ಮಡಿಕೇರಿ ಜೂ.26-ಜೂನ್, 30 ರಂದು ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಪರೀಕ್ಷಾ ಮಾರ್ಗ ಸೂಚಿಯಂತೆ ನಡೆಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಪರೀಕ್ಷೆಯನ್ನು ಯಾವುದೇ ರೀತಿ ಲೋಪ ಉಂಟಾಗದಂತೆ ಗಮನಹರಿಸುವಂತೆ ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ ಅವರು ಮಾತನಾಡಿ ಕರ್ನಾಟಕ ಟಿಇಟಿ ಪರೀಕ್ಷೆಯು ಇದೇ ಜೂನ್ 30 ರಂದು ಮಡಿಕೇರಿಯಲ್ಲಿ ನಡೆಯಲಿದೆ. ಒಟ್ಟು ಮೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಎರಡು ಕೇಂದ್ರಗಳು ಹಾಗೂ ಸಂತ ಮೈಕಲರ ಶಾಲೆ ಇಲ್ಲಿ ಒಂದು ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 759 ಪರೀಕ್ಷಾರ್ಥಿಗಳು ಮೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜೂನ್ 30 ರಂದು ಬೆಳಗ್ಗೆ ಪರೀಕ್ಷೆ 9.30 ಗಂಟೆಯಿಂದ 12 ಗಂಟೆ ವರೆಗೆ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಪರೀಕ್ಷಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಮಧ್ಯಾಹ್ನದ ಅವಧಿಯಲ್ಲಿ 2 ಗಂಟೆಯಿಂದ ನಾಲ್ಕುವರೆವರೆಗೆ ಪರೀಕ್ಷೆ ನಡೆಯಲಿದೆ. ಒಬ್ಬರು ಮಾರ್ಗ ಅಧಿಕಾರಿಯನ್ನು ನೇಮಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಒಬ್ಬರಂತೆ ಸ್ಥಾನಿಕ ಜಾಗೃತ ದಳವನ್ನು ನೇಮಿಸಲಾಗಿದೆ. ಹಾಗೆಯೇ ಪರೀಕ್ಷಾರ್ಥಿಗಳ ಮೊಬೈಲನ್ನು ಪರೀಕ್ಷಾ ವೇಳೆಯಲ್ಲಿ ಸಂರಕ್ಷಿಸಿ ಇಟ್ಟು, ಪರೀಕ್ಷೆಯ ನಂತರ ಅವರಿಗೆ ಹಿಂತುರುಗಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಡಿವೈಎಸ್ಪಿ ಮಹೇಶ್ ಕುಮಾರ್, ಪ್ರಾಂಶುಪಾಲರಾದ ವಿಜಯ್, ಪರೀಕ್ಷಾ ನೋಡಲ್ ಅಧಿಕಾರಿ ಕೆ.ಆರ್.ಬಿಂದು, ಕೂಡಿಗೆ ಡಯಟ್ನ ಉಪನ್ಯಾಸಕರಾದ ಗೀತಾ, ಜಾನ್ಸನ್, ಸುಕ್ರುದೇವ್ ಗೌಡ ಇತರರು ಇದ್ದರು.
ಹೆಚ್ಚಿನ ವಿವರಗಳಿಗೆ ಕಚೇರಿಯ ಪರೀಕ್ಷಾ ನೋಡಲ್ ಅಧಿಕಾರಿ ಕೆ.ಆರ್.ಬಿಂದು ಅವರ ಮೊ.ಸಂ.9611720320 ನ್ನು ಹಾಗೂ ಸಹಾಯವಾಣಿ ಸಂಖ್ಯೆ ಉಪ ನಿರ್ದೇಶಕರು(ಆಡಳಿತ) 9448999344 ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು 9036937599 ನ್ನು ಸಂಪರ್ಕಿಸಬಹುದಾಗಿದೆ.