Ad image

ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಭದ್ರ ಬುನಾದಿಗೆ ನಾವೆಲ್ಲರೂ ಕಾರಣಿಭೂತರಾಗೋಣ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

Vijayanagara Vani
ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಭದ್ರ ಬುನಾದಿಗೆ ನಾವೆಲ್ಲರೂ ಕಾರಣಿಭೂತರಾಗೋಣ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

 ಬುಧವಾರ ದೊಡ್ಡಬಾತಿಯ ತಪೋವನದಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ(ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ-ನವದೆಹಲಿ), ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಪೋವನ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್, ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಾದಕ ವಸ್ತುವಿನ ವಿರೋಧಿ ದಿನಾಚರಣೆಯ ಅಂಗವಾಗಿ ಮಾದಕ ವಸ್ತುವಿನ ವ್ಯಸನವನ್ನು ತಡೆಗಟ್ಟುವ ಕುರಿತು ಕಾರ್ಯಗಾರದ ಉದ್ಘಾಟನೆ ಮಾಡಿ ಮಾತನಾಡಿದರು. ಮಾದಕ ವಸ್ತುಗಳಿಗೆ ತುತ್ತಾಗುತ್ತಿರುವವರು ನಮ್ಮ ಭವ್ಯ ಭಾರತದ ಯುವಜನರು, ಅದರಲ್ಲೂ ಅತೀ ಹೆಚ್ಚು ಉನ್ನತ ಶಿಕ್ಷಣ ಪಡಿಯಬೇಕೆಂದು ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವರು ಮತ್ತು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮಾದಕ ವಸ್ತುಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಸನಿಗಳಾಗುತ್ತಿದ್ದಾರೆ, ಇದರಿಂದ ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ ಎಂದರು.

ಯುವಕರು ಹೆಚ್ಚಾಗಿ ತಂಬಾಕು ಬಳಕೆ ಮಾಡುವುದನ್ನು ನಾವೆಲ್ಲರೂ ಗಮನಿಸಿದ್ದೇವೆ, ಆದರೆ ಹೆಚ್ಚಿನ ಯುವಜನರು ತಂಬಾಕು ಬಳಕೆ ಮಾಡುವುಸು ಹೆಮ್ಮೆಯ ವಿಚಾರವೆಂದು ಭಾವಿಸುತ್ತಾರೆ. ಇದು ಯುವಜನರ ತಪ್ಪು ಕಲ್ಪನೆಯಾಗಿದೆ. ವಿಶೇಷವಾಗಿ ಹಾಸ್ಟೆಲ್‍ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಅಲ್ಲಿ ಸುಲಭವಾಗಿ ತಂಬಾಕು ಬಳಕೆಗೆ ಒಳಗಾಗಬಹುದು, ಹೆಚ್ಚಾಗಿ ಟಿ.ವಿ., ಚಲನಚಿತ್ರಗಳು, ಇಂಟರ್ನೆಟ್, ಜಾಹೀರಾತು ಮತ್ತು ಕೆಲವರು ಸ್ನೇಹಿತರಿಂದ ಪ್ರಭಾವಿತರಾಗುತ್ತಾರೆ. ತಂಬಾಕು ಉತ್ಪನ್ನಗಳು ಕಡಿಮೆ ವೆಚ್ಚಕ್ಕೆ ಅಥವಾ ಉಚಿತವಾಗಿ ತಂಬಾಕು ಬಳಕೆಗೆ ಅವಕಾಶ ಸಿಕ್ಕಿದರೆ ಬಳಕೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಯುವ ಜನತೆಯು ತಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ತಂಬಾಕನ್ನು ಬಳಕೆ ಮಾಡುವುದನ್ನು ನೋಡಿ ಪ್ರೇರಿತರಾಗಿ ಬಳಕೆ ಮಾಡುವ ಸಾಧ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ಕಾಲೇಜು, ಹಾಸ್ಟೆಲ್ ಬಳಿ ತಂಬಾಕು ಮರಾಟವನ್ನು ನಿಷೇಧಿಸಲಾಗಿದೆ.

ನಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಹಲವಾರು ದೇಶಗಳು ಮಾದಕ ವಸ್ತುಗಳನ್ನು ರಫ್ತು ಮಾಡಿ ನಮ್ಮ ದೇಶದ ಯುವಕರನ್ನು ಮಾದಕ ವಸ್ತುಗಳಿಗೆ ದಾಸರನ್ನಾಗಿ ಮಾಡುತ್ತಿದ್ದಾರೆ. ತಂಬಾಕು ಭಾರತದ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಸಾಮಾನ್ಯ ಅಪಾಯಕಾರಿ ಅಂಶವಾಗಿದೆ ಎಂದು ತಿಳಿಸಿದರು.

ತಾತ್ಕಾಲಿಕವಾಗಿ ಸಿಗುವ ಸಂತೋಷ, ಮೋಜು, ಮಸ್ತಿಯ ಕಾರಣಕ್ಕೆ ಯುವ ಪೀಳಿಗೆ ತಂಬಾಕಿಗೆ ದಾಸರಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಯುವಜನರು ತಂಬಾಕಿನಿಂದ ದೂರ ಇರಬೇಕು. ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ ಹಾಗೂ ಆರ್ಥಿಕ ನಷ್ಟವನ್ನೂ ತರುತ್ತದೆ. ಆದ್ದರಿಂದ ತಂಬಾಕಿನಿಂದ ದೂರವಿದ್ದು ನಮ್ಮ ದೇಹದ ಶ್ವಾಸಕೋಶ ಕಾಪಾಡುವಲ್ಲಿ ನಾವೆಲ್ಲರು ಮುಂಜಾಗೃತರಾಗೋಣ ಎಂದು ತಿಳಿಸಿದರು.

ತಂಬಾಕಿನ ಜೊತೆಗೆ ಮಾದಕ ವಸ್ತುಗಳ ಸೇವನೆಯನ್ನು ಮಾಡುವುದುಂಟು, ಮಾದಕ ವಸ್ತುಗಳ ಮಾರಾಟ ಕಾನೂನಿನನ್ವಯ ಅಪರಾಧವಾಗುತ್ತದೆ. ಯುವಕರು ಇಂತಹ ಮಾದಕ ವಸ್ತುಗಳಿಂದ ದೂರ ಇರುವ ಮೂಲಕ ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ರಾಜ್ಯ ಮಟ್ಟದ ಸಮನ್ವಯ ಸಂಸ್ಥೆಯ ನಿರ್ದೇಶಕರು ಹಾಗೂ ತಪೋವನ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಶಶಿಕುಮಾರ್.ವಿ ಮೆಹರ್‍ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಯಂತ್ರಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶವನ್ನು ರಚಿಸಲಾಗಿದೆ. ನೀತಿ ರೂಪಿಸುವಿಕೆ, ಯೋಜನೆ ತಯಾರಿ ಮತ್ತು ತಂಬಾಕು ನಿಯಂತ್ರಣ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ಇದರ ಜವಾಬ್ದಾರಿಯಾಗಿರುತ್ತದೆ. ಸಾರ್ವಜನಿಕ ಜಾಗೃತಿ, ಸಮೂಹ ಮಾಧ್ಯಮ ಜಾಗೃತಿ ಅಭಿಯಾನ ಮತ್ತು ಸಾಮಾಜಿಕ ವರ್ತನೆ ಬದಲಾವಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಡಾ. ಗಂಗಧರ್ ವರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಅಶ್ವಿನಿ ಕೆ.ಆರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೊಗೇಂದ್ರ ಕುಮಾರ ಬಿ.ಯು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ್, ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಸಿಬ್ಬಂದಿ ವರ್ಗದವರು, ತಪೋವನ ಸಮೂಹ ಸಂಸ್ಥೆಗಳ ಸಿಬ್ಬಂದಿ ವರ್ಗದವರು. ಹಾಗೂ ಇನ್ನಿತರರು ಭಾಗವಹಿಸಿದ್ದರು.

Share This Article
error: Content is protected !!
";