ಹೆಚ್‌ಐವಿ ಸೋಂಕು ಬಗೆಗೆ ಯುವಜನತೆಗೆ ಇರಲಿ ಜಾಗೃತಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

Vijayanagara Vani
ಹೆಚ್‌ಐವಿ ಸೋಂಕು ಬಗೆಗೆ ಯುವಜನತೆಗೆ ಇರಲಿ ಜಾಗೃತಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ,
ಯುವ ಪೀಳಿಗೆಯು ಜೀವನಪರ್ಯಂತ್ಯ ಚಿಕಿತ್ಸೆಗೊಳಪಡಬೇಕಾದ ಹೆಚ್‌ಐವಿ ಸೋಂಕು ಬಗೆಗಿನ ಜಾಗೃತಿಯನ್ನು ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಹೆಚ್‌ಐವಿ ಜಾಗೃತಿ ಮಾಸಾಚರಣೆ ಅಂಗವಾಗಿ ನಗರದ ಶ್ರೀ ಮೇಧಾ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರಾಷ್ಟಿಯ ಯುವ ದಿನಾಚರಣೆ ಹಾಗೂ ನಶಾಮುಕ್ತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯು ತನ್ನದೆಯಾದ ಗುಣ ನಡತೆಯನ್ನು ಹೊಂದಿದ್ದು, ಭವಿಷ್ಯದಲ್ಲಿ ದೇಶದ ಸದೃಢತೆಗಾಗಿ ಕೈಜೊಡಿಸಬೇಕಾದ ಯುವಜನತೆಯು ತಮ್ಮ ಮನಸ್ಸನ್ನು ಏಕಾಗ್ರತೆಗೊಳಿಸಿಕೊಂಡು ತಂದೆ ತಾಯಿ, ಗುರುಹಿರಿಯರ ಮಾರ್ಗದರ್ಶನದೊಂದಿಗೆ ಇತರೆ ದುಶ್ಚಟಗಳಿಗೆ ಒಳಗಾಗಬಾರದು ಎಂದು ತಿಳಿಸಿದರು.
ಹೆಚ್‌ಐವಿ ಸೋಂಕು, ಅದರ ಕಳಂಕ ತಾರತಮ್ಯ ಮತ್ತು ಅದರಿಂದ ಉಂಟಾಗುವ ಮರಣಗಳನ್ನು ಸೊನ್ನೆಗೆ ತರಲು ಎಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ಜಿಲ್ಲೆಯ ವಿವಿಧ ತಾಲ್ಲೂಕಗಳ ಪ್ರಮುಖ ಸ್ಥಳಗಳಲ್ಲಿ ನೃತ್ಯದ ಮೂಲಕ ಜನರನ್ನು ಆಕರ್ಷಿಸಿ ಹೆಚ್‌ಐವಿ ಬಗೆಗಿನ ಜಾಗೃತಿ ಮೂಡಿಸಲಾಗುತ್ತಿದೆ. ಅದೇರೀತಿಯಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಪ್ಲಾಷ್‌ಮಾಬ್ ಕಾರ್ಯಕ್ರಮ ಆಯೋಜಿಸಿ, ಯಶಸ್ವಿಗೊಳಿಸಲಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ಹೆಚ್‌ಐವಿ ಸೋಂಕು ಹರಡುವ 4 ಮಾರ್ಗಗಳಾದ ಅಸುರಕ್ಷಿತ ಲೈಂಗಿಕ ಕ್ರಿಯೆ, ಪರೀಕ್ಷೆ ಮಾಡದ ಅಸುರಕ್ಷಿತ ರಕ್ತ ಪಡೆಯುವುದರಿಂದ, ಹೆಚ್‌ಐವಿ ಸೋಂಕಿತರು ಬಳಸಿದ ಸೂಜಿ, ಸಿರಂಜ್‌ಗಳನ್ನು ಬಳಸುವುದು. ಹೆಚ್‌ಐವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆ ಸಮಯದಲ್ಲಿ, ಇಲ್ಲವೇ ಎದೆ ಹಾಲಿನ ಮೂಲಕ ಬರುವ ಸಾಧ್ಯಗಳಿವೆ ಎಂದು ತಿಳಿಸಿದರು.
ಹೆಚ್‌ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ಅತ್ಯಂತ ಗಂಭೀರ ರೂಪದಲ್ಲಿ ಅತೀ ವೇಗವಾಗಿ ಹರಡುವ ಸಾಧ್ಯತೆ ಇದೆ. ಯುವ ಜನತೆಯು ತಮ್ಮನ್ನು ತಾವು ನಿಗ್ರಹಿಸಿಕೊಳ್ಳುವ ಮೂಲಕ ತಮ್ಮೊಂದಿಗೆ ಇತರರನ್ನು ಹೆಚ್‌ಐವಿ ಸೋಂಕು ಮುಕ್ತರನ್ನಾಗಿಸಲು ಜಾಗೃತಿ ಕಾರ್ಯಕ್ರಮ, ಆಧುನಿಕ ಮಾಧ್ಯಮಗಳಲ್ಲಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಇದರ ಅರಿವು ಹೊಂದಬೇಕು ಎಂದು ಅವರು ಕೋರಿದರು.
ಇದೇ ಸಂದರ್ಭದಲ್ಲಿ ನಶೆಮುಕ್ತ ದಿನದ ಅಂಗವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಬಳಿಕ ಹೆಚ್‌ಐವಿ ಕುರಿತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಮಂಜುನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಮಾನಸಿಕ ತಜ್ಞ ಡಾ.ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕರಾದ ಗಿರೀಶ್, ಹೊನ್ನೂರಪ್ಪ, ಜಗದೀಶ್, ಜಯರಾಮ್ ಸೇರಿದಂತೆ ನಿತ್ಯ ಜೀವನ, ಸೌಖ್ಯ ಬೆಳಕು, ವಿಮುಕ್ತಿ ಸಂಘಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!