Ad image

ಹೆಣ್ಣು ಮಕ್ಕಳು ಮತ್ತು ತಂದೆ ತಾಯಿ

Vijayanagara Vani
ಹೆಣ್ಣು ಮಕ್ಕಳು ಮತ್ತು ತಂದೆ ತಾಯಿ

ಮಕ್ಕಳು ನಮ್ಮ ದಾಂಪತ್ಯ ಬದುಕಿನ ಪ್ರತಿರೂಪಗಳು. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಗಂಡು ಮಕ್ಕಳು ತಂದೆ ತಾಯಿಯ ಜವಾಬ್ದಾರಿಯನ್ನು ವಹಿಸಿದರೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಮನೆಗೆ ಬಂದ ಅಳಿಯ ಮಗನಲ್ಲ ತವರಿಗೆ ಮಾತು ತಂದವಳು ಮಗಳಲ್ಲ ಎಂದು ಬುದ್ಧಿ ಹೇಳುವ ಮನಸ್ಥಿತಿ ಇಂದಿನ ಪಾಲಕರದಲ್ಲವಾದರೂ ಗಂಡನ ಮನೆಯಲ್ಲಿರುವ ಮಗಳ ಕುರಿತು ಹೆಚ್ಚೇ ವ್ಯಾಮೋಹ ಪ್ರೀತಿ. ತಮ್ಮ ಎಲ್ಲಾ ಆಸ್ತಿ ಪಾಸ್ತಿಯನ್ನು ಗಂಡು ಮಕ್ಕಳಿಗೆ ಕೊಟ್ಟರೂ ಪ್ರೀತಿಯ ಬಹುಪಾಲನ್ನು ಹೆಣ್ಣು ಮಕ್ಕಳಿಗೆ ಮೀಸಲಾಗಿಡುತ್ತಾರೆ.

ಹಾಗೆಂದು ಗಂಡು ಮಕ್ಕಳು ಸರಿ ಇರುವುದಿಲ್ಲ ಎಂದು ಇದರ ಅರ್ಥವಲ್ಲ

ಈ ಹೆಣ್ಣು ಮಕ್ಕಳೂ ಅಷ್ಟೇ! ಗಂಡನ ಮನೆಯಲ್ಲಿ ಅದೆಷ್ಟೇ ಕೆಲಸ ಮಾಡಿ ದಣಿದು ನಾಲ್ಕು ದಿನ ತವರಲ್ಲಿ ಆರಾಮಾಗಿ ಇದ್ದು ಹೋಗಲು ಬಂದಿದ್ದರೂ ಬಂದ ಒಂದೆರಡು ದಿನ ಮಾತ್ರ ಆರಾಮಾಗಿ ಮಲಗಿ, ಬೇಕು ಬೇಕಾದ್ದನ್ನು ಮಾಡಿಸಿಕೊಂಡು ತಿಂದು, ಸ್ನೇಹಿತರ ಮನೆ, ದೇವಸ್ಥಾನ, ಪ್ರೇಕ್ಷಣೀಯ ಸ್ಥಳ ಎಂದು ಸುತ್ತಾಡುತ್ತಾರೆ. ನಂತರ ಮನೆಯಲ್ಲಿ ಶುರುವಾಗುತ್ತದೆ ನೋಡಿ ಇವರ ಹಾವಳಿ.

ಅಮ್ಮನ ಬಟ್ಟೆಯ ಅಲಮಾರಿ ತೆಗೆದು ಅದನ್ನು ಸ್ವಚ್ಛಗೊಳಿಸುವ,ಬಟ್ಟೆಗಳನ್ನು ಸರಿಯಾಗಿ ಜೋಡಿಸಿಡುವ ಜೊತೆಗೆ ತುಸು ಹಳೆಯದಾದ ಬಟ್ಟೆಗಳನ್ನು ಅಮ್ಮನ ಯಾವುದೇ ಮಾತಿಗೂ ತಲೆಬಾಗದೆ ನಿರ್ಧಾಕ್ಷಿಣ್ಯವಾಗಿ ಕೆಲಸದವರಿಗೆ ಕೊಟ್ಟುಬಿಡುವಳಾಕೆ. ಎಲ್ಲಾ ಸೀರೆಗೆ ತಕ್ಕನಾದ ಮ್ಯಾಚಿಂಗ್ ಬ್ಲೌಸ್ ಇವೆಯೇ ಇಲ್ಲವೇ ಎಂದು, ಅಳತೆಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿ ಅಕಸ್ಮಾತ್ ಇಲ್ಲದಿದ್ದರೆ ಅವೆಲ್ಲವನ್ನು ಸರಿಯಾದ ಅಳತೆಗೆ ರಿಪೇರಿ ಮಾಡಿಸಲು ಕೊಟ್ಟು ಇಂತಿಂಥ ಸೀರೆಗೆ ಇದನ್ನೇ ತೊಡಬೇಕೆಂದು ಒಡವೆಗಳನ್ನು ಮತ್ತಿತರ ಆಕ್ಸಸರಿಗಳನ್ನು ಹೊಂದಿಸಿಟ್ಟರೆ ಒಂದು ಹಂತದ ಕೆಲಸ ಮುಗಿದಂತೆ. ಈ ಮೊದಲು ಅಮ್ಮ ತೊಡದೆ ಇದ್ದ ನೈಟಿ ಮತ್ತು ಹಗುರವಾದ ಚೂಡಿದಾರ್ಗಳನ್ನು ಅಮ್ಮನ ಹುಸಿ ಮುನಿಸಿಗೆ ಬೆದರದೆ ಎತ್ತಿಕೊಡುವುದರ ಮೂಲಕ ಅಮ್ಮನ ವಾರ್ಡ್ರೋಬ್ ಸ್ವಚ್ಛ ಮಾಡುವ ಮಗಳು ಅಮ್ಮ ಎಲ್ಲೆಂದರಲ್ಲಿ ಇಟ್ಟಿರುವ ಅಲಂಕಾರದ ಸಾಮಗ್ರಿಗಳನ್ನು ಸರಿಯಾಗಿ ಒಂದೆಡೆ ಜೋಡಿಸಿ ಮತ್ತೊಮ್ಮೆ ಮಗದೊಮ್ಮೆ ತಾಯಿಗೆ ಅವುಗಳನ್ನು ಬಳಸುವ ಕುರಿತು ಕಿವಿಮಾತು ಹೇಳುತ್ತಾಳೆ.

ಇಷ್ಟಕ್ಕೆ ಸುಮ್ಮನಾಗದ ಆಕೆ ತಾಯಿಯ ಕಾಲು ನೋವಿಗೆ ಬೇಕಾಗುವ ಮುಲಾಮು ಮತ್ತು ಸ್ಪ್ರೇ ಗಳನ್ನು ತಕ್ಷಣಕ್ಕೆ ಕೈಗೆ ಸಿಗುವಂತೆ ಒಂದೆಡೆ ಹೊಂದಿಸಿ
ಆಕೆಯ ಹಳೆಯ ಚಪ್ಪಲಿಗಳನ್ನು ನಿರ್ಧಾಕ್ಷಿಣ್ಯವಾಗಿ ಎಸೆದು ಡಾಕ್ಟರ್ ಸಲಹೆ ಮಾಡುವ ಮೃದು ಮೆದುವಾದ ಡಾಕ್ಟರ್ ಚಪ್ಪಲಿಗಳನ್ನು ತರಿಸಿಕೊಡುತ್ತಾಳೆ.
ಇಷ್ಟಕ್ಕೆ ಮುಗಿಯುವುದಿಲ್ಲ ನೋಡಿ ಆಕೆಯ ಹಾವಳಿ….ಅಡುಗೆ ಮನೆಗೆ ಲಗ್ಗೆ ಇಡುವ ಆಕೆ ಇಡೀ ಅಡುಗೆ ಕೋಣೆಯ ಮೂಲೆ ಮುಡುಕುಗಳನ್ನು ಸ್ವಚ್ಛ ಮಾಡಿ ಹಳೆಯ,ಕೊಳಕಾದ ಡಬ್ಬಗಳನ್ನು,ತುಸುವೆ ಸೀಳಿದ ಕಪ್ಪು ಬಸಿಗಳನ್ನು ತೆಗೆದು ಹಳೆಯ ಪಾತ್ರೆ ಪಡಗಗಳನ್ನು ಮಾತಿಲ್ಲದೆ ತೆಗೆದು ಕೆಲಸದವರ ಮೂಲಕ ಸಾಗಿಸಿಬಿಡುತ್ತಾಳೆ.
ನಂತರ ಅಪ್ಪನ ಸರದಿ… ಕತ್ತಿನ ಬಳಿ ತುಸು ಮಾಸಿದ, ಸವೆದು ಹೋದ ಅಪ್ಪನ ಹಳೆಯದಾದರೂ ಉಪಯೋಗಿಸುತ್ತಿದ್ದ ಶರ್ಟು ಮತ್ತು ಪ್ಯಾಂಟುಗಳನ್ನು ರದ್ದು ಮಾಡಿ, ಆ ದಿನ ಸಂಜೆಯೇ ತಂದೆಯನ್ನು ಹತ್ತಿರದ ಅಂಗಡಿಗೆ ಕರೆದೊಯ್ದು ನವೀನ ಮಾದರಿಯ ಬಟ್ಟೆಗಳನ್ನು, ಮನೆಯಲ್ಲಿ ಧರಿಸುವ ಉಡುಪುಗಳನ್ನು, ವಾಕಿಂಗ್ ಹೋಗಲು ಬೇಕಾಗುವ ಟ್ರ್ಯಾಕ್ ಪ್ಯಾಂಟು ಟಿ-ಶರ್ಟುಗಳನ್ನು ತರುವ ಆಕೆ ಅವರ ಶೂಗಳನ್ನು ಕೂಡ ಬದಲಾಯಿಸುತ್ತಾಳೆ.

ಇನ್ನು ಮನೆಯಲ್ಲಿನ ಎಲ್ಲ ಹಾಸಿಗೆಗಳ ಬೆಡ್ ಶೀಟ್ಗಳು ದಿಂಬಿನ ಕವರುಗಳನ್ನು ಸ್ವಚ್ಛಗೊಳಿಸಿ ಮತ್ತೆ ಹಾಕುವುದರ ಜೊತೆ ಜೊತೆಗೆ ಒಂದೆರಡು ಜೊತೆ ಹೊಸ ಬೆಡ್ ಶೀಟ್ ಗಳನ್ನು ತಂದಿರಿಸುತ್ತಾಳೆ.

ಎಲ್ಲ ಕೆಲಸಗಳನ್ನು ಮಾಡುವ ಆಕೆ ಪ್ರತಿ ಸಾರಿ ನಾನೇ ಬರುವವರೆಗೆ ನೀವ್ಯಾರೂ ಇದನ್ನು ಮಾಡಿಕೊಳ್ಳುವುದಿಲ್ಲ ಎಂದು ತಂದೆ ತಾಯಿಗೆ ನಸುಮುನಿಸು ತೋರಿಸ್ತಾಳೆ.

ಇನ್ನು ತನ್ನ ಮನೆಗೆ ತಂದೆ ತಾಯಿ ಬಂದಾಗ ಅವರಿಗೆ ತಮ್ಮೆಲ್ಲ ಪಾಕ ಪ್ರವೀಣತೆಯನ್ನು ತೋರುವ ಹೆಣ್ಣು ಮಕ್ಕಳು ಜೊತೆ ಜೊತೆಗೆ ಅವರ ಆರೋಗ್ಯದ ಕುರಿತು ಕಾಳಜಿ ಮಾಡುತ್ತಾರೆ. ವಯೋಸಹಜವಾಗಿ ಮೊಮ್ಮಕ್ಕಳೊಂದಿಗೆ ಬೆರೆತು ಹಾಡುವ ಅಜ್ಜ ಅಜ್ಜಿ ಮೊಮ್ಮಕ್ಕಳಿಗಾಗಿ ಏನನ್ನಾದರೂ ತಂದರೆ ನೀವಿಬ್ರೂ ನನ್ನ ಮಕ್ಕಳನ್ನ ಕೆಡಿಸ್ಬಿಡ್ತೀರಿ ಎಂದು ಹುಸಿ ಮುನಿಸು ತೋರುತ್ತಾಳೆ.

ಅಪ್ಪ ಅಮ್ಮನಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನು ಅಡುಗೆಗಳನ್ನು ಮಾಡಿ ಬಡಿಸಿ ಸೈ ಎನಿಸಿಕೊಳ್ಳುವ ಮಗಳು ರಾತ್ರಿ ಅವರು ಮಲಗುವಾಗ ಅವರಿಗೆ ಜಗ್ ನಲ್ಲಿ ನೀರನ್ನು ತುಂಬಿಟ್ಟು ರಾತ್ರಿ ಏನಾದರೂ ಬೇಕಾದರೆ ಕರೆಯಿರಿ ಎಂದು ಹೇಳಿದಾಗ ತಂದೆ ತಾಯಿಗೆ ತಾವು ವಿಶೇಷ ಅತಿಥಿಗಳು ಎಂಬಂತೆ ಭಾಸವಾಗುತ್ತದೆ. ಗಂಡ ಮಕ್ಕಳನ್ನು ಆಫೀಸಿಗೆ ಶಾಲೆಗೆ ಕಳುಹಿಸಿದ ನಂತರ ತಂದೆ ತಾಯಿಗೆ ತನ್ನೂರಿನ ವಿಶೇಷತೆಗಳನ್ನು ತೋರಿಸಲು ಹೊರಡುತ್ತಾಳೆ.

ಅಕಸ್ಮಾತ್ ತಂದೆ ತಾಯಿಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದೇ ಹೋದರೆ ಸೀರೆಗಳನ್ನು ಬಟ್ಟೆಗಳನ್ನು ಕೊಡಿಸುವ ಆಕೆ ತವರಿಂದ ಮರಳುವಾಗ ತಾಯಿಯ ಕೈಯಲ್ಲಿ ಯಾರಿಗೂ ಗೊತ್ತಾಗದಂತೆ ತನ್ನ ಕೈಲಾದಷ್ಟು ಹಣವನ್ನು ನೀಡಿ ಹೋಗುತ್ತಾಳೆ. ತವರಿನ ಕಷ್ಟಗಳಿಗೆ ಹೆಗಲಾಗುವ ಆಕೆ ಬಯಸುವುದು ಅವರೆಲ್ಲರ ಪ್ರೀತಿಯನ್ನು ಮಾತ್ರ.
ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಇಬ್ಬರು ಗಂಡು ಮಕ್ಕಳು ಬೇರೆ ಆಗಬಹುದು…. ಆದರೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿರುವ ಇಬ್ಬರು ಹೆಣ್ಣು ಮಕ್ಕಳು ಎರಡು ವಿಭಿನ್ನ ಕುಟುಂಬಗಳಿಗೆ ಮದುವೆಯಾಗಿ ಹೋಗಿದ್ದರೂ ಮಾನಸಿಕವಾಗಿ ಒಂದೇ ಆಗಿರುತ್ತಾರೆ ಎಂಬುದು ಸಾರ್ವತ್ರಿಕ ಸತ್ಯ….ಅಪವಾದಗಳು ಇರಬಹುದು.

ಅನಾಥಾಲಯವೊಂದರ ಮುಖ್ಯಸ್ಥರೊಬ್ಬರು ಹೇಳುವ ಪ್ರಕಾರ ಅವರ ಅನಾಥಾಲಯದಲ್ಲಿ ಇರುವ ವೃದ್ಧರನ್ನು ಭೇಟಿಯಾಗಲು ಬರುವ ಅವರ ಗಂಡು ಮಕ್ಕಳು ಅವರಿಂದ ಅವರ ಪೆನ್ಷನ್ ಹಣವನ್ನು ಕಸಿದೊಯ್ಯಲು ಬರುತ್ತಾರೆ. ಒರಟು ಮಾತುಗಳು ಹಣವನ್ನು ಕೊಡಲು ಒಪ್ಪದೇ ಇದ್ದರೆ ಬಡಿಯಲೂ ಹೇಸದ ಅವರು ಹಣ ಕೊಟ್ಟ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಹೆಣ್ಣು ಮಕ್ಕಳು ಹಾಗಲ್ಲ…. ತಮ್ಮ ಕೌಟುಂಬಿಕ ಅನಿವಾರ್ಯತೆಯ ಕಾರಣ ತಂದೆ ತಾಯಿ ವೃದ್ಧಾಶ್ರಮದಲ್ಲಿ ಇರುವುದಕ್ಕೆ ಬೇಸರವಿದ್ದರೂ ಕೂಡ ಪಾಲಕರನ್ನು ಭೇಟಿಯಾಗುವ ಸಮಯದಲ್ಲಿ ಅವರಿಗೆ ಇಷ್ಟವಾಗುವ ಹಣ್ಣು, ಬಿಸ್ಕೆಟ್ ಗಳನ್ನು ತಂದು ಕೊಟ್ಟು ಸಾಕಷ್ಟು ಸಮಯ ಅವರೊಂದಿಗೆ ಕಳೆಯುತ್ತಾರೆ.

ಮನೆಗೆಲಸಕ್ಕೆ ಬರುವ ಬಹುತೇಕ ಹೆಣ್ಣು ಮಕ್ಕಳ ಸಂಪಾದನೆಯಲ್ಲಿ ಆಕೆಯ ಅಣ್ಣ ತಮ್ಮಂದಿರ ಶೋಕಿಗಳಾದ ಮೊಬೈಲ್ ಫೋನ್, ಶೂಗಳು ಬಟ್ಟೆ ಬರೆಗಳು ಪೂರೈಸಲ್ಪಡುತ್ತದೆ. ತಾನು ಕೆಲಸ ಮಾಡುವ ಸ್ಥಳದಲ್ಲಿ ಸಾಲ ಮಾಡಿ ಮನೆಯನ್ನು ನಡೆಸುವ ಆ ಹೆಣ್ಣು ಮಕ್ಕಳು ತನ್ನ ಒಡಹುಟ್ಟಿದವರು, ಅಣ್ಣ ತಮ್ಮಂದಿರು, ಗಂಡ, ಮಕ್ಕಳು ಎಂದು ಒದ್ದಾಡುವಳು.

ಸದಾ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಹೆಣ್ಣು ಮಕ್ಕಳು ತಮ್ಮ ಪ್ರೀತಿ ಮತ್ತು ಕಾಳಜಿಯ ಮೂಲಕ ತಂದೆ ತಾಯಿಯ ಮನಕ್ಕೆ ಹತ್ತಿರವಾಗುವರು. ಅದೆಷ್ಟೇ ಕಟ್ಟುನಿಟ್ಟಾದ ತಂದೆಯಾದರೂ ಮಗಳಿಗೆ ಕರಗಲೇಬೇಕು.

ಆದ್ದರಿಂದಲೇ ಹೆಣ್ಣು ಮಕ್ಕಳನ್ನು ಭೂಮಿತಾಯಿಗೆ ಹೋಲಿಸಿರುವುದು. ಹೆಣ್ಣು ಕ್ಷಮಯಾ ಧರಿತ್ರಿ, ಸ್ಪೂರ್ತಿಯ ಚಿಲುಮೆ, ಮಮತೆಯ ಮೂರ್ತಿ, ಪ್ರೇಮ ದೇವತೆ,ತ್ಯಾಗಮಯಿ,ಸಿಡಿದೆದ್ದರೆ… ಕಡು ಭಯಂಕರಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Share This Article
error: Content is protected !!
";