ಚಿತ್ರದುರ್ಗ
ಸೊಳ್ಳೆಗಳ ಉತ್ಪತ್ತಿ ತಾಣವಾಗದಂತೆ ಕೆಎಸ್ಆರ್ಟಿಸಿ ಡಿಪೋದ ಸ್ವಚ್ಛತೆ ಕಾಪಾಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೀಟಜನ್ಯ ರೋಗಗಳ, ಸಾಂಕ್ರಾಮಿಕ ರೋಗಗಳ ವಿಭಾಗದ ಆರೋಗ್ಯ ನಿರೀಕ್ಷಣಾಧಿಕಾರಿಗಳ ತಂಡ ನಗರದ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಶನಿವಾರ ಭೇಟಿ ನೀಡಿ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶ ಮಾಡುವ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೊಳ್ಳೆಗಳ ನಿಯಂತ್ರಣ ಮಾಡದಿದ್ದಲ್ಲಿ ನಿಯಂತ್ರಣ ಕಾರ್ಯ ಕ್ಲಿಷ್ಟಕರವಾಗುತ್ತದೆ. ಟೈರ್ಗಳನ್ನು ಗೋಪುರದ ರೀತಿ ನಿಲ್ಲಿಸಿ, ನೀರು ನಿಲ್ಲುವ ಎಲ್ಲಾ ಬ್ಯಾರಲ್, ಕಂಟೈನರ್ಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ, ಸಾಧ್ಯವಾದಲ್ಲಿ ಕೀಟನಾಶಕ ಸಿಂಪಡಿಸಿ. ವಾರಕ್ಕೆ ಎರಡು ಬಾರಿಯಾದರೂ ಡಿಪೋ ಒಳಾಂಗಣ, ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ಮಾಡಿ ಸೊಳ್ಳೆಗಳ ತಾಣವಾಗದಂತೆ ಡಿಪೋದ ಸ್ವಚ್ಛತೆ ಕಾಪಾಡಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಕಛೇರಿಯ ವಾತಾವರಣದಲ್ಲಿ, ಮನೆಯ ವಾತವರಣದಲ್ಲಿ ಸ್ವಯಂ ರಕ್ಷಣೆ ಪಡೆಯಬೇಕು. ಜ್ವರ ಬಂದ ಕೂಡಲೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಸರ್ಕಾರಿ ಆಸ್ಪತ್ರೆಗೆ ಬಂದು ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದ ಅವರು, ಕೆಎಸ್ಆರ್ಟಿಸಿ ಡಿಪೋದ ಪಕ್ಕದಲ್ಲಿ ವಸತಿ ನಿವಾಸಗಳಲ್ಲಿ ಸಾರ್ವಜನಿಕರು ವಾಸವಿದ್ದು, ಸಾರ್ವಜನಿಕರ ಆರೋಗ್ಯ ಸಮಸ್ಯೆಯಾಗದಿರಲಿ ಎಂದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಇಂಜಿನಿಯರ್ ಸುರೇಶ್, ಉಗ್ರಾಣ ಪಾಲಕ ಎನ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಮಲ್ಲಿಕಾರ್ಜುನ, ನಾಗರಾಜ್, ಮಳಲಿ ಶ್ರೀನಿವಾಸ, ನಾಗರಾಜ, ಗಂಗಾಧರ ರೆಡಿ, ವಾಹನ ಚಾಲಕ ಮಹಂತೇಶ್ ಸೇರಿದಂತೆ ಡಿಪೋದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಇದ್ದರು.