ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

Vijayanagara Vani
ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಒದಗಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಡಿ.10
ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಸಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮ್ಯಾನುವಲ್ ಸ್ಕಾö್ಯವೆಂಜರ್ಸ್ಗಳಿಗೆ ಆಯಾ ಸ್ಥಳೀಯ ಹಾಗೂ ನಗರ ಸಂಸ್ಥೆಗಳಿoದ ಸರ್ಟಿಫಿಕೇಟ್ (ದೃಢೀಕರಣ) ವಿತರಿಸಲು ಕ್ರಮ ವಹಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ತಿಳಿಸಿದರು.
ಸಫಾಯಿ ಕರ್ಮಚಾರಿಗಳ ಸುಸ್ಥಿರ ಆರೋಗ್ಯಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ದಿನ 20 ಜನರ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಪೌರ ಕಾರ್ಮಿಕರಿಗೆ ಯೂನಿಫಾರ್ಮ್, ಹ್ಯಾಂಡ್ ಗ್ಲೌಸ್, ರೈನ್ ಕೋಟ್, ಬೀಚಿಂಗ್ ಪೌಡರ್ ಸೇರಿದಂತೆ ಇತರೆ ಅಗತ್ಯ ಟೂಲ್ಸ್ಗಳನ್ನು ಸಮರ್ಪಕವಾಗಿ ಒದಗಿಸಬೇಕು. ಪೌರ ಕಾರ್ಮಿಕರ ಹಿತ ದೃಷ್ಠಿಯಿಂದ ಸೆಫ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಸಮಯದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಸಫಾಯಿ ಕರ್ಮಚಾರಿ ವಿಭಾಗದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಕಂದಕೂರು ರಾಮುಡು ಅವರು ಮಾತನಾಡಿ, ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸಬೇಕು. ಸಾಮಾಜಿಕ ಭದ್ರತೆ ಹಾಗೂ ಭವಿಷ್ಯಕ್ಕಾಗಿ ಮೀಸಲಾಗುವ ಇಎಸ್‌ಐ ಹಾಗೂ ಇಪಿಎಫ್ ನಿಧಿಯು ಪೌರ ಕಾರ್ಮಿಕರ ಸ್ವತ್ತಾಗಿದ್ದು, ಬಿಮ್ಸ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರಿಗೆ ಖಾಸಗಿ ಏಜೆನ್ಸಿಯಾದ ಓಂ ಸಾಯಿ ಸೆಕ್ಯುರಿಟಿ ಸರ್ವಿಸಸ್‌ನಿಂದ ಕಳೆದ 20 ವರ್ಷದಿಂದ ಯಾವುದೇ ಇಎಸ್‌ಐ ಮತು ಇಪಿಎಫ್ ನೀಡಿರುವುದಿಲ್ಲ ಎನ್ನುವ ಆರೋಪವಿದ್ದು, ಈ ಕುರಿತು ಸಮಗ್ರ ತನಿಖೆ ಕೈಗೊಂಡು ಮಾಹಿತಿ ನೀಡಬೇಕು ಎಂದು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ ಕೈಗೊಳ್ಳಲಾಗುವ ಯೋಜನೆಗಳ ಕುರಿತು ಪೌರ ಕಾರ್ಮಿಕರಿಗೆ ಮಾಹಿತಿ ಒದಗಿಸಿ, ಅರ್ಹ ಫಲಾನುಭವಿಗಳು ಸಕಾಲದಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕ್ರಮವಹಿಸಬೇಕು ಎಂದು ನಿಗಮದ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Share This Article
error: Content is protected !!
";