ಚಿತ್ರದುರ್ಗ]ಜುಲೈ29:
ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಪ್ಲಾಸ್ಟಿಕ್ ಬಾಟಲಿ, ಎಳನೀರಿನ ಚಿಪ್ಪು, ಇತರೆ ತ್ಯಾಜ್ಯವನ್ನು ಕಾಲಕಾಲಕ್ಕೆ ಶುಚಿತ್ವ ಕಾಪಾಡುವ ಮೂಲಕ ಡೆಂಗ್ಯೂ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ತಿಳಿಸಿದರು.
ಡೆಂಗ್ಯೂ ವಿರೋಧಿ ಮಾಸಚಾರಣೆ ಪ್ರಯುಕ್ತ ಬುದ್ಧನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಪೋಸ್ಟರ್ ನೀಡಿ, ಜಾಗೃತಿ ಮೂಡಿಸಲಾಯಿತು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಮಂಜುಳಾ ಮಾತನಾಡಿ, ನಮ್ಮ ಕಚೇರಿ ಅಧೀನದ ಎಲ್ಲಾ ಅಂಗನವಾಡಿ ಕೇಂದ್ರದ ಆವರಣಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎ.ಗಂಗಾಧರ, ಎಸ್.ಆಶೋಕ್ ಹಾಗೂ ಆರೋಗ್ಯ ಇಲಾಖೆಯ ಹೆಚ್.ಐ.ಒ ಪಾರ್ವತಿ, ಕೇಶವ್ ಅವರ ತಂಡ ಬಾಲಭವನದ ಆವರಣ, ಕ್ರೀಡಾಂಗಣ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಅವರಣಗಳಲ್ಲಿ ಡೆಂಗ್ಯೂ ಲಾರ್ವ ಸಮೀಕ್ಷೆ ಹಾಗೂ ಮೇಲ್ವಿಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಚೇರಿಯ ಮೇಲ್ವಿಚಾರಕಿ ನಿರ್ಮಲ, ಎಫ್.ಡಿ.ಎ ಲಕ್ಷ್ಮಿ ಹಾಗೂ ಸಿಬ್ಬಂದಿ ಹಾಜರಿದ್ದರು.