ಧಾರವಾಡ : ಆ.20: ಹುಬ್ಬಳ್ಳಿಯ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್ನ ಪಾಲುದಾರರಾದ ಶಿವನಗೌಡ ಪಾಟೀಲ ಎಂಬುವವರು ತಡಸಿನಕೊಪ್ಪಾ ಗ್ರಾಮದಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಲೇಔಟನಲ್ಲಿ, ಬೆಳಗಾವಿಯ ರಾಮತೀರ್ತ ನಗರದ ಕೃಷ್ಣಾ ಮನಾಯಿ, ಧಾರವಾಡದ ಗಾಂಧಿನಗರದ ನಿರ್ಮಲಾ ಕುಲಕರ್ಣಿ ಹಾಗೂ ಬೆಂಗಳೂರಿನ ವಿಜಯ ನಗರದ ನಿವಾಸಿಗಳು ಸೈಟ್ ಪಡೆದುಕೊಳ್ಳಲು ಇಚ್ಚಿಸಿ ಪೃಥ್ವಿ ಡವಲಪರ್ಸ್ ಜೊತೆ ಪ್ಲಾಟ ನಂ.58, 62 ಮತ್ತು 91 ಬಗ್ಗೆ ಮಾರಾಟದ ಒಪ್ಪಂದ ಮಾಡಿಕೊಂಡು, ಪ್ಲಾಟ್ಗೆ ಕಂತುಗಳ ಮುಖಾಂತರ ರೂ.6,31,000, ರೂ.6,49,200 ಹಾಗೂ ರೂ.5,51,245 ರೂಪಾಯಿ ಹಣ ಸಂದಾಯ ಮಾಡಿದ್ದರು. ಸಾಕಷ್ಟು ಕಾಲಾವಕಾಶ ಕಳೆದರೂ ಬಿಲ್ಡರ ಲೇಔಟ್ ನಿರ್ಮಾಣ ಮಾಡದೇ, ತಮಗೆ ಬುಕ್ ಮಾಡಿದ ಸೈಟ್ ಕೊಡದೇ ಸೇವಾ ನೂನ್ಯತೆ ಎಸಗಿ ಮತ್ತು ಮೋಸ ಮಾಡಿದ್ದಾರೆ ಅಂತಾ ಹೇಳಿ ದೂರುದಾರರೆಲ್ಲರು ವಯಕ್ತಿಕವಾಗಿ ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಗ್ರಾಹಕರ ಆಯೋಗಕ್ಕೆ ದಿ:26/03/2025, 03/05/2025, 25/03/2025 ರಂದು ತಮ್ಮ ದೂರುಗಳನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲ್ಯಾಟುಗಳನ್ನು ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಈ ಬಗ್ಗೆ ಪೃಥ್ವಿ ಬಿಲ್ಡರ್ ಹಾಗೂ ಡೆವಲಪರ್ನ ಪಾಲುದಾರರಾದ ಶಿವನಗೌಡ ಪಾಟೀಲ ರವರು ದೂರುದಾರರಿಂದ ಪಡೆದ ಹಣ ಜೊತೆಗೆ ಶೆ.10 ರಂತೆ ಹಣ ಸಂದಾಯವಾದ ದಿನಾಂಕದಿಂದ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ಪೂರ್ತಿ ಹಣಕೊಡಲು ಆಯೋಗ ಆದೇಶಿಸಿದೆ. ಜೊತೆಗೆ ದೂರುದಾರರು ಅನುಭವಿಸಿದ ಮಾನಸಿಕ ತೊಂದರೆ ಹಾಗೂ ಅನಾನುಕೂಲತೆಗಾಗಿ ತಲಾ ರೂ.50,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಪೃಥ್ವಿ ಡವಲಪರ್ಸ್ಗೆ ನಿರ್ದೇಶಿಸಿದೆ.