Ad image

ಭ್ರಷ್ಟಾಚಾರ ಒಂದು ಪಿಡುಗು: ಅದನ್ನು ತೊಡೆದು ಹಾಕಲು ನಿಸ್ವಾರ್ಥ ಸೇವೆ, ನಿಸ್ವಾರ್ಥ ಜೀವನ ತಮ್ಮದಾಗಬೇಕು: ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಜಿ.ರಮಾ

Vijayanagara Vani
ಭ್ರಷ್ಟಾಚಾರ ಒಂದು ಪಿಡುಗು: ಅದನ್ನು ತೊಡೆದು ಹಾಕಲು ನಿಸ್ವಾರ್ಥ ಸೇವೆ, ನಿಸ್ವಾರ್ಥ ಜೀವನ ತಮ್ಮದಾಗಬೇಕು: ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಜಿ.ರಮಾ

ಧಾರವಾಡ  ಅಕ್ಟೋಬರ್ 28: ಇಂದು ಎಲ್ಲೆಡೆ ಭ್ರಷ್ಟಾಚಾರದ ಮಾತು ಕೇಳಿ ಬರುತ್ತಿದೆ. ಇದು ಸಮಾಜಕ್ಕೆ ಅಂಟಿದ ಪಿಡುಗು. ಇದನ್ನು ತೊಡೆದು ಹಾಕಲು ನಿಸ್ವಾರ್ಥ ಸೇವೆ, ನಿಸ್ವಾರ್ಥ ಜೀವನ ನಮ್ಮದಾಗಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಹೇಳಿದರು.

- Advertisement -
Ad image

ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕøತಿಕ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಧಾರವಾಡ ಇವರು ಸಂಯುಕ್ತವಾಗಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ-2024 ನ್ನು ಉದ್ಘಾಟಿಸಿ, ಮಾತನಾಡಿದರು.

ಭ್ರಷ್ಟಾಚಾರವು ನಿರಂತರ ಸೇವೆ ಪ್ರಾಮಾಣಿಕತೆಯನ್ನು ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ, ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ಪಾರದರ್ಶಕವಾಗಿ ಮತ್ತು ಆತ್ಮಸಾಕ್ಷಿಯಿಂದ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು.

ನಿಯತ್ತಿನ ದುಡಿಮೆ ಆತ್ಮಬಲ ಹೆಚ್ಚಿಸುತ್ತದೆ. ಕಾಯಕ ಶುದ್ಧವಾಗಿದ್ದರೆ ಕಾಯಲು ಬೇರೆಯವರ ಅಗತ್ಯವಿಲ್ಲ. ಇತರರ ದುಡಿಮೆಯನ್ನು ಗುರುತಿಸಿ, ಗೌರವಿಸೋಣ. ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಬದುಕೋಣ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಜಿ.ರಮಾ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಅತಿ ಆಸೆ ಪಡದೆ, ಬಂದಿರುವ ಪಾಲನ್ನು ಅನುಭವಿಸಬೇಕು. ಪ್ರತಿಯೊಬ್ಬರಿಗೆ ಕೆಲಸದಲ್ಲಿ ತೃಪ್ತಿ, ಉತ್ತಮ ಆರೋಗ್ಯ ಮುಖ್ಯ. ಸದ್ಭಾವನೆಯಿಂದ ಕರ್ತವ್ಯ ನಿರ್ವಹಿಸಿದರೆ ಬದುಕು ಸುಂದರವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪ್ರತಿ ಸರಕಾರಿ ನೌಕರರಲ್ಲಿ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇದ್ದಾಗ ಯಾವ ಸಮಸ್ಯೆಗಳು ಬರುವುದಿಲ್ಲ. ಮತ್ತು ಬೇರೆಯವರಿಗೆ ತೊಂದರೆಯೂ ಆಗುವುದಿಲ್ಲ ಎಂದು ಹೇಳಿದರು.

ನಮ್ಮ ಬದುಕು ಇತರರಿಗೆ ಮಾದರಿ ಆಗಬೇಕು. ನಮ್ಮ ದೇಶದ ನಾಡಿನ ಅನೇಕ ಮಹನೀಯರು ಅತ್ಯಂತ ಉನ್ನತ ಹುದ್ದೆಗಳಲ್ಲಿ ಇದ್ದರೂ, ಭ್ರಷ್ಟಾಚಾರ, ಸ್ವಜ ಪಕ್ಷಪಾತಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆಯಿಂದ ಬದುಕಿ, ನಮಗೆಲ್ಲ ಮಾದರಿ ಆಗಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರ ತಡೆಗಟ್ಟುವುದು ನಮ್ಮೆಲ್ಲರ ಕೈಯಲ್ಲಿ ಇದೆ. ಪ್ರಾಮಾಣಿಕತೆ ನಿಷ್ಠೆಯಿಂದ ನಮ್ಮ ನಮ್ಮ ಕೆಲಸಗಳನ್ನು ನಿರ್ವಹಿಸಿದರೆ ಸ್ವಸ್ಥ, ಸ್ವಚ್ಛ ಸಮಾಜ ನಿರ್ಮಾಣವಾಗಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿ.ಕಾ.ಸೇ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಪ್.ದೊಡ್ಡಮನಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ವೇದಿಕೆಯಲ್ಲಿ ಇದ್ದರು.

ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಹುನಮಂತರಾಯ ಅವರು ಸ್ವಾಗತಿಸಿ, ಮಾತನಾಡಿ, ಜಿಲ್ಲೆಯಲ್ಲಿ ಜಾಗೃತಿ ಅರಿವು-2024 ರ ಅಡಿ ಇಂದಿನಿಂದ ಒಂದು ವಾರದ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜನರಲ್ಲಿ ಜಾಗೃತ ದಳದ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮವನ್ನು ಅಲಿ ಮಹಮ್ಮದ ತಹಶೀಲ್ದಾದ ಅವರು ನಿರೂಪಿಸಿದರು. ಹಿರಿಯ ನ್ಯಾಯವಾದಿ ಸೋಮಶೇಖರ ಜಾಡರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share This Article
error: Content is protected !!
";