ಚಿತ್ರದುರ್ಗ ಮಾರ್ಚ್.21:
ತಂಬಾಕು ನಿಯಂತ್ರಣ ಮಾಡಲು ಹೆಚ್ಚು ಅನಿರೀಕ್ಷಿತ ದಾಳಿ ನಡೆಸುವಂತೆ ಹೊಸದುರ್ಗ ತಹಶೀಲ್ದಾರ್ ತಿರುಪತಿ ಪಾಟೀಲ್ ನಿರ್ದೇಶನ ನೀಡಿದರು.
ಮಾರ್ಚ್ 20 ರಂದು ಹೊಸದುರ್ಗ ತಹಶೀಲ್ದಾರ್‌ರವರ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಕೊಟ್ಪಾ ಕಾಯ್ದೆ ಅನುಷ್ಠಾನ ಕುರಿತಂತೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ತಂಬಾಕು ದಾಳಿಗಳನ್ನು ಕೈಗೊಳ್ಳಬೇಕು. ಪ್ರತಿ ದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್ಗಳ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು. ತಂಬಾಕು ಮುಕ್ತ ಶಾಲೆಗಳನ್ನು ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲು ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಬೇಕು. ತಾಲ್ಲೂಕಿನಾದ್ಯಂತ ತಂಬಾಕು ಕಾರ್ಯಾಚರಣೆ ನಡೆಸುವಾಗ ಪೊಲೀಸ್ ಇಲಾಖೆಯವರು ಹೆಚ್ಚಿನ ಸಹಕಾರ ನೀಡುವಂತೆ ತಹಶೀಲ್ದಾರರು ತಿರುಪತಿ ಪಾಟೀಲ್ ಸೂಚಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿ ಕೋಟ್ಪಾ-2003 ರ ಕಾಯ್ದೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಏಪ್ರಿಲ್-2024 ರಿಂದ ಫೆಬ್ರವರಿ-2025 ರವರೆಗೆ 9 ತಂಬಾಕು ದಾಳಿಗಳನ್ನು ನಡೆಸಿದ್ದು, ಸೆಕ್ಷನ್-4, 6ಎ & 6ಬಿ ಅಡಿಯಲ್ಲಿ ಒಟ್ಟು 187 ಕೇಸುಗಳನ್ನು ದಾಖಲಿಸಿ ರೂ. 14,750/- ದಂಡವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಜಂಟಿ ಖಾತೆಗೆ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದರು.
ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಪುರಸಭೆಯಲ್ಲಿ ರೂ. 500/- ಶುಲ್ಕವನ್ನು ಪಡೆದುಕೊಂಡು ಆರೋಗ್ಯ ನಿರೀಕ್ಷಣಾಧಿಕಾರಿಗಳು ಪರವಾನಿಗೆ ನೀಡಬೇಕು ಎಂದು ಜಿಲ್ಲಾ ಸಲಹೆಗಾರ ಪ್ರಭುದೇವ್ ತಿಳಿಸಿದರು.
ತಾ.ಪಂ.ಕಾರ್ಯನಿರ್ವಹಕಾಧಿಕಾರಿ ಸುನೀಲ್ ಕುಮಾರ್ , ಕ್ಷೇತ್ರಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಭಿಲಾಷ , ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದರಾಮಪ್ಪ ಸೇರಿದಂತೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ದಂತ ಆರೋಗ್ಯಾಧಿಕಾರಿ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು, ಸಮಾಜ ಕಾರ್ಯಕರ್ತರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು, ಜಿ.ತಂ.ನಿ.ಕೋಶ, ಜಿಲ್ಲಾ ಸರ್ವೇಕ್ಷಣ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.