ಚಿತ್ರದುರ್ಗಆಗಸ್ಟ್02:
ಜನ ಜಾಗೃತರಾಗಿ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ ಮನವಿ ಮಾಡಿದರು.
ಆರೋಗ್ಯ ಇಲಾಖೆ, ನಗರಸಭೆ ವತಿಯಿಂದ ಶುಕ್ರವಾರ ಸೊಳ್ಳೆತಾಣಗಳ ನಾಶ ಮಾಡುವ ಲಾರ್ವಾ ಸಮೀಕ್ಷೆ ನಗರದ ಎಲ್ಲಾ 36 ವಾರ್ಡ್ಗಳಲ್ಲಿ ನಡೆಯಿತು. ಹೆಚ್ಚು ಲಾರ್ವಾ ಸಾಂದ್ರತೆ 100 ಮನೆಯಲ್ಲಿ 20 ಮನೆಯಲ್ಲಿ ಲಾರ್ವಾ ಕಂಡು ಬಂದಿದ್ದ ವಾರ್ಡ್ ಸಂಖ್ಯೆ 35ರ ಸಾಧಿಕ್ ನಗರದಲ್ಲಿ ಲಾರ್ವಾಹಾರಿ ಗಪ್ಪಿ ಗಂಬೂಷಿಯಾ ಮೀನು ಮರಿಗಳನ್ನು ಪ್ರತಿ ಮನೆಗೂ ವಿತರಿಸಿ ಗುಂಪು ಸಭೆ ನಡೆಸಿ ಅವರು ಮಾತನಾಡಿದರು.
ಡೆಂಗ್ಯೂ ನಿಯಂತ್ರಣಕ್ಕೆ ಜನರು ಜಾಗೃತರಾಗಬೇಕು. ತಮ್ಮ ಮನೆಯ ಒಳಗೆ ಹೊರಗೆ ಸ್ವಚ್ಛತಾ ಕಾರ್ಯಮಾಡಿಕೊಳ್ಳಿ. ಇಲ್ಲವಾದಲ್ಲಿ ಡೆಂಗ್ಯೂ ನಿಮಗಷ್ಟೆ ಬಾದಿಸದೆ ನಿಮ್ಮ ಅಕ್ಕ ಪಕ್ಕದ ಸಮುದಾಯಕ್ಕೂ ಹರಡುತ್ತದೆ. ಈ ದಿನ ನಿಮ್ಮ ಮನೆಗಳ ನೀರಿನ ತೊಟ್ಟಿಗೆ ಲಾರ್ವಾಹಾರಿ ಮೀನು ಬಿಡಲಾಗಿದ್ದು, ತೊಟ್ಟಿ ತೊಳೆದುಕೊಳ್ಳುವಾಗ ಮೀನುಗಳನ್ನು ಒಂದು ಪಾತ್ರೆಯಲ್ಲಿ ಸೋಸಿಕೊಂಡು ಸ್ವಚ್ಚಮಾಡಿ, ತೊಟ್ಟಿ ಒಣಗಿಸಿ ನೀರು ತುಂಬಿಸಿ ಮತ್ತೆ ಮೀನು ಬಿಡಿ. ಈ ವಾರ್ಡ್ನ ಎಲ್ಲಾ ಮನೆಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿವೆ. ಬುದ್ದಿವಂತರಾಗಿ ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತವೆ. ಹಾಗಾಗಿ ಇದಕ್ಕೆ ಅವಕಾಶ ಮಾಡಿಕೊಡದೆ ಡೆಂಗ್ಯೂ ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಪರಿಸರ ಸ್ವಚ್ಛತೆ ಕಾಪಾಡೋಣ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಡೆಂಗ್ಯೂ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು. ಸ್ವಚ್ಛತೆ ಕಾಪಾಡಿ ಸೊಳ್ಳೆಗಳ ಉತ್ಪತ್ತಿ ತಾಣ ನಾಶ ಮಾಡದಿದ್ದರೆ ಕೀಟಗಳು ನಮನ್ನಾಳುತ್ತವೆ. ಜಾಗೃತರಾಗಿ, ಬುದ್ದಿವಂತರಾಗಿ ಮನೆ ಒಳಗೆ ಹೊರಗೆ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೀರು ಸಂಗ್ರಹಿಸುವ ಪರಿಕರಗಳನ್ನು ವಾರಕೊಮ್ಮೆಯಾದರು ಚನ್ನಾಗಿ ತಿಕ್ಕಿ ತಿಕ್ಕಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ, 1 ಭಾಗ ಬೇವಿನ ಎಣ್ಣೆ, 3 ಭಾಗ ಕೊಬ್ಬರಿ ಎಣ್ಣೆ ಈ ಪ್ರಮಾಣದಲ್ಲಿ ಮಿಶ್ರಣ ಮಾಡಿ ಲೇಪನ ಮಾಡಿಕೊಳ್ಳಿ, ಸೊಳ್ಳೆ ಪರದೆ ಬಳಕೆ ಮಾಡಿ ಮುಸ್ಸಂಜೆ, ಮುಂಜಾವಿನ ಸಮಯದಲ್ಲಿ ಸೊಳ್ಳೆ ಬತ್ತಿ, ಬೇವಿನ ಸೊಪ್ಪಿನ ಹೊಗೆಯ ಧೂಪವನ್ನು ಬೆಳಗಿಸಿ ಯಾವುದೇ ಜ್ವರವಿರಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ತಪಾಸಣೆ ಚಿಕಿತ್ಸೆ ಪಡೆದು ಕೊಳ್ಳಿ ಎಂದರು.
ಡೆಂಗ್ಯೂ ಪ್ರಕರಣದ ಮನೆಗೆ ಬೇವಿನ ಎಣ್ಣೆ ನಗರಸಭೆಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಇಂಜಿನಿಯರ್ ಜಾಫರ್, ಬುದ್ದನಗರ ಆರೋಗ್ಯ ಕೇಂದ್ರದ ಡಾ.ಸುರೇಂದ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ ಬಾಬು, ಗುರುಮೂರ್ತಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ತಿಪ್ಪಮ್ಮ, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.