ವಿಜಯನಗರ (ಹೊಸಪೇಟೆ), ಜೂ.21: ಆರೋಗ್ಯಕರ ಜೀವನ ಸಾಗಿಸಲು ಮತ್ತು ದೈಹಿಕವಾಗಿ ಸದೃಢವಾಗಲು ಯೋಗವು ಮುಖ್ಯ ಪಾತ್ರ ವಹಿಸಲಿದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸಲಹೆ ನೀಡಿದರು.
ನಗರದ ಸ್ವಾತಂತ್ರ್ಯ ಉದ್ಯಾನವನ(ಫ್ರೀಡಂ ಪಾರ್ಕ್)ದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಸ್ಕೌಟ್ಸ್ & ಗೈಡ್ಸ್ ಘಟಕ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಪತಂಜಲಿ ಯೋಗ ಸಂಸ್ಥೆ, ಎ.ಎಫ್.ಐ. ಮತ್ತು ವಿವಿಧ ಯೋಗ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಈಗಿನ ಯುವ ಜನರಿಗೆ ಯೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ವೇದಕಾಲದಿಂದಲೂ ಯೋಗದ ಬಗ್ಗೆ ಭಾರತದಲ್ಲಿ ಕಲ್ಪನೆಯಿದೆ. ಬದಲಾದ ಜೀವನ ಶೈಲಿಯಿಂದಾಗಿ ಅಸಮತೋಲನ ಅಹಾರ ಪದ್ದತಿಗಳಿಂದ ಅನಾರೋಗ್ಯಪೀಡಿತರಾಗುತ್ತಿರುವುದು ಹೆಚ್ಚಾಗಿದೆ. ರೋಗಮುಕ್ತವಾಗಲು ಯೋಗವನ್ನು ರೂಢಿಸಿಕೊಳ್ಳಬೇಕಿದೆ. ಕೇವಲ ವಯ್ಸಸಾದ, ದಪ್ಪ ಮತ್ತು ಆರೋಗ್ಯ ಸಮಸ್ಯೆ ಇದ್ದವರು ಮಾತ್ರ ಯೋಗ ಮಾಡಬೇಕು ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ. ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಇದು ಸಹಕಾರಿಯಾಗಲಿದೆ. ಮಾನಸಿಕ ಒತ್ತಡ, ಖಿನ್ನತೆಯನ್ನು ಕಡಿಮೆ ಮಾಡಲು ಯೋಗವು ಪರಿಣಾಮಕಾರಿ ವಿಧಾನವಾಗಿದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ರಕ್ತಪರಿಚಲನೆ, ಜೀರ್ಣಕ್ರಿಯೆ, ಉತ್ತಮ ನಿದ್ರೆಗೆ ಅನುಕೂಲವಾಗಲಿದೆ. ಭಾರತದಲ್ಲಿ ಆಯುರ್ವೇದದಲ್ಲಿ ಹೇಳಿರುವಂತೆ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮೂರರ ನಡುವಿನ ಸಮತೋಲನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ ಎಂದರು.
ಹೊಸಪೇಟೆ ನಗರಸಭೆಯ ಅಧ್ಯಕ್ಷರಾದ ರೂಪೇಶ್ ಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಉದ್ಯಾನವನ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಯೋಗಾಭ್ಯಾಸದ ಅನುಕೂಲತೆ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಯೋಗ ಗುರುಗಳಾದ ಕಿರಣ್ ಜೀ ಮತ್ತು ರಾಜೇಶ್ ಕರ್ವಾ ವಿವಿಧ ಆಸನಗಳನ್ನು ಮಾಡಿಸಿದರು.
ಈ ವೇಳೆ ಪ್ರಭಾರಿ ಬಿಇಒ ಶೇಖರಪ್ಪ ಹೊರಪೇಟೆ, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಮುನಿವಾಸುದೇವರೆಡ್ಡಿ, ಡಾ.ಕೆ.ಹೆಚ್.ಗುರುಬಸವರಾಜ, ಡಾ.ಹೆಚ್.ಕೊಟ್ರಮ್ಮ, ಡಾ.ಸರಸ್ವತಿ, ಡಾ.ಹೇಮ, ಡಾ.ಹಾಲಮ್ಮ, ಆಕಾಶವಾಣಿಯ ನಾಗರತ್ನ, ಪತಂಜಲಿ ಯೋಗ ಸಂಸ್ಥೆಯ ಜಿಲ್ಲಾ ಉಸ್ತುವಾರಿ ಎಫ್.ಡಿ.ಹಳ್ಳಿಕೇರಿ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಮಾನಸ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜಿನ ಮಕ್ಕಳು, ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು, ಆಯುಷ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.