Ad image

ಆಗಸ್ಟ್ ಮಳೆಯಿಂದ ಆಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಬೇಗನೆ ಪೂರ್ಣಗೊಳಿಸಿ; ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶೀಘ್ರದಲ್ಲಿ ಶಿಫಾರಸ್ಸು:ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್

Vijayanagara Vani
ಧಾರವಾಡ  ಆ.30: ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರವು ನಿಯಮಾನುಸಾರ ಪರಿಹಾರ ನೀಡುತ್ತದೆ. ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಆದ್ಯ ಕರ್ತವ್ಯ. ಬೆಳೆ ಹಾನಿ ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕೆಂದು ಕಾರ್ಮಿಕ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಅವರು ಇಂದು (ಆ.30) ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಧಾರವಾಡ ಜಿಲ್ಲೆಯ ಆಗಸ್ಟ್ ತಿಂಗಳಿನಲ್ಲಿ ಬಾರಿ ಮಳೆಯಿಂದ ಆಗಿರುವ ಬೆಳೆ ಹಾನಿ ಹಾಗೂ ರೈತರ ಬೆಳೆ ಪರಿಹಾರದ ಕುರಿತು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಭೆ ಜರುಗಿಸಿ, ಮಾತನಾಡಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಿಖರ ಸಮೀಕ್ಷೆಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ವಿಳಂಬವಾಗದಂತೆ ಮತ್ತು ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಬೇಕು. ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಮತ್ತು ಸಂತ್ರಸ್ತರಿಗೆ ಶೀಘ್ರ ನ್ಯಾಯ ಒದಗಿಸಲು ಬೆಳೆ ಸಮೀಕ್ಷೆ ಕಾರ್ಯ ಸಹಾಯಕವಾಗಲಿದೆ ಎಂದು ಹೇಳಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೀಡಿರುವ ಪ್ರಾಥಮಿಕ ವರದಿಯ ಪ್ರಕಾರ ಅಂದಾಜು ವರದಿಯ ಪ್ರಕಾರ, 79,697 ಹೇಕ್ಟೆರ್ ಹೆಸರು ಬೆಳೆ, 6,550 ಹೇಕ್ಟೆರ್ ಉದ್ದು ಬೆಳೆ, 7,250 ಹೇಕ್ಟೆರ್ ಸೋಯಾಅವರೆ ಬೆಳೆ, 50 ಹೇಕ್ಟರ್ ಮುಸಿಕನ ಜೋಳ ಸೇರಿದಂತೆ ಸರಿಸುಮಾರು 93,547 ಹೇಕ್ಟೆರ್ ಹಾನಿಯಾಗಿದೆ. ಮತ್ತು ತೋಟಗಾರಿಕಾ ಬೆಳೆಗಳಾದ 915 ಹೇಕ್ಟೆರ್ ಒಣಮೆಣಸಿನಕಾಯಿ, 2,920 ಹೇಕ್ಟೆರ್ ಈರುಳ್ಳಿ, 230 ಹೇಕ್ಟೆರ್ ಬೆಳ್ಳೊಳ್ಳಿ ಸೇರಿದಂತೆ ಸರಿಸುಮಾರು 4,065 ಹೇಕ್ಟೆರ್ ಬೆಳೆ ಹಾನಿಯಾಗಿದೆ. ಒಟ್ಟಾರೆಯಾಗಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಸಮೀಕ್ಷೆ ಪೂರ್ವದಲ್ಲಿ ಅಂದಾಜು 97,612 ಹೇಕ್ಟೆರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಯಾಗಿವೆ ಎಂದು ಮತ್ತು ಮುಂದಿನ ಎರಡ್ಮೂರು ದಿನಗಳಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಸಮೀಕ್ಷೆಯ ನಂತರ ಒಟ್ಟು ಹಾನಿಯ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಆಗಸ್ಟ್ ಮಾಹೆಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರಾಥಮಿಕ ವರದಿಯ ಪ್ರಕಾರ 223 ಮನೆಗಳು ಹಾನಿಯಾದ ಪ್ರಕರಣಗಳು ವರದಿಯಾಗಿದ್ದು, ಕಂದಾಯ ಹಾಗೂ ಇತರ ಇಲಾಖೆಗಳ ಜಂಟಿ ಸಮಿತಿ ಪರಿಶೀಲನೆಯ ನಂತರ ಇದರಲ್ಲಿನ 81 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ 128 ಮನೆ ಹಾನಿ ಪ್ರಕರಣಗಳ ಪೈಕಿ ಶೇ. 76 ಕ್ಕಿಂತ ಹೆಚ್ಚು ಹಾನಿಯಾದ 25 ಮನೆಗಳಿಗೆ, ಶೇ. 51 ರಿಂದ 75 ರಷ್ಟು ಹಾನಿಯಾದ 41 ಮನೆಗಳಿಗೆ, ಶೇ. 21 ರಿಂದ 50 ರಷ್ಟು ಹಾನಿಯಾದ 51 ಮನೆಗಳಿಗೆ ಮತ್ತು ಶೇ. 15 ರಿಂದ 20 ರಷ್ಟು ಹಾನಿಯಾದ 11 ಮನೆಗಳಿಗೆ ನಿಯಮಾನುಸಾರ ಪರಿಹಾರ ನೀಡಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಹಾಗೂ ಹಾನಿಯಾದ 14 ಮನೆಗಳು ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕಳೆದ 15 ದಿನಗಳಿಂದ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬರುವ ಸೋಮವಾರ ಸಂಜೆಯೊಳಗೆ ಸಮೀಕ್ಷೆಯ ಪೂರ್ಣ ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು. ವರದಿ ಪಡೆದ ನಂತರ, ರೈತರಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಲಾಗುವುದು. ಬೆಳೆ ಹಾನಿ ಆಗಿರುವ ಎಲ್ಲ ರೈತರಿಗೂ ಪರಿಹಾರ ಸಿಗುವಂತೆ ಅಧಿಕಾರಿಗಳು ಸಮರ್ಪಕವಾಗಿ ಮತ್ತು ನಿಯಮಾನುಸಾರ ಬೆಳೆ ಹಾನಿ ಸಮೀಕ್ಷೆ ಮಾಡಬೇಕು. ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಬೆಳೆ ಹಾನಿ ಸಮೀಕ್ಷೆಯ ವರದಿಯನ್ನು ಸಲ್ಲಿಸಿ, ಪರಿಹಾರ ಬರುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹಾಗೂ ಇತರರು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ ಘಾಳಿ, ಉಪಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಅವರು ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣನವರ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ವೀರಣ್ಣಗೌಡ ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕರಾದ ಜಯಶ್ರೀ ಹಿರೇಮಠ, ಸಂದೀಪ ಜಿ., ಎಲ್ಲ ತಾಲೂಕಿನ ತಹಶೀಲ್ದಾರರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು

Share This Article
error: Content is protected !!
";