ಚಿತ್ರದುರ್ಗಆಗಸ್ಟ್.12:
ಚಿತ್ರದುರ್ಗ ನಗರ ಕೇಳಗೋಟೆಯ ತಿಪ್ಪೇರುದ್ರಸ್ವಾಮಿ ಮಠ ಹಿಂಭಾಗ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿರುವುದರಿಂದ ಪ್ರತಿ ಮನೆ ಮನೆಗಳಿಗೆ ತೊಟ್ಟಿ, ಡ್ರಮ್ ಸೇರಿದಂತೆ ನೀರು ಸಂಗ್ರಹಾರಗಳಿಗೆ ಸೋಮವಾರ ಲಾರ್ವಹಾರಿ ಮೀನು ಗಪ್ಪಿ ಮತ್ತು ಗಾಂಬ್ಯುಸಿಯ ಬಿಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ರೋಗವಾಹಕ ಆಶಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಕಾಶಿ, ಜನರು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮನೆಯ ಒಳಗೆ ಹೊರಗೆ ಘನತ್ಯಾಜ್ಯಗಳಾದ ಒಡೆದ ಪ್ಲಾಸ್ಟಿಕ್, ಮಡಕೆ, ತೆಂಗಿನಕಾಯಿ ಚಿಪ್ಪು ಕಾಲಿ ಟೈರ್ ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ, ಹೂವಿನ ಕುಂಡಗಳಲ್ಲಿ ನೀರು ಸದಾಕಾಲ ನಿಲ್ಲದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಮನೆಯ ನೀರಿನ ಸಂಗ್ರಹ ಪರಿಕರಗಳನ್ನು ಪ್ರತಿ ಶುಕ್ರವಾರ ಚನ್ನಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಿ. ಮನೆಯಲ್ಲಿ ಫ್ರಿಜ್ ಬಳಸುವವರು ನೀರು ಸಂಗ್ರಹವಾಗುವ ಟ್ರೆ ಸರಿಯಾಗಿ ಸ್ವಚ್ಛ ಮಾಡಿ. ಜಾಗೃತಿಯೇ ಡೆಂಗ್ಯೂ ರೋಗಕ್ಕೆ ಮದ್ದು ಎಂದರು.
ಜಿಲ್ಲಾ ಕೀಟಶಾಸ್ತçಜ್ಞರಾದ ನಂದಿನಿ ಕಡಿ ಮಾತನಾಡಿ, ಡೆಂಗ್ಯೂ ಹಾಟ್‌ಸ್ಪಾಟ್ ವಾರ್ಡ್ 29 ರಲ್ಲಿ ಪ್ರತಿ 100 ಮನೆಗಳಲ್ಲಿ 10 ಮನೆಯಲ್ಲಿ ಲಾರ್ವಾ ಕಂಡು ಬಂದಿದ್ದು, ಲಾರ್ವಾ ಸಾಂದ್ರತೆ ಶೇಕಡಾ ಶೇ.10 ರಷ್ಟು ಇರುತ್ತದೆ. ಸೊಳ್ಳೆಗಳ ತಾಣ ನಾಶ ಮಾಡಲು ಗಪ್ಪಿ ಗಂಬೂಷಿಯ ಲಾರ್ವಾ ಹಾರಿ ಮೀನು ಬಿಡುಗಡೆ ಮಾಡುತ್ತಿದ್ದೇವೆ. ಈ ಮೀನುಗಳು ನಾವು ತಿನ್ನಲು ಬರುವುದಿಲ್ಲ ನೀರಿನ ತೊಟ್ಟಿಯಲ್ಲಿ ಬಿಟ್ಟರೆ ಸೊಳ್ಳೆಗಳ ನಿಯಂತ್ರಣ ಸಾಧ್ಯ. ಲಾರ್ವಾ ಹಂತದಲ್ಲಿ ತಿಂದು ಹಾಕುವುದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಸೊಳ್ಳೆಗಳಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಕರಾದ ಸುರೇಶ್ ಬಾಬು, ಶ್ರೀನಿವಾಸ್ ಮಲ್ಲಿಕಾರ್ಜುನ್, ನಾಗರಾಜ್, ಕಾವ್ಯ, ಆಶಾ ಕಾರ್ಯಕರ್ತೆಯರು ಇದ್ದರು.