Ad image

ದಿಟ್ಟ ಹೆಜ್ಜೆಯ ಮೌನ ಸಾಧಕ. .ದಾನ ಚಿಂತಾಮಣಿ. .ಅಕ್ಕಿ ಕೊಟ್ರಪ್ಪ

Vijayanagara Vani
ದಿಟ್ಟ ಹೆಜ್ಜೆಯ ಮೌನ ಸಾಧಕ. .ದಾನ ಚಿಂತಾಮಣಿ. .ಅಕ್ಕಿ ಕೊಟ್ರಪ್ಪ

ಕಲ್ಯಾಣ ಕರ್ನಾಟಕವು ಶರಣರು ನಡೆದಾಡಿದ ಪುಣ್ಯ ನೆಲ. ಶರಣರ ವೈಚಾರಿಕ ನೆಲೆಯ ಜೊತೆಗೆ ಕಾಯಕ, ದಾಸೋಹ, ದಾನ ಧರ್ಮಗಳು ಈ ಮಣ್ಣಿನಲ್ಲಿ ಬೆರೆತುಕೊಂಡಿವೆ. ಅದರ ಫಲವಾಗಿ ಜನರ ಮನದಲ್ಲಿ ಈ ಗುಣಗಳು ಸದಾ ಹಸಿರಾಗಿವೆ. ಆ ಹಸಿರು ಕೆಲವರಲ್ಲಿ ಹೂವಾಗಿ, ಕಾಯಿಯಾಗಿ, ಹಣ್ಣಾಗಿ ಎಲ್ಲರಿಗೂ ಸಿಹಿಯನ್ನು ಹಂಚಿದ ಸಾಕಷ್ಟು ಮಹನೀಯರ ಉದಾಹರಣೆಗಳನ್ನು ಈ ಪ್ರದೇಶದಲ್ಲಿ ಕಾಣುತ್ತೇವೆ. ಈ ಮಹನೀಯರು ಎಂದೂ ಪ್ರಚಾರವನ್ನು ಬಯಸದೇ, ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತೆ ತಮ್ಮನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡಿರುತ್ತಾರೆ. ಎಲೆಮರೆಯ ಕಾಯಂತೆ ಇರುವ ಇಂತಹ ಶರಣರಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಗೆ ಸೇರಿದ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪನವರು ಅಗ್ರಗಣ್ಯರಾಗಿದ್ದಾರೆ.

ತಂಬ್ರಹಳ್ಳಿಯ ಶ್ರಿ ಅಕ್ಕಿ ತೋಟಪ್ಪ ಮತ್ತು ಶ್ರೀಮತಿ ಅಕ್ಕಿ ಬಸಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿ ಅಕ್ಕಿ ಕೊಟ್ರಪ್ಪ ಜೂನ್ 13, 1933 ರಂದು ಜನಿಸಿದರು. ಇವರು ಸಣ್ಣವರಿರುವಾಗ ತಂದೆ ತೀರಿಕೊಂಡಿದ್ದರಿ0ದ, ತಾಯಿ ಮತ್ತು ಸೋದರ ಮಾವನ ಆಶ್ರಯದಲ್ಲಿ ಬೆಳೆದರು. 6ನೇ ತರಗತಿಗೆ ಶಾಲೆಗೆ ಗುಡ್ ಬೈ ಹೇಳಿ ಮನೆಯ ಹಿರಿಯರ ನಿರ್ವಹಿಸುತ್ತಿದ್ದ ವ್ಯವಸಾಯಕ್ಕೆ ಇಳಿದರು. ಆ ಸಮಯದಲ್ಲಿ ಈ ಭಾಗದ ಗಾಂಧಿ ಎಂದೇ ಪ್ರಸಿದ್ಧರಾದ ಬಾಚಿಗೊಂಡನಹಳ್ಳಿಯ ಚೆನ್ನಬಸವನಗೌಡರ ಮುಖಂಡತ್ವದಲ್ಲಿ ಸಹಕರ ಸಂಘದ ಸ್ಟೋರ್ ಪ್ರಾರಂಭವಾಯಿತು. ಅದರಲ್ಲಿ ಗುಮಾಸ್ತರಾಗಿ ಇವರು ಕೆಲಸಕ್ಕೆ ಸೇರಿದರು. ಅದರ ಮುಖಾಂತರ ತುಂಗಭದ್ರ ಅಣೆಕಟ್ಟಿನಿಂದ ನಿರಾಶ್ರಿತರಿಗೆ ಪುರ್ನವಸತಿಗಾಗಿ ಮನೆ ಕಟ್ಟುವ ಸಾಮಾಗ್ರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ವಿತರಿಸಿದರು. ಕೊಟ್ರಪ್ಪನವರ ಈ ಕಾಯಕ ಅವರನ್ನು ಹೆಚ್ಚು ಜನಪ್ರಿಯ ಗೊಳಿಸುತ್ತಾ, ಸುತ್ತ ಮುತ್ತಲಿನ ಪ್ರದೇಶದಲ್ಲಿ ಹೆಸರುವಾಸಿಯಾಗುವಂತೆ ಮಾಡಿತು.
ಗುಮಾಸ್ತರಾಗಿ 17 ವರ್ಷದ ಸೇವೆ ಸಲ್ಲಿಸಿದ ಫಲ ಹಾಗೂ ಜನರ ಪ್ರೀತಿಯಿಂದಾಗಿ 1968ರಲ್ಲಿ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. ನಂತರ 1978ರವರೆಗೂ ಅಂದಿನ ಮಂಡಲದ ಪಂಚಾಯಿತಿ ಪ್ರಧಾನರಾಗಿ ಜನಮನ್ನಣೆ ಗಳಿಸಿದರು. ಕೊಟ್ರಪ್ಪನವರ ಜನಪ್ರಿಯತೆ ಕಂಡು ಚೆನ್ನಬಸವನಗೌಡರು ಇವರನ್ನು ವಿಧಾನಸಭೆಗೆ ಸ್ಪರ್ಧಿಸುವಂತೆ ಕೇಳಿದರು. ಆದರೆ ಎಂದಿಗೂ ಅಧಿಕಾರ, ಅಂತಸ್ತಿಗಾಗಿ ಆಸೆ ಪಡದ ಕೊಟ್ರಪ್ಪನವರು ಅದನ್ನು ನಯವಾಗಿ ತಿರಸ್ಕರಿಸಿ, ಮತ್ತೆ ಚೆನ್ನಬಸವನಗೌಡರನ್ನು ಚುನವಣೆಗೆ ನಿಲ್ಲಿಸಿ, ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.

- Advertisement -
Ad imageAd image

ತಮ್ಮ ಬದುಕಿಗಾಗಿ ಕಿರಾಣಿ ಅಂಗಡಿ, ಕಾಳು-ಕಡಿ ವ್ಯಾಪಾರ, ಹಣಕಾಸಿನ ವ್ಯವಹಾರವನ್ನು ಸತ್ಯ, ನ್ಯಾಯ, ದಕ್ಷತೆ ಮತ್ತು ಮಾನವೀಯ ಗುಣಗಳಿಂದಾಗಿ, ಅತ್ಯಂತ ಸಂಕಷ್ಟದ ದಿನಗಳಿಂದ ಮುಕ್ತರಾಗಿ ಮೇಲೆದ್ದು ಬಂದರು. ಕುಟುಂಬದವರನ್ನು ಮಾತ್ರವಲ್ಲದೇ ತಮ್ಮ ಸುತ್ತ ಮುತ್ತಲಿನ ಎಲ್ಲರನ್ನೂ ಪ್ರೀತಿಸುವ ಬಹುದೊಡ್ಡ ವಿಶಾಲ ಮನಸ್ಸನ್ನು ಅವರು ಹೊಂದಿದ್ದಾರೆ. ಯಾವುದೇ ಜಾತಿ, ಧರ್ಮ ಎಂದು ತಾರತಮ್ಯ ಮಾಡದೇ ಎಲ್ಲರನ್ನು ಬರಸೆಳೆದು ಅಪ್ಪಿಕೊಳ್ಳುವ ಗುಣ ಹೊಂದಿದ್ದರಿ0ದ ಕೊಟ್ರಪ್ಪನವರ ಹೆಸರು ಎಲ್ಲರ ನಾಲಿಗೆಯಲ್ಲಿಯೂ ನಲಿದಾಡುತ್ತಿದೆ.

1980ರ ಸಮಯದಲ್ಲಿ ಚನ್ನಬಸವನಗೌಡರು 18 ವರ್ಷಗಳ ಕಾಲ ಎಂಎಲ್ಸಿ ಆಗಿ ನಿವೃತ್ತಿಯಾಗಿದ್ದರು. ಅದೇ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಗುಂಡೂರಾಯರು ಮುಖ್ಯಮಂತ್ರಿಗಳಾಗಿದ್ದರು. ನರಗುಂದದಲ್ಲಿ ರೈತರ ಮೇಲೆ ಗೋಲಿಬಾರ್ ನಡೆಯಿತು. ಇದಕ್ಕೆ ವಿರುದ್ಧವಾಗಿ ರಾಜ್ಯಾದ್ಯಂತ ರೈತರ ಚಳವಳಿಗೆ ತೀವ್ರಗೊಂಡಿತು. ಚೆನ್ನಬಸವನಗೌಡರು ಮತ್ತು ಅಕ್ಕಿ ಕೊಟ್ರಪ್ಪನವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಜನ ಈ ಪ್ರಕರಣವನ್ನು ಖಂಡಿಸಿ ಸರ್ಕಾರದ ವಿರುದ್ಧ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಅದರ ಫಲವಾಗಿ ಇವರೆಲ್ಲರನ್ನೂ ಸರ್ಕಾರ ಬಂಧಿಸಿತು. ಹಡಗಲಿ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯಿತು. ಆಗ ಮಾನ್ಯ ಎಂ.ಪಿ.ಪ್ರಕಾಶ್ ಅವರು ಇವರ ವಕೀಲರಾಗಿದ್ದರು. ನ್ಯಾಯಾಲಯದಲ್ಲಿ ಇವರಿಗೆ ತಪುö ಒಪ್ಪಿಕೊಳ್ಳಿ ನಿಮ್ಮನ್ನು ಬಿಟ್ಟುಬಿಡುತ್ತೇವೆ ಎಂದಾಗ ಕೊಟ್ರಪ್ಪನವರ ಸಹಿತ ಯಾರು ಒಪ್ಪಲಿಲ್ಲ. ಕೊನೆಗೆ ಇವರಿಗೆ ಏಳು ದಿನಗಳ ಜೈಲು ಶಿಕ್ಷೆಯಾಯಿತು. ಅದಾದ ನಂತರ ಹುಬ್ಬಳ್ಳಿಯಲ್ಲಿ ರೈತ ಸಂಘದ ಸಭೆಗೆ ಇವರು ಹಾಜರಾದರು. ಮರಳಿ ತಂಬ್ರಹಳ್ಳಿಗೆ ಬರುವಾಗ ಚೆನ್ನಬಸವನಗೌಡರು ಗದುಗಿನ ತೋಂಟದಾರ್ಯ ಮಠಕ್ಕೆ ಕರೆದು ಕೊಂಡು ಹೋದರು. ಅಲ್ಲಿ ಅಜ್ಜನವರ ದರ್ಶನದ ನಂತರ ಪೂಜ್ಯರ ವ್ಯಕ್ತಿತ್ವ, ಗಾಂಭೀರ್ಯ, ನುಡಿಗಳನ್ನು ಕಂಡು ಅಚ್ಚರಿ ಪಟ್ಟು ಅವರಿಗೆ ಶರಣಾದರು. ಇದು ಕೊಟ್ರಪ್ಪನವರ ಜೀವನದಲ್ಲಿ ಮಹತ್ತರ ಘಟನೆಯಾಗಿ, ಅವರೊಳಗಿದ್ದ ಸಮಜಮುಖಿ ಭಾವನೆಯನ್ನು ಉಜ್ವಲಗೊಳಿಸಿತು.

ಕೊಟ್ಟಪ್ಪನವರ ಮತ್ತು ಗದುಗಿನ ಶ್ರೀಗಳ ಒಡನಾಟ, ಬ್ಯಾಂಧವ್ಯ ದಿನದಿಂದ ದಿನಕ್ಕೆ ವೃದ್ಧಿಯಾಯಿತು. ತೋಂಟದಶ್ರೀಗಳಿಗೆ ಚೆನ್ನಬಸವನಗೌಡರು ಬಗ್ಗೆ ಅಪಾರವಾದ ಗೌರವವಿತ್ತು. ಅವರ ಬದುಕು ಮತ್ತು ಸಾಧನೆ ಇಂದಿನವರಿಗೆ ಮಾದರಿಯಾಗಲಿ ಎಂದು ಗದಗಿನ ಮಠದಿಂದ “ಮಲ್ಲಿಗೆನಾಡ ಗಾಂಧಿ” ಪುಸ್ತಕ ಪ್ರಕಟಿಸಿದ್ದರು. ಕೆಲವು ದಿನಗಳಲ್ಲಿ ಆ ಪುಸ್ತಕಗಳು ಮುಗಿದುಹೋದವು. ಆ ಹೊತ್ತಿಗೆಯನ್ನು ಮತ್ತೆ ಪ್ರಕಟಿಸಬೇಕೆಂದು ಚೆನ್ನಬಸವನಗೌಡರ ಪುತ್ರರಾದ ಕೊಟ್ರಗೌಡ ಮತ್ತು ವಿರುಪಾಕ್ಷಗೌಡರು ಮತ್ತು ಇತರರು ಪೂಜ್ಯ ಅಜ್ಜನವರಲ್ಲಿ ವಿನಂತಿ ಮಾಡಿಕೊಂಡರು. ಅಜ್ಜನವರು ನಾವು ಮೊದಲ ಬಾರಿ ಪ್ರಕಟಿಸಿದ್ದೇವೆ, ಎರಡನೇ ಬಾರಿಗೆ ಪ್ರಕಟಿಸಬೇಕಾದಲ್ಲಿ ತಾವು ದಾನಿಗಳಿಂದ ಹತ್ತು ಸಾವಿರ ರೂ ಸಂಗ್ರಹಿಸಿ ಕೊಡಲು ಸೂಚಿಸಿದರು. ಆದರೆ ಆ ಕುಟುಂಬದವÀರು ಆರ್ಥಿಕವಾಗಿ ಸಬಲರಾಗಿದ್ದಿಲ್ಲ. ಆಗ ಕೊಟ್ರಗೌಡರು ನಮ್ಮ ತಂದೆಯವರಿಗೂ ಹಾಗೂ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪನವರಿಗೂ ಒಳ್ಳೆಯ ಬಾಂಧವ್ಯವಿದೆ. ಹಾಗಾಗಿ ಶ್ರೀಗಳಿಗೆ, ನೀವೇ ಕೊಟ್ರಪ್ಪನವರಿಗೆ ಪತ್ರ ಬರೆಯಿರಿ, ಎಂದಾಗ ಗದುಗಿನ ಶ್ರೀಗಳು ಅಕ್ಕಿಕೊಟ್ರಪ್ಪನವರಿಗೆ ಈ ವಿಷಯ ಕುರಿತು ಪತ್ರವನ್ನು ಬರೆದರು.
ಆ ಪತ್ರದಲ್ಲಿ ‘ನೀವು ಚೆನ್ನಬಸವನಗೌಡರ ಅನುಯಾಯಿಗಳು. ನಿಮಗೂ ಅವರ ಬಗ್ಗೆ ಅಭಿಮಾನವಿದೆ. ಅವರ ಕುರಿತು ಮೊದಲ ಮುದ್ರಣ ಪುಸ್ತಕ ಮುಗಿದಿದೆ. ನೀವು ಹತ್ತು ಸಾವಿರ ನೀಡಿದರೆ, ಎರಡನೇ ಮುದ್ರಣ ಮಾಡಿಸುತ್ತೇವೆ. ನಿಮ್ಮ ಹೆಸರನ್ನು ಮುದ್ರಣ ಸೇವೆ ಎಂದು ಪ್ರಕಟಿಸುತ್ತೇವೆ’ ಎಂದು ಬರೆದರು. ಆದರೆ ಕೊಟ್ರಪ್ಪನವರು ಅದಕ್ಕೆ ಮರು ಪತ್ರ ಬರೆಯದೇ, 3-4 ದಿನಗಳ ನಂತರ ನೇರವಾಗಿ ಗದಗಿನ ಮಠಕ್ಕೆ ಹೋದರು. ಅಜ್ಜನವರನ್ನು ಭೇಟಿಯಾಗಿ ಪತ್ರದ ಬಗ್ಗೆ ವಿಚಾರಿಸಿದರು.
ಆಗ ಶ್ರೀಗಳು “ಹೌದು ನೀವು ಹತ್ತು ಸಾವಿರ ಕೊಟ್ಟರೆ, ನಾವು ಆ ಪುಸ್ತಕವನ್ನು ಎರಡನೆ ಮುದ್ರಣ ಮಾಡಿಸುತ್ತೇವೆ” ಎಂದರು.
ಆಗ ಇವರು “ಹತ್ತು ಸಾವಿರ ಕೊಡುತ್ತೇನೆ, ಪ್ರಿಂಟ್ ಹಾಕಿರುತ್ತೀರಿ, ಅವು ಮುಗಿದ ಮೇಲೆ ಮುಂದೇನು?” ಎಂದರು.
ಆಗ ಪೂಜ್ಯರು “ಹೌದು ಇದು ಯೋಚಿಸಬೇಕಾದ್ದು?” ಎಂದರು.
ಅದಕ್ಕೆ ಕೊಟ್ರಪ್ಪನವರು ಪೂಜ್ಯರಿಗೆೆ “ಚೆನ್ನಬಸವನಗೌಡರು ತುಂಬಾ ಒಳ್ಳೆಯವರು. ಅದಕ್ಕೆ ನಾನು ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ತಾವು ಅದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿಡಿ. ಅದರಲ್ಲಿ ಬರುವ ವಾರ್ಷಿಕ ಬಡ್ಡಿಯನ್ನು ಇಂತಹ ಪುಸ್ತಕ ಪ್ರಕಟಣೆಗಳಿಗೆ ಬಳಸಬಹುದು” ಎಂದು ಸಲಹೆ ನೀಡಿದರು. ಅದಕ್ಕೆ ಅಜ್ಜನವರು ತುಂಬಾ ಸಂತೋಷ ಪಟ್ಟು, ಇವರನ್ನು ಮನದುಂಬಿ ಹರಸಿದರು.
ಶ್ರೀಗಳಿಗೆ ನೀಡಿದ ವಚನದಂತೆ ಬಾಚಿಗೊಂಡನಹಳ್ಳಿಯ ಕೌದಿ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರು. ಅದು ಪುಸ್ತಕ ಪ್ರಕಟಣೆ, ಶಾಲೆಯ ಮಕ್ಕಳ ಓದಿಗೆ ಇಂದಿಗೂ ಆಸರೆಯಾಗಿದೆ.

ಅಕ್ಕಿ ಕೊಟ್ರಪ್ಪನವರಿಗೆ ತಾವು ನೀಡಿದ ದಾನದಿಂದ ಅಗುತ್ತಿರುವ ಮಹತ್ತರ ಕೆಲಸ ಕಂಡು ಸಂತುಷ್ಟರಾದರು. ಇದು ಇಷ್ಟಕ್ಕೆ ನಿಲ್ಲಬಾರದು ಎಂದು ಯೋಚಿಸಿ, ಗದುಗಿನ ಶ್ರೀ ಮಠಕ್ಕೂ ಏನಾದರೂ ದೇಣಿಗೆ ನೀಡಬೇಕು ಎಂಬ ಇವರ ಅಭಿಲಾಷೆಗೆ ಕುಟುಂಬದ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು. ತಕ್ಷಣವೇ ಇವರು ‘ಶ್ರೀಮತಿ ಅಕ್ಕಿ ಬಸಮ್ಮ ತೊಟಪ್ಪ ದತ್ತಿ’ ಹೆಸರಿನಲ್ಲಿ ಗದುಗಿನ ತೋಟದಾರ್ಯ ಪೀಠಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು. ಒಂದು ಲಕ್ಷ ರುಪಾಯಿ ಹಣವನ್ನು ಶ್ರೀಗಳು ಡೆಪಾಜಿಟ್ ಆಗಿ ಇಡಲು ನಿರ್ಧರಿಸಿದರು. ಆ ಹಣಕ್ಕೆ ಪ್ರತಿವರ್ಷ ಬರುವ ಬಡ್ಡಿಹಣದಲ್ಲಿ ಪುಸ್ತಕ ಪ್ರಕಟಣೆ, ಬಡ ಮಕ್ಕಳ ಶಿಕ್ಷಣ, ಮಕ್ಕಳ ಓದಿಗೆ, ಮಠದ ಕಾರ್ಯಕ್ರಮಕ್ಕೆ ಸೇರಿದಂತೆ ಯಾವುದಾದರೂ ಕಾರ್ಯಕ್ರಮಕ್ಕೆ ಬಳಸಿಕೊಳ್ಳವ ಬಗ್ಗೆ ಶ್ರೀಗಳಲ್ಲಿ ವಿನಂತಿಸಿದರು. ‘ದುಡಿಮೆಯ ಸ್ವಲ್ಪಹಣವನ್ನು ಸಮಾಜಕ್ಕೆ ವಿನಿಯೋಗಿಸುವ’ ಕೊಟ್ರಪ್ಪನವರ ದಾನ ಮನೊಭಾವವನ್ನು ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮುಕ್ತಕಂಠದಿAದ ಶ್ಲಾಘಿಸಿದ್ದರು.

ಅಕ್ಕಿ ಕೊಟ್ರಪ್ಪನವರ ಗುಣವನ್ನು ಅಪಾರವಾಗಿ ಮೆಚ್ಚಿಕೊಂಡ ಗದುಗಿನ ಶ್ರೀಗಳು, ತಮ್ಮ ಶ್ರೀಮಠಕ್ಕೆ ಸೇರಿದ ಹದಿನಾಲ್ಕು ಏಕರೆ ಹೊಲದ ಸಂಪೂರ್ಣ ಉಸ್ತುವಾರಿಯನ್ನು ಇವರಿಗೆ ನೀಡಿದರು. ಮೊದ ಮೊದಲಿಗೆ ಪ್ರತಿವರ್ಷ ಹಣವನ್ನು ಮಠಕ್ಕೆ ತಲುಪಿಸುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಪೂಜ್ಯರು “ಈ ಜಮೀನಿನಿಂದ ಬರುತ್ತಿರುವ ಹಣವನ್ನು ಮಠಕ್ಕೆ ತಲುಪಿಸುವುದ ಬೇಡ, ಅಲ್ಲಿಯೇ ಸಂಗ್ರಹವಾಗಿರಲಿ” ಎಂದು ಸೂಚಿಸಿದರು. ಅದರಂತೆ ಕಳೆದ 15-16 ವರ್ಷಗಳಿಂದ ಕೊಟ್ರಪ್ಪನವರು ತಂಬ್ರಹಳ್ಳಿಯಲ್ಲಿ, ಗದುಗಿನ ಶ್ರೀಗಳ -ಹೆಸರಿನಲ್ಲಿ ಪೈಸೆ ಪೈಸೆಯೂ ವ್ಯತ್ಯಾಸವಾಗದ ರೀತಿಯಲ್ಲಿ ಹಣ ಜಮಾ ಮಾಡುತ್ತಿರುವ ಅವರ ಗುಣವನ್ನು ಎಷ್ಟು ಹೊಗಳಿದರೂ ಸಾಲದು. ಇವರೇ ಹೆಚ್ಚು ಮುತುವರ್ಜಿ ವಹಿಸಿ ಆ ಜಮೀನಿಗೆ ನೀರಾವರಿ ವ್ಯವಸ್ಥೆ, ಬೇಲಿ ಹಾಕಿಸಿದರು. ಇದರಿಂದ ಮಠಕ್ಕೆ ಹೆಚ್ಚಿನ ಆದಾಯ ಬರುವಂತಾಯಿತು. ಪ್ರಸ್ತುತ ಹೊಲದ ಆದಾಯ ಪ್ರತಿ ವರ್ಷ ರೂ 1.5ಲಕ್ಷದಷ್ಟು ಬರುತ್ತಿದೆ ಎಂದರೆ ಅದು ಕೊಟ್ಟಪ್ಪನವರ ಸಾಮಾಜಿಕ ಕಳಕಳಿ ಮತ್ತು ಪಾರದರ್ಶಕ ವ್ಯಕ್ತಿತ್ವವನ್ನು ತೋರಿಸುತ್ತದೆ. ಗದುಗಿನ ಶ್ರೀಗಳು “ಸಾರ್ವಜನಿಕವಾಗಿ ಬರುವ ಹಣದ ಒಂದು ರೂಪಾಯಿಯೂ ವ್ಯಯವಾಗ ಬಾರದು” ಎನ್ನುವ ಮಾತನ್ನು ಕೊಟ್ರಪ್ಪನವರು ಅಕ್ಷರಸಹ ಜಾರಿಗೆ ತಂದಿದ್ದಾರೆ.

ಅಕ್ಕಿ ಕೊಟ್ರಪ್ಪನವರಿಗೆ ಶಿಕ್ಷಣದ ಬಗ್ಗೆ ಅಪಾರ ಪ್ರೀತಿ. ತಾವು ಹೆಚ್ಚು ಓದದಿದ್ದರೂ ತಮ್ಮ ಭಾಗದ ಮಕ್ಕಳು ಅದರಿಂದ ವಂಚಿತರಾಗಬಾರದು ಎನ್ನುವ ಅಭಿಲಾಷೆ ಅಧಿಕವಾಯಿತು. ಅದಕ್ಕೆ ತಮ್ಮ ಊರಿನ ದಾನಿಗಳ ಮನ ಒಲಿಸಿ ಬಳ್ಳಾರಿ ವಿವಿ ಸಂಘಕ್ಕೆ ದಾನ ನೀಡಲು ಪ್ರೇರೇಪಣೆ ನೀಡಿದರು. ಅದರ ಫಲವಾಗಿ ಪ್ರೌಢಶಾಲೆ (ಕಿನ್ನಾಳ ಪೊರಮ್ಮಾಂಬೆ ಗುರುಸಿದ್ಧಪ್ಪ ಪ್ರೌಢಶಾಲೆ)ಆರಂಭವಾಗಿ ಮಕ್ಕಳ ಮನದಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸಿತು. ಆದರೆ ಆ ಸಂತಸ ಅವರಿಗೆ ಕೆಲವು ವರ್ಷ ಮಾತ್ರ ದೊರಕಿತು. ಹೈಸ್ಕೂಲ್ ನಂತರ ಪಿಯುಸಿಗಾಗಿ ಮಕ್ಕಳು ಹ.ಬೊ.ಹಳ್ಳಿಗೆ ಬರಲು ಪರದಾಡುತ್ತಿದ್ದರು. ಅದನ್ನು ನೋಡಿದ ಇವರ ಕರುಳು ಚುರುಕ್ ಎಂದಿತು. ತಕ್ಷಣವೇ ಮತ್ತೆ ವಿವಿ ಸಂಘಕ್ಕೆ ತಾವೇ ಸ್ವತಃ ಜಮೀನು ಮತ್ತು ಹಣವನ್ನು ನೀಡುವ ಮೂಲಕ ಪಿಯು ಕಾಲೇಜು ಪ್ರಾರಂಭಕ್ಕೆ ಕಾರಣರಾದರು. ತಂಬ್ರಹಳ್ಳಿಯುoತಹ ಗ್ರಾಮೀಣ ಪ್ರದೇಶದಲ್ಲಿ ‘ಅಕ್ಕಿ ಬಸಮ್ಮ ತೋಟಪ್ಪ ಸ್ಮಾರಕ ಪಿ.ಯು.ಕಾಲೇಜು’ ಸ್ಥಾಪಿಸಿದ್ದು ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಅಲ್ಲಿಗೆ ಅವರ ಕನಸು ಕೊನೆಗೊಂಡಿಲ್ಲ. ಪದವಿ ಕಾಲೇಜು, ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸುವ ಮುಖಾಂತರ ಗ್ರಾಮೀಣ ಪ್ರತಿಬೆಗಳಿಗೆ ಅವಕಾಶ ಒದಗಿಸಲು ಶ್ರಮಿಸುತ್ತಲೇ ಇದ್ದಾರೆ. ಅವರ ಶಿಕ್ಷಣ ಪರ ಕಾಳಜಿ ನಿಜವಾಗಿಯೂ ಅವರ ವ್ಯಕ್ತಿತ್ವವದ ಗೌರವವನ್ನು ಇಮ್ಮಡಿಗೊಳಿಸಿದೆ.

ಅಕ್ಕಿ ಕೊಟ್ರಪ್ಪನವರಿಗೆ ಮೊದಲಿಂದಲು ದೈವ ಭಕ್ತಿ ಅಧಿಕವಾಗಿತ್ತು. ತಮ್ಮ ಹೆಸರಿನಲ್ಲಿರುವ ಕೊಟ್ರೇಶನು ಅವರ ಮನವನ್ನು ಸಂಪುರ್ಣವಾಗಿ ಅಲಂಕರಿಸಿದ್ದನು. ಅದಕ್ಕೆ ತಂಬ್ರಹಳ್ಳಿಯಲ್ಲಿ ಕೊಟ್ಟೂರೇಶ್ವರ ದೇವಸ್ಥಾನ ನಿರ್ಮಿಸಲು ಯೋಚಿಸಿದರು. ಅದಕ್ಕೆ ತಾವೇ ಸ್ವಂತವಾಗಿ 15ಲಕ್ಷ ರುಪಾಯಿಗಳಿಗಿಂತ ಹೆಚ್ಚಿನ ಹಣ ಖರ್ಚು ಮಾಡಿ ನಿರ್ಮಿಸಿದ್ದಾರೆ. ಇಂದು ಅದು ಊರಿನ ಸಮಸ್ತರೂ ಪೂಜಿಸುತ್ತ ಅನೇಕ ಕಾರ್ಯಕ್ರಮಗಳು ನಡೆಯುವ ಮುಖ್ಯ ಕೇಂದ್ರವಾಗಿದೆ. ಅದರ ಜೊತೆಗೆ ಊರಿನ ಇತರೆ ಎಲ್ಲಾ ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಧಾರ, ರಥ ನಿರ್ಮಾಣ ಇಂತಹ ಯಾವುದೇ ಧಾರ್ಮಿಕ ಕೆಲಸಗಳಿದ್ದಲ್ಲಿ ಅದರ ನೇತೃತ್ವ ವಹಿಸಿಕೊಳ್ಳಲು ಕೊಟ್ರಪ್ಪನವರು ಎಂದಿಗೂ ಹಿಂದು ಮುಂದು ನೋಡಿದವರಲ್ಲ. ಇವರು ಜವಬ್ಧಾರಿ ತೆಗೆದುಕೊಂಡರೆ ಅ ಕೆಲಸ ಪುರ್ಣವಾಗುತ್ತದೆ ಎನ್ನುವ ಬಲವಾದ ನಂಬಿಕೆ ಊರಿನವರಲ್ಲಿ ಮನ ಮಾಡಿದೆ. ಹಾಗೆಂದು ಅಂತಹ ಕೆಲಸಗಳನ್ನು ಎಂದೂ ಇವರು ಏಕಪಕ್ಷೀಯವಾಗಿ ನಿರ್ಧಾರ ಮಾಡಿದವರಲ್ಲ. ಗ್ರಾಮದ ಸರ್ವರೂ ಅದರಲ್ಲಿ ಒಳಗೊಳ್ಳಬೇಕು. ಒಂದು ರುಪಾಯಿ ದಾನ ಕೊಟ್ಟರೂ ಇವರು ಗೌರವದಿಂದ ಅದನ್ನು ಸ್ವೀಕರಿಸುತ್ತಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಬಹುತೇಕ ಕೆಲಸಗಳಲ್ಲಿ ಅತಿ ಹೆಚ್ಚು ಹಣ ಇವರೇ ಕೈಯಿಂದ ಹಾಕಿದರೂ ತಾವು ದಾನ ನೀಡಿದ್ದೇನೆ ಎಂದೂ ಉಬ್ಬಲಿಲ್ಲ. ದಾನ ನೀಡಿದ್ದು ಒಂದು ಕೈಗೆ ಗೊತ್ತಾದರೆ ಇನ್ನೊಂದು ಕೈಗೆ ತಿಳಿಯಬಾರದು ಎನ್ನುವಂತೆ ಮತ್ತು ಬಸವಣ್ಣನವರ ವಚನದಂತೆ “. . . . .ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಢಂಗುರ. . . .” ಎನ್ನುವುದನ್ನು ಸದಾ ಪರಿಪಾಲಿಸುತ್ತಿರುವುದು ಇವರ ಹೆಗ್ಗಳಿಗೆ.

ಅಕ್ಕಿ ಕೊಟ್ಟಪ್ಪನವರಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವಿಭಕ್ತ ಕುಟುಂಬದoತಿರುವ ಈ ಕುಟುಂಬದವರು ತಮ್ಮ ತಮ್ಮ ಉದ್ಯೋಗಗಳಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ. ಆದಾಗ್ಯೂ ಮಕ್ಕಳೆಲ್ಲರೂ ತಮ್ಮ ತಂದೆಯ ಮಾತಿಗೆ ಎಂದೂ ಇಲ್ಲವೆನ್ನದಂತೆ ಗೌರವದಿಂದ ಕಾಣುತ್ತಿದ್ದಾರೆ. ಅದಕ್ಕೆ ಪೂರಕ ಎನ್ನುವಂತೆ ಕೊಟ್ರಪ್ಪನವರು ತಮ್ಮ ಕುಟುಂಬದ ಆದಾಯದಲ್ಲಿ ಒಂದು ಟ್ರಸ್ಟ್ ಮಾಡಲು ಯೋಚಿಸಿ, ಗದುಗಿನ ಶ್ರೀಗಳ ಅಪ್ಪಣೆ ಪಡೆದರು. ಅದರ ಅಂಗವಾಗಿ “ಶ್ರೀಮತಿ ಅಕ್ಕಿ ಬಸಮ್ಮ ತೋಟಪ್ಪ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್” ಪ್ರಾರಂಭವಾಯಿತು. ಅದರ ಗೌರವ ಅಧ್ಯಕ್ಷರಾಗಿ ಗದುಗಿನ ಅಜ್ಜನವರನ್ನೇ ಮಾಡಿದ್ದಾರೆ. ಕೊಟ್ರಪ್ಪನವರು ಅದರ ಅಧ್ಯಕ್ಷರಾಗಿ, ಆ ಟ್ರಸ್ಟ್ ಮುಖಾಂತರ ಅನೇಕ ಜನರಿಗೆ ಉಪಯೋಗವಾಗುವ ಅಂದರೆ ಕ್ರೀಡಾಕೂಟಗಳು, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು, ವಿಜ್ಞಾನ ಶಿಕ್ಷಕರಿಗೆ ತರಬೇತಿ ಶಿಬಿರ, ಸಾಹಸ ಮತ್ತು ಪ್ರಕೃತಿ ಪ್ರೇಮ ಬೆಳೆಸುವ ಶಿಬಿರ, ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಹೀಗೆ ಅನೇಕ ಮತ್ತು ವೈವಿಧ್ಯಮಯ ಹತ್ತು ಹಲವು ಕಾರ್ಯಕ್ರಮಗಳನ್ನು ತಾಲೂಕಿನ ವಿವಿಧ ಕಡೆಗಳಲ್ಲಿ ಆಯೋಜಿಸಿದ್ದಾರೆ. ಬಹಳ ವಿಶೇಷ ಎಂದರೆ ಈ ಟ್ರಸ್ಟ್ನಲ್ಲಿ ಹಣ ಇಡುವ ವಿಧಾನ, ಬಳಸುವಾಗ ಸಾರ್ವಜನಿಕ ದತ್ತಿನಿಧಿ ಮತ್ತು ಧಾರ್ಮಿಕ ದತ್ತಿನಿಧಿಯೆಂದು ವಿಭಾಗಿಸಿ, ಅಲ್ಲಿ ಬರುವ ಬಡ್ಡಿ ಹಣವನ್ನು ಸಾರ್ವಜನಿಕ ಉಪಯೋಗಿಸುತ್ತಿರುವುದೆಲ್ಲವನ್ನು ಕೇಳಿದಾಗ ಒಂದು ರೀತಿ ಅಚ್ಚರಿ ಜೊತೆಗೆ ಅಕ್ಕಿ ಕೊಟ್ರಪ್ಪನರಿಗೆ ಇರುವ ಸಾಮಾಜಿಕ ಬದ್ಧತೆಯನ್ನು ಕಾಣಬಹುದಾಗಿದೆ.

ಅಕ್ಕಿ ಕೊಟ್ಟಪ್ಪನವರು ತಮ್ಮ ಕೆಲಸ ಮತ್ತು ಮನೆಗೆ ಮಾತ್ರ ಸೀಮಿತವಾಗಿದ್ದರೆ ಇಂದು ಅವರ ಬಗ್ಗೆ ಮಾತನಾಡುವ-ಬರೆಯುವ ಅಗತ್ಯವೇ ಇರಲಿಲ್ಲ. ಆದರೆ ಆ ಎಲ್ಲಾ ಜವಾಬ್ಧಾರಿಗಳನ್ನು ಅರ್ಥಪೂರ್ಣವಾಗಿ ನಿಭಾಯಿಸಿ, ಅದನ್ನು ಮೀರಿ ಸಾಮಾಜಿಕ ಕೆಲಸಗಳ ಮೂಲಕವೇ ಎಲ್ಲರ ಗಮನ ಸೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಶರಣರಂತೆ ಅತ್ಯಂತ ಸರಳ ಮತ್ತು ಸಜ್ಜಿನಿಕೆಯ ಜೀವನ ನಡೆಸುತ್ತಾ, ಗ್ರಾಮೀಣ ಪ್ರದೇಶವನ್ನೇ ಅಪ್ಪಿಕೊಂಡಿದ್ದಾರೆ. ಬಹಳ ವಿಶೇಷ ಎಂದರೆ ತಾವಷ್ಟೆ ಬೆಳೆಯದೇ, ತಮ್ಮ ಜೊತೆ ಊರನ್ನೂ ಬೆಳೆಸಿದ್ದಾರೆ. ಇಂತವರ ಸಂಖ್ಯೆ ಎಲ್ಲ ಕಡೆಯಲ್ಲಿಯೂ ಹೆಚ್ಚಾಗಬೇಕು. ನಮ್ಮ ಭಾಗದ ದಾನ ಚಿಂತಾಮಣಿಯಾದ ಅಕ್ಕಿ ಕೊಟ್ರಪ್ಪನವರು 92 ವಯಸ್ಸಿನ ಅತ್ಯಂತ ತುಂಬು ಜೀವನವನ್ನು ನೆಡೆಸಿ ಮೊನ್ನೆ ಜುಲೈ 27, 2024ರಂದು ಇಹ ಲೋಕದ ಯಾತ್ರೆಯನ್ನು ಮುಗಿಸಿದರು. ಆದರೆ ಅವರು ಹಾಕಿಕೊಟ್ಟ ಹಾದಿ, ಬಿಟ್ಟು ಹೋಗಿರುವ ಆದರ್ಶಗಳು ಸದಾ ಜೀವಂತ. .ಜೀವಂತ. . .

ಡಾ.ಪರಮೇಶ್ವರಯ್ಯ ಸೊಪ್ಪಿಮಠ
ಶಿಕ್ಷಕರು ಮತ್ತು ಸಾಹಿತಿಗಳು
ಹಗರಿಬೊಮ್ಮನಹಳ್ಳಿ

Share This Article
error: Content is protected !!
";