ಮತದಾನ ಸೇರಿದಂತೆ ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ತರಬೇತಿ ಪಡೆದು, ಯಾವುದೇ ಗೊಂದಲಕ್ಕೀಡಾಗದೆ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ ನೀಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ. 07 ರಂದು ಮತದಾನ ನಡೆಯಲಿದ್ದು, ಇದಕ್ಕಾಗಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ವಿಧಾನಸಭಾ ಕ್ಷೇತ್ರವಾರು ನಗರದ ವಿವಿಧೆಡೆ ಎರಡನೆ ಹಂತದ ತರಬೇತಿಯನ್ನು ಬುಧವಾರ ಏರ್ಪಡಿಸಲಾಗಿದ್ದು, ತರಬೇತಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದರು.
ಮೇ. 07 ರಂದು ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸುವಲ್ಲಿ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ, ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಉಪವಿಭಾಗಾಧಿಕಾರಿ ಹೇಮಂತ್ ಕುಮಾರ್ ಅವರು ತರಬೇತಿಗಾಗಿ ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರೋತ್ಸಾಹ ಮಾತುಗಳ ಮೂಲಕ ಹುರಿದುಂಬಿಸುವ ಕಾರ್ಯ ಮಾಡಿದರು. ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಬದ್ಧರಾಗಿರಬೇಕು. ಮೇ. 06 ರಂದೇ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಇದಕ್ಕೆ ಆಗಮಿಸುವ ಅಧಿಕಾರಿ, ಸಿಬ್ಬಂದಿಗಳಿಗೆ ಸಾರಿಗೆ, ಊಟೋಪಹಾರ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಡಲಾಗುವುದು. ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ನಿರ್ವಹಿಸಬೇಕಾದ ಕಾರ್ಯಗಳು, ಮತದಾನದ ದಿನ ಅಣಕು ಮತದಾನ, ನಂತರ ಮತದಾನ ಪ್ರಕ್ರಿಯೆ ನಡೆಸುವ ರೀತಿ ಹಾಗೂ ಮತದಾನವನ್ನು ಪೂರ್ಣಗೊಳಿಸಿ, ಡಿಮಸ್ಟರಿಂಗ್ ನಲ್ಲಿ ಇವಿಎಂ ಸಹಿತ ಇತರೆ ದಾಖಲೆಗಳನ್ನು ಹಸ್ತಾಂತರಿಸುವ ಬಗ್ಗೆ ಕೂಲಂಕುಷವಾಗಿ ತರಬೇತಿ ಹಾಗೂ ಮಾಹಿತಿ ನೀಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು, ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಗುರುರಾಜ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸಪ್ಪ ಸೇರಿದಂತೆ ಮತ್ತಿತರು ಇದ್ದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಬಳ್ಳಾರಿ ನಗರದ ಸೇಂಟ್ ಫಿಲೋಮಿನಾ ಸಂಯುಕ್ತ ಜೂನಿಯರ್ ಕಾಲೇಜಿನಲ್ಲಿ ತರಬೇತಿ ಏರ್ಪಡಿಸಲಾಯಿತು. ಅದೇ ರೀತಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಧಿಕಾರಿ, ಸಿಬ್ಬಂದಿಗೆ ಎಸ್.ಕೆ. ಮೋದಿ ಸ್ಕೂಲ್ನಲ್ಲಿ. ಬಳ್ಳಾರಿ ನಗರ ಕ್ಷೇತ್ರದ ಅಧಿಕಾರಿ, ಸಿಬ್ಬಂದಿಗೆ ಸೇಂಟ್ ಜಾನ್ಸ್ ಪಿ.ಯು. ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಪರಿಶೀಲನೆಗೊಂದಲಕ್ಕೀಡಾಗದೆ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸಲು ಸೂಚನೆ
