನರ್ಜಿಯ ಇ-ವಾಹನವನ್ನು ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೋಗುವಾಗ ತಕ್ಷಣವೇ ನಿಲ್ಲುವುದು ಮತ್ತು ಮೈಲೇಜ್ ಸರಿಯಾಗಿ ಕೊಡುತ್ತಿರಲಿಲ್ಲ. ವಾಹನ ಖರೀದಿಸಿದ ಮರು ದಿನವೇ ಆ ರೀತಿ ಆಗುವುದು ಸರಿಯಾದ ಕ್ರಮ ಅಲ್ಲ. ಎದುರುದಾರರು ರಿಪೇರಿ ಮಾಡಿದರೂ ಸಹ ವಾಹನದ ಅದೇ ಸಮಸ್ಯೆಯು ದೂರುದಾರರಿಗೆ ತೊಂದರೆಯನ್ನು ಕೊಡುತ್ತಿತ್ತು. ಈ ವಿಷಯವಾಗಿ ದೂರುದಾರರು ಎದುರುದಾರರನ್ನು ಸಂಪರ್ಕಿಸಲು ಹೋದಾಗ ಅವರು ತಮ್ಮ ಮಳಿಗೆಯನ್ನು ಶಾಶ್ವತವಾಗಿ ಮುಚ್ಚಿರುತ್ತಾರೆ.
ಇಂತಹ ಎದುರುದಾರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗುವುದರೊಂದಿಗೆ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಪ್ಯೂವರ್ ಎನರ್ಜಿ, ಟ್ರೈಯೋ ಗ್ರೂಪ್ಸ್ ಕಂಪನಿಗೆ ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಿ ಕೊಡಬೇಕು ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಅದನ್ನು ಸರಿಪಡಿಸಿ ಕೊಡದೇ ಇದ್ದ ಕಾರಣ ದೂರುದಾರರ ಪಾವತಿ ಮಾಡಿದ ಹಣ ರೂ.83,999 ಬಡ್ಡಿಯೊಂದಿಗೆ ದೂರುದಾರರಿಗೆ ಮರಳಿ ಕೊಡಬೇಕು ಅಂತಾ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಪ್ಯೂವರ್ ಎನರ್ಜಿ ಪ್ರೈ.ಲಿ. ಗೆ ನಿರ್ದೇಶಿಸಿದೆ.