ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ ಹತ್ತಿ ಬೆಳೆಯುವ ರೈತರು ನಕಲಿ ಮತ್ತು ಕಳಪೆ ಬೀಜಗಳನ್ನು ಬಿತ್ತನೆ ಮಾಡುತ್ತಿರುವ ಕಾರಣ ಬೆಳೆ ವಿಫಲವಾಗಿ ಅಥವಾ ಬೆಳೆಯು ಪಿಂಕ್ ಬೋಲ್ ವಾರ್ಮ್ ಪೀಡಿತವಾಗಿ ಇಳುವರಿ ಕುಂಠಿತಗೊಳ್ಳುತ್ತಿದೆ. ಈ ಮೂಲಕ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ಅನೇಕರು ಹತ್ತಿ ಕೃಷಿಯಲ್ಲಿ ಭವಿಷ್ಯವಿಲ್ಲ ಎಂದು ನಿರುತ್ಸಾಹಗೊಳ್ಳುತ್ತಿದ್ದಾರೆ. ಹತ್ತಿ ಬೆಳೆಯ ಇಳುವರಿ ಇಲ್ಲದೇ ಇರುವ ಕಾರಣ ಬಳ್ಳಾರಿ ನಗರದಲ್ಲಿರುವ 54 ಕ್ಕೂ ಹೆಚ್ಚಿನ ಹತ್ತಿ ಮಿಲ್‌ಗಳು ಸಂಪೂರ್ಣ ನಷ್ಟಕ್ಕೊಳಗಾಗಿ ಮುಚ್ಚಿದ್ದು, ಕೈಗಾರಿಕಾ ಚಟುವಟಿಕೆಗಳು ಇಲ್ಲದಿರುವ ಕಾರಣ ಅನೇಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.
ಕಾರಣ ಹತ್ತಿ ಬೆಳೆ ಬೆಳೆಯುವ ರೈತರು ಪ್ರಮಾಣೀಕೃತ ಬೀಜಗಳನ್ನು (ಸರ್ಟಿಫೈಯ್ಡ್ ಬೀಜಗಳನ್ನು) ಬಳಕೆ ಮಾಡಿ ವೈಜ್ಞಾನಿಕವಾಗಿ ಹತ್ತಿ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ನೇತೃತ್ವದಲ್ಲಿ ಬಳ್ಳಾರಿ ಕಾಟನ್ ಮಿಲ್ ಅಸೋಸಿಯೇಷನ್, ಕರ್ನಾಟಕ ಕಾಟನ್ ಮಿಲ್ ಅಸೋಸಿಯೇಷನ್ ಮತ್ತು ಹತ್ತಿ ಬೆಳೆಯುವ ರೈತರ ಸಮೂಹದ ಜಂಟಿ ಆಶ್ರಯದಲ್ಲಿ ಜೂನ್ 11ರ ಮಂಗಳವಾರ ಬೆಳಗ್ಗೆ 10 ಎಪಿಎಂಸಿ ಯಾರ್ಡ್ನಲ್ಲಿ ಇರುವಂತ ರೈತ ಭವನ ಸಭಾಂಗಣದಲ್ಲಿ `ಹತ್ತಿ ಬೆಳೆಗಾರರ ಜಾಗೃತಿ ಸಮಾವೇಶ’ವನ್ನು ಹಮ್ಮಿಕೊಂಡಿದೆ.
ಈ ಜಾಗೃತಿ ಶಿಬಿರದಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಬಳ್ಳಾರಿ ಗ್ರಾಮೀಣ, ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ, ಚಿತ್ರದುರ್ಗ ಜಿಲ್ಲೆಯ ರಾಂಪುರ, ಮೊಳಕಾಲ್ಮೂರು ಹಾಗೂ ನೆರೆಯ ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ,ಗುಂತಕಲ್ಲು ಸೇರಿ ವಿವಿಧ ಮಂಡಲಗಳ ರೈತರು ಪಾಲ್ಗೊಂಡು ವೈಜ್ಞಾನಿಕವಾಗಿ ಹತ್ತಿ ಬೆಳೆಯುವ ಕುರಿತು ಜಾಗೃತರಾಗಬೇಕು. ಅಲ್ಲದೇ, ಗುಣಮಟ್ಟದ – ಪ್ರಮಾಣೀಕೃತ ಬೀಜಗಳನ್ನು ಬಳಕೆ ಮಾಡಿ, ಉತ್ತಮ ದರ್ಜೆಯ ಹತ್ತಿಯನ್ನು ಬೆಳೆದು ಆರ್ಥಿಕವಾಗಿ ಸದೃಢರಾಗುವ ಕುರಿತು ಮಾಹಿತಿ ಪಡೆಯಬೇಕು ಎಂದು ಕೋರಲಾಗಿದೆ ಹಾಗೂ ಎಲ್ಲಾ ರೈತರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಕೋರಲಾಗಿದೆ.