Ad image

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕಿವಿಮಾತು ಉದ್ಯೋಗಾಕಾಂಕ್ಷಿಗಳಲ್ಲಿ ನಿರಂತರ ಪ್ರಯತ್ನ ಇರಲಿ

Vijayanagara Vani
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕಿವಿಮಾತು ಉದ್ಯೋಗಾಕಾಂಕ್ಷಿಗಳಲ್ಲಿ ನಿರಂತರ ಪ್ರಯತ್ನ ಇರಲಿ
ಬಳ್ಳಾರಿ,ಮಾ.07
ಉದ್ಯೋಗಾಕಾಂಕ್ಷಿಗಳಲ್ಲಿ ಕ್ರಿಯಾಶೀಲ ಮನೋಭಾವ, ಸ್ಪರ್ಧಾತ್ಮಕ ಮನಸ್ಸು ಹಾಗೂ ನಿರಂತರ ಪ್ರಯತ್ನ ಇದ್ದಲ್ಲಿ ಉದ್ಯೋಗ ಪಡೆದುಕೊಳ್ಳುವುದರ ಮೂಲಕ ಬದುಕು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾ ಕೌಶಲ್ಯ ಮಿಷನ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಡಿಡಿಯುಜಿಕೆವೈ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಪೀಳಿಗೆಯು ಉದ್ಯೋಗ ಪಡೆದುಕೊಳ್ಳುವುದಷ್ಟೇ ಅಲ್ಲದೇ ಉದ್ಯಮ ಸ್ಥಾಪನೆಗೂ ಅಡಿಪಾಯ ಹಾಕಬೇಕು. ಈ ಮೂಲಕ ಇತರರಿಗೂ ಉದ್ಯೋಗ ನೀಡುವಂತವರಾಗಬೇಕು ಎಂದು ಆಶಿಸಿದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಮಾತನಾಡಿ, ಬದುಕಿನಲ್ಲಿ ಉತ್ತಮ ಸಾಧಕರಾಗಲು ಕಠಿಣ ಪರಿಶ್ರಮ, ಸಂವಹನ ಕಲೆ, ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸುವ ಗುಣ ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದು ಕರೆ ನೀಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕಿಲ್ ಕನೆಕ್ಟ್ ಕುರಿತ ವ್ಯಾಪಕ ಪ್ರಚಾರ ಕೈಗೊಂಡು, ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಮೇಳಗಳ ಆಯೋಜಿಸುವ ಮೂಲಕ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಿಕೊಡುವುದು ಇಲಾಖೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರತಿ ಉದ್ಯೋಗ ಮೇಳದಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಮೇಳದ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಉದ್ಯೋಗ ಮೇಳದಲ್ಲಿ ಒಟ್ಟು 48 ಕಂಪನಿಗಳು ಭಾಗವಹಿಸಿದ್ದವು. ಮೇಳದಲ್ಲಿ ಒಟ್ಟು 2,749 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 1,146 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದು, 281 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ. 551 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಜಿಪಂ ಯೋಜನಾ ನಿರ್ದೇಶಕ ವಿನೋದ್, ಎನ್‌ಆರ್‌ಎಲ್‌ಎಂ ನ ಡಿಪಿಎಂ ರಾಜೇಂದ್ರ, ಸಸಅ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಹ್ಲಾದ ಚೌದರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ್, ಸಹಾಯಕ ಸಾಂಖ್ಯಿಕ ಅಧಿಕಾರಿ ಚಂದ್ರಮ್ಮ, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಪ್ರಾಣೇಶ್.ವಿ ಸೇರಿದಂತೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು, ಇನ್ನಿತರರು ಉಪಸ್ಥಿತರಿದ್ದರು.

Share This Article
error: Content is protected !!
";