ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹಾಗೂ ಸಾಂಕ್ರಾಮಿಕ ರೋಗಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸಹಕರಿಸಬೇಕು. ಡೆಂಗ್ಯೂ ಜ್ವರ ವೈರಸ್ ನಿಂದ ಉಂಟಾಗುವ ಖಾಯಿಲೆ, ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯ ವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ರೋಗ ನಿಯಂತ್ರಣಕ್ಕಾಗಿ ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಗ್ಯೂ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಕರಿಸಿಡುವ ಸಿಮೆಂಟ್ ತೊಟ್ಟಿ ಕಲ್ಲುಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸದ ಒರಳಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ, ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ಅವರು ತಿಳಿಸಿದರು.
ಅವರು (ಜೂ.22) ಇಂದು ಮಧ್ಯಾಹ್ನ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಐಎಂಎ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ, ಆಯುಷ್ ಪೆಡರಷನ್ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ, ಕರ್ನಾಟಕ ಪ್ರಾವೈಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹಾಗೂ ನೀಮಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮತ್ತು ಕೆಪಿಎಂಇ ಕಾಯ್ದೆಯಡಿಯಲ್ಲಿ ನೊಂದಾಯಿತ ಎಲ್ಲ ವೈದ್ಯಕೀಯ ಸಂಸ್ಥೆಗಳ ಮಾಲೀಕರು, ವೈದ್ಯರ ಸಭೆ ಜರುಗಿಸಿ, ಮಾತನಾಡಿದರು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಆಸ್ಪತ್ರೆಯಲ್ಲಿ ವರದಿಯಾಗುವ ಸಂಶಯಾಸ್ಪದ ಡೆಂಗ್ಯೂ ಪ್ರಕರಣಗಳ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ವರದಿಯನ್ನು ನಿಯಮಿತವಾಗಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಿ, ಒಂದೇ ಪ್ರದೇಶದಲ್ಲಿನ ಹೆಚ್ಚಿನ ರೀತಿಯಲ್ಲಿ ಪ್ರಕರಣಗಳು ವರದಿಯಾದಲ್ಲಿ ಆ ಪ್ರದೇಶದ ಮಾಹಿತಿಯನ್ನು ಕೂಡಾ ಕಚೇರಿಗೆ ಸಲ್ಲಿಸುವಂತೆ ಅವರು ತಿಳಿಸಿದರು.
ಕೆಪಿಎಂಇ ಕಾಯ್ದೆಯನ್ನು ನಿಯಮವಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅನುಷ್ಠಾನಗೊಳಿಸಬೇಕು. ಕೆಪಿಎಂಇ ಕಾಯ್ದೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಪಾಲಿಸಬೇಕಾದ ನಿಯಮಗಳನ್ನು ವಿವರಿ, ಆಸ್ಪತ್ರೆಗೆ ಬೋರ್ಡ್ ಗಳನ್ನು ಅಳವಡಿಸುವುದು, ಅಗ್ನಿ ದುರಂತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು, ಚಿಕಿತ್ಸೆ ನೀಡುವ ರೋಗಿಗಳಿಗೆ ವಿವರವಾದ ಬಿಲ್ಲು ಒದಗಿಸುವುದು ಬಗ್ಗೆ ಸಭೆಯಲ್ಲಿ ಅವರು ಹೇಳಿದರು.
ಪಿಸಿ&ಪಿಎನ್ ಡಿಟಿ ಕಾಯ್ದೆಯಡಿಯಲ್ಲಿ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ನೋಂದಣಿ, ನವೀಕರಣ ಮಾಡಿಕೊಳ್ಳುವುದು, ಲಿಂಗ ಪತ್ತೆ ಮಾಡುವದಿಲ್ಲ ಎಂಬ ಫಲಕ ಅಳವಡಿಸುವ ಕುರಿತು, ಪ್ರತಿ ದಿನ ಎಫ್-ಪಾರ್ಮ್ ಗಳನ್ನು ಭರ್ತಿಮಾಡುವಂತೆ ಅವರು ತಿಳಿಸಿದರು.
ಎಂಟಿಪಿ ಕಾಯ್ದೆಯಡಿಯಲ್ಲಿ ಇ-ಕಲ್ಯಾಣಿ ಮೂಲಕ ತಮ್ಮ ವೈದ್ಯಕೀಯ ಸಂಸ್ಥೆಯನ್ನು ನೊಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಯಿತು. ನೋಂದಣಿ ಇಲ್ಲದೇ ಎಂಟಿಪಿ ಮಾಡುವುದು ಕಾನೂನು ಬಾಹಿರವೆಂದು ತಿಳಿಸಿ, ಹೆಚ್ ಎಂ ಐ ಎಸ್ ಪೋರ್ಟಲ್ ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವ ಬಗ್ಗೆ ವಿವರಣೆ ನೀಡಿದರು. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕ್ರಮಗಳು ಕೈಕೊಳ್ಳುವಂತೆ ಹಾಗು ಕೆಪಿಎಂಇ ಮತ್ತು ಪಿ ಸಿ & ಪಿ ಎನ್ ಡಿ ಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಅವರು ಸೂಚಿಸಿದರು.
ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಮಂಜುನಾಥ ಸೊಪ್ಪಿನಮಠ, ಹಿರಿಯ ವೈದ್ಯ ಡಾ.ಸಂಜೀವ ಕುಲಕರ್ಣಿ, ಐ.ಎಂ.ಎ ಅಧ್ಯಕ್ಷ ಡಾ.ಸತೀಶ ಇರಕಲ್, ಆಯುಷ್ ಪೆಡರೇಷನ್ ಡಾ. ರವೀಂದ್ರ ವಾಯ್, ಡಾ.ಕಿರಣ ಸಾಣಿಕೊಪ್ಪ, ಡಾ. ತ್ಯಾಗರಾಜ, ಡಾ. ಅಮೀತ್, ಡಾ. ಸಂದೀಪ ಪ್ರಭು, ಡಾ.ಅಮೀತ ಮತ್ತು ಗಲಗಲಿ ಹಾಗೂ ಧಾರವಾಡ ಜಿಲ್ಲೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.