ಧಾರವಾಡ ಸೆಪ್ಟೆಂಬರ್ 20: ಇಂದು ಮಧ್ಯಾಹ್ನ ಧಾರವಾಡ ನಗರದ ಆರ್.ಎನ್.ಶಟ್ಟಿ ಜಿಲ್ಲಾ ಕ್ರೀಡಾಂಗಣ ಹತ್ತಿರ ಇರುವ ಸರಕಾರಿ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ದಿಢೀರ ಭೇಟಿ ನೀಡಿ, ಮಿಷನ್ ವಿದ್ಯಾಕಾಶಿ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.
ಶಾಲೆಯ ಹತ್ತನೆ ತರಗತಿ ಮಕ್ಕಳ ಹಾಜರಾತಿಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರಿರುವದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಪ್ರತಿ ವಿದ್ಯಾರ್ಥಿಯ ಗೈರು ಇರುವ ಬಗ್ಗೆ ಮಾಹಿತಿ ಪಡೆದರು. ಶಿಕ್ಷಕರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಮುಂದಿನ ಒಂದು ವಾರದಲ್ಲಿ ನಿರಂತರ ಗೈರಾಗಿರುವ 20 ಮಕ್ಕಳ ಮನೆ ಭೇಟಿ ನೀಡಿ, ಈ ಬಗ್ಗೆ ನಿಖರ ವರದಿ ನೀಡಬೇಕೆಂದು ಸೂಚಿಸಿದರು.
ಕಲಿಕೆಯ ಗುಣಮಟ್ಟ: ಶಾಲಾ ಸಾಕ್ಷರತಾ ಇಲಾಖೆಯಿಂದ ಈಗಾಗಲೇ ಈ ವರ್ಷದ ಆರಂಭದಲ್ಲಿ ಗುರುತಿಸಿರುವ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವ ಮೂಲಕ ಅವರ ಓದು, ಬರಹದಲ್ಲಿ ಸುಧಾರಣೆ ತರಲಾಗುತ್ತಿದೆ.
ಇಂತಹ ತರಗತಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಂದ ಕನ್ನಡ, ಇಂಗ್ಲೀಷ ಭಾಷೆಯ ಪಠ್ಯಗಳನ್ನು ಓದಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಬದಲಾವಣೆ, ಪ್ರಗತಿ ಪರಿಶೀಲಿಸಿದರು.
ಸ್ವಯಂ ಪ್ರೇರಣೆಯಿಂದ ಪಾಠ ಓದಿದ ಮಕ್ಕಳಿಗೆ ಶಬ್ಬಾಶ ಹೇಳುವ ಮೂಲಕ ಇಡೀ ವರ್ಗದ ವಿದ್ಯಾರ್ಥಿಗಳಿಂದ ಚಪ್ಪಾಳೆ ತಟ್ಟಿಸಿ, ಪ್ರೋತ್ಸಾಹಿಸಿದರು.
ಸೆ.26 ರಂದು ಪ್ರತಿ ಪ್ರೌಢಶಾಲೆಯಲ್ಲಿ ಪಾಲಕರ ಸಭೆ: ಜಿಲ್ಲೆಯ ಪ್ರತಿ ಪ್ರೌಢಶಾಲೆಯ ಹಾಜರಾತಿ ಪರಿಶೀಲಿಸಿದಾಗ ಸರಿಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳು ಅನಿಯಮಿತ ಗೈರು, ನಿರಂತರ ಗೈರುಹಾಜರು ಇರುವುದು ತಿಳಿದು ಬಂದಿದೆ.
ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲೆಯ ಪ್ರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ತಮ್ಮ ಶಾಲೆಯಲ್ಲಿ ಅನಿಯಮಿತ ಮತ್ತು ನಿರಂತರ ಗೈರು ಇರುವ ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಬರುವ ಸೆಪ್ಟೆಂಬರ್ 26 ರ ಶನಿವಾರದಂದು ಮಧ್ಯಾಹ್ನ ಶಾಲೆಯಲ್ಲಿ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಈ ಸಭೆಗೆ ಆಯಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮತ್ತು ಸದಸಸ್ಯರನ್ನು, ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಅವರಿಗೂ ಮಕ್ಕಳ ಗೈರುಹಾಜರಿ ಬಗ್ಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು.
ಪ್ರತಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಂದ ಗೈರುಹಾಜರು ಇರುವ ಮಕ್ಕಳ ಬಗ್ಗೆ ಸಕಾರಣದೊಂದಿಗೆ ವಿವರವಾದ ವರದಿಯನ್ನು ಡಿಡಿಪಿಐ ಅವರು ಪಡೆದು, ಜಿಲ್ಲಾಡಳಿತಕ್ಕೆ ಕ್ರೋಡಿಕೃತ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗ್ರಾಮಮಟ್ಟದ ಅಧಿಕಾರಿಗಳ ತಂಡ ರಚಿಸಿ: ಶಾಲೆಯಿಂದ ಹೊರಗುಳಿದ ಮತ್ತು ನಿರಂತರ ಗೈರು ಇರುವ ಮಕ್ಕಳ ಮನೆಮನೆಗೆ ಭೇಟಿ, ಪಾಲಕರಿಗೆ ತಿಳುವಳಿಕೆ ಮತ್ತು ಮಕ್ಕಳನ್ನು ಶಾಲೆಗೆ ಪ್ರತಿದಿನ ಬರುವಂತೆ ಮಾಡಲು ಪಿಡಿಓ, ವ್ಹಿ.ಎ., ಎಸ್.ಡಿ.ಎಂ.ಸಿ., ಆಯಾ ವಾರ್ಡ, ಗ್ರಾಮಗಳ ಪಂಚಾಯತ ಸದಸ್ಯರು ಸಮಿತಿ ಮಾಡಿಕೊಳ್ಳಬೇಕು. ಈ ಕುರಿತು ಸೂಕ್ತ ಕ್ರಮವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಅವರಿಗೆ ತಿಳಿಸಿದರು.
ಶಾಲಾ ಶೇ.75 ರಷ್ಟು ಹಾಜರಾತಿ ಕಡ್ಡಾಯ: ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಪರೀಕ್ಷೆಗೆ ಶೇ.75 ರಷ್ಟು ಕಡ್ಡಾಯ. ಅದನ್ನು ಪ್ರತಿ ಶಾಲೆಯಲ್ಲಿ ತಪ್ಪದೇ ಅನುಸರಿಸಬೇಕು. ಅನಿಯಮಿತ ಮತ್ತು ನಿರಂತರ ಗೈರು ಹಾಜರಿರುವ ಮಕ್ಕಳ ಪಾಲಕರಿಗೆ ಸಭೆ ಕರೆದು ಈ ಕುರಿತು ತಿಳುವಳಿಕೆ ನೀಡಬೇಕು. ಪಾಲಕರಿಗೆ ಧೃಡಿಕರಿಸಬೇಕು ಎಂದು ಅವರು ಹೇಳಿದರು.
ಪ್ರತಿ ತಾಲೂಕಿನ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ: ಮಿಷನ್ ವಿದ್ಯಾಕಾಶಿ ಯೋಜನೆಯ ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ತಾವು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳು ಪ್ರತಿ ಶಾಲೆಗೆ ಭೇಟಿ ನೀಡಿ, ಮಕ್ಕಳ ಕಲಿಕೆಗೆ ಹಾಗೂ ಶಿಕ್ಷಕರಿಗೆ ಸಹಕಾರ ನೀಡಲಿದ್ದಾರೆ. ಶಾಲೆಯ ಪ್ರಗತಿ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಲದ್ದಿಮಠ ಸೇರಿದಂತೆ ಶಾಲೆಯ ಸಹ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.