ಬಳ್ಳಾರಿ,ಆ.02
ಸಿರುಗುಪ್ಪ ತಾಲ್ಲೂಕಿನ ಅರಳಿಗನೂರು ಗ್ರಾಮದ ಡಿ.ರಾಮಲಿಂಗ ಆಚಾರಿ ಅವರ ಶೆಡ್‌ಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಹಾನಿಗೆ ಬಳ್ಳಾರಿಯ ಮೆ.ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿಮಿಟೆಡ್ ವಿಭಾಗೀಯ ವ್ಯವಸ್ಥಾಪಕರಿಗೆ ಪೂರ್ತಿ ಪ್ರಮಾಣದ ವಿಮಾ ಪರಿಹಾರ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ದೂರುದಾರ ಡಿ.ರಾಮಲಿಂಗ ತಮ್ಮ ಶೆಡ್ ಗೆ ರೂ.8,00,000/- ಗಳ ವಿಮೆ ಪಾಲಿಸಿ ಮಾಡಿಸಿದ್ದು, ವಿಮೆಯು 2023 ರ ಮೇ 11 ರಿಂದ 2024 ರ ಮೇ 10 ರವರೆಗೆ ಚಾಲ್ತಿಯಲ್ಲಿದ್ದು, 2024 ರ ಮೇ 04 ರಂದು ಶೆಡ್ಡಿನ ಮೇಲೆ ಹಾದುಹೋದ ಹೈಟೆನ್ಷನ್ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್‌ನಿಂದ ದೂರುದಾರರ ಶೆಡ್ಡಿಗೆ ಬೆಂಕಿ ತಗುಲಿ ಅದರಲ್ಲಿದ್ದ ದಾಸ್ತಾನು ವಸ್ತುಗಳು, ಯಂತ್ರೋಪಕರಣಗಳು, ಪೀಠೋಪಕರಣಗಳು, ಶೇ.75 ರಷ್ಟು ಸುಟ್ಟು ಭಸ್ಮವಾಗಿ ರೂ.31,25,000/- ಮೊತ್ತದ ಹಾನಿಯಾಗಿರುತ್ತದೆ. ಈ ಪ್ರಕರಣವನ್ನು ವಿಮೆ ಕಂಪನಿಗೆ ಹಾಗೂ ಸಾಲ ಪಡೆದ ಬ್ಯಾಂಕ್ ಗೆ ಮಾಹಿತಿ ನೀಡಿದ್ದರು. ನಷ್ಟ ಪರಿಹಾರ ಮೊತ್ತ ಕೋರಿ ವಿಮಾ ಕಂಪನಿಗೆ ಕ್ಲೆöÊಮ್ ಸಲ್ಲಿಸಿದ್ದರು.
ನಂತರ ಕ್ಲೆöÊಮ್ ಪರಿಹಾರ ನೀಡದ ಕಾರಣ ಕಾನೂನಿನ ಅನ್ವಯ ನೋಟಿಸ್‌ನ್ನು ಸಹ ಜಾರಿ ಮಾಡಿದ ನಂತರ ದೂರುದಾರರ ಖಾತೆಗೆ ವಿಮಾ ಕಂಪನಿಯು ರೂ. 60,664/-ಮಾತ್ರ ಪಾವತಿ ಮಾಡಿತ್ತು. ವಿಮಾ ಪಾಲಿಸಿಯ ಮೊತ್ತವು ರೂ.8,00,000/- ಇದ್ದು ಬಾಕಿ ರೂ.7,39,336/- ಗಳನ್ನು ಶೇ.9 ಬಡ್ಡಿಯೊಂದಿಗೆ ಪರಿಹಾರ ನೀಡಲು ಒದಗಿಸುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲ ಇವರು ಉಭಯ ಪಕ್ಷಗಾರರ ವಾದ ವಿವಾದ ಆಲಿಸಿದ ನಂತರ ಪ್ರಕರಣದಲ್ಲಿ ದೂರುದಾರರ ಶೆಡ್ಡಿಗೆ ಬೆಂಕಿ ತಗುಲಿ ಅವಘಡ ನಡೆದಿದ್ದು, ಎದುರುದಾರರು ಘಟನಾ ಸ್ಥಳದಲ್ಲಿ ತಪಾಸಣೆ ಮಾಡಿ ಪೂರ್ಣ ಪ್ರಮಾಣದ ವರದಿ ನೀಡದಿರುವುದು. ದೂರುದಾರರ ಶೆಡ್ಡಿನಲ್ಲಿ ಪಾಲಿಸಿಗೆ ಒಳಪಟ್ಟ ದಾಸ್ತಾನು ಹಾಗೂ ಕರಕುಶಲ ವಸ್ತುಗಳು ಸುಟ್ಟಿರುತ್ತದೆ ಎಂದು ಸಾಬೀತುಪಡಿಸಿರುವುದರಿಂದ ದೂರನ್ನು ಭಾಗಶಃ ಪುರಸ್ಕರಿಸಿ ಎದುರುದಾರರು ಬಾಕಿ ವಿಮಾ ಮೊತ್ತ ರೂ.1,11,250/- ಪರಿಹಾರ, ಮಾನಸಿಕ ಹಿಂಸೆಗೆ ರೂ.10,000/- ಹಾಗೂ ದೂರಿನ ವೆಚ್ಚ ರೂ.5000/- ಗಳನ್ನು ದೂರುದಾರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.
ಈ ಪರಿಹಾರ ಮೊತ್ತವನ್ನು 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತ ರೂ.1,11,250/- ಶೇ.6 ಬಡ್ಡಿ ಮೊತ್ತವನ್ನು ಆದೇಶ ಹೊರಡಿಸಿದ ದಿನದಿಂದ ಪಾವತಿಸಲೂ ಅವರು ಆದೇಶಿದ್ದಾರೆ.