ವಿಜಯನಗರ ವಾಣಿ ಸುದ್ದಿ
ಕೊಟ್ಟೂರು : ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ
ಕೊಟ್ಟೂರೇಶ್ವರ ರಥೋತ್ಸವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ನಾಳೆ ಸಂಜೆ ರಥೋತ್ಸವ ಜರುಗಲಿದ್ದು ದೇವಸ್ಥಾನದ ಮುಂಭಾಗದಿಂದ ಪಟ್ಟಣದ ರಸ್ತೆಗಳ ತುಂಬೆಲ್ಲಾ ವಿದ್ಯುತ್ ದೀಪ ಅಲಂಕಾರಗಳಿಂದ ಪಟ್ಟಣ ಝಗ ಮಗಿಸುತ್ತಿದೆ . ಧಾರ್ಮಿಕ ದತ್ತಿ ಇಲಾಖೆ ಪಟ್ಟಣದಲ್ಲಿ ಮೈಸೂರು ದಸರಾ ನೆನಪಿಸುವಂತೆ ರಥೋತ್ಸವಕ್ಕೂ ಮುನ್ನ ವಿದ್ಯುತ್ ದೀಪಗಳನ್ನು ಅಳವಡಿಸಿ ಭಕ್ತರನ್ನು ಸೆಳೆಯುತ್ತಿದೆ. ಪಾದಯಾತ್ರೆ ಮೂಲಕ ಭಕ್ತರು ಉರಿ ಬಿಸಿಲನ್ನು ಲೆಕ್ಕಿಸಿದೆ ಪ್ರವಾಹೋಪಾದಿಯಲ್ಲಿ ಬಂದು ಸೇರುತ್ತಿದ್ದಾರೆ. ದಾರಿಉದ್ದಕ್ಕೂ ಇಲ್ಲಿನ ಸೇವಾ ಸಮಿತಿಯವರು ನೀರು ಪ್ರಸಾದ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆಯಿಂದ ಔಷದ ಉಪಚಾರ ಒಳಗೊಂಡಂತೆ ವಿವಿಧ ರೀತಿಯ ಕೈಂಕರ್ಯಗಳನ್ನು ಪ್ರತಿವರ್ಷದಂತೆ ಈ ವರ್ಷವೂ ಕೈಗೊಂಡಿದ್ದಾರೆ ಮತ್ತಿಹಳ್ಳಿ ಕ್ರಾಸ್ ನಲ್ಲಿ ಗುರು ಕೊಟ್ಟೂರೇಶ್ವರ ಟ್ರಸ್ಟ್ ವತಿಯಿಂದ ಪಾದಯಾತ್ರೆ ಭಕ್ತರಿಗೆ ಊಟ ವಸತಿ ಸೇರಿದಂತೆ ಎಲ್ಲಾ ರೀತಿಯ ಸೇವೆಗಳನ್ನು ನೀಡಲು ಯುವಕರ ತಂಡ ನೆರವಾಗಿ ನಿಂತಿದೆ. ಹಾಗೂ ಕೊಟ್ಟೂರಿನಲ್ಲಿ ಟ್ಯಾಕ್ಸಿ ಮತ್ತು ಕಾರು ಮಾಲೀಕರ ಸಂಘ ಹಾಗೂ ಇತರ ಸಂಘ-ಸಂಸ್ಥೆಗಳು ಪ್ರಸಾದ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಜ್ಜುಗೊಂಡಿವೆ.
ರಥೋತ್ಸವದ ಅಂತಿಮ ನಿರ್ಮಾಣ ಕಾರ್ಯವಾದ ಜಲ್ಲೆಯನ್ನು ಏರಿಸಿ ಕಳಸ ಪ್ರತಿಷ್ಠಾಪಿಸಿ ತೇರಿಗೆ ಹೊಸ ಬಟ್ಟೆ ಹೊದಿಸಿ ವಿವಿಧ ಫಲ ಪುಷ್ಪಗಳೊಂದಿಗೆ ಅಲಂಕರಿಸಿ ಇಲ್ಲಿನ ಕೋಟೆ ಬಾಗದ ಯುವಕರು ಸಿದ್ಧಗೊಳಿಸಿದ್ದಾರೆ.