ಸೆಪ್ಟೆಂಬರ್ 13 ರಂದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ” ”ಕುಟುಂಬದ ಒಬ್ಬರಿಗೆ ಉದ್ಯೋಗಕ್ಕೆ ಚಿಂತನೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ”

Vijayanagara Vani
ಸೆಪ್ಟೆಂಬರ್ 13 ರಂದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ” ”ಕುಟುಂಬದ ಒಬ್ಬರಿಗೆ ಉದ್ಯೋಗಕ್ಕೆ ಚಿಂತನೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ”
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 28, 2024 ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳಿವೆ. ಪ್ರತಿ ಕುಟುಂಬದಲ್ಲಿ ಅರ್ಹ ಒಬ್ಬರಿಗೆ ಉದ್ಯೋಗ ಸಿಗುವಂತಾಗಬೇಕು ಎಂಬ ಆಶಯದಿಂದ ಸೆಪ್ಟೆಂಬರ್ 13 ರಂದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಹೆಚ್ .ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆಡಿಟೋರಿಯಂ ನಲ್ಲಿ ನಡೆದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಅವರು ‌ಮಾತನಾಡಿದರು.
ಒಂದು‌ ಕುಟುಂಬಕ್ಕೆ ಒಂದು ಕೆಲಸ ಸಿಗಬೇಕು ಎಂಬ ಉದ್ದೇಶದಿಂದ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅಂದಾಜು 09 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ಉದ್ಯೋಗ ‌ಮೇಳಕ್ಕೂ‌ ಮುನ್ನ ಎಷ್ಟು ಕುಟುಂಬದಲ್ಲಿ ಕೆಲಸ ಇದೆ. ಎಷ್ಟರಲ್ಲಿ ಕೆಲಸವಿಲ್ಲ ಎಂಬ ಮಾಹಿತಿ ಸಂಗ್ರಹಿಸಲಾಗುವುದು. ಹಾಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಎಂದರು. ಇದುವರೆಗೂ ಉದ್ಯೋಗ ಮೇಳಕ್ಕೆ 50 ಕಂಪನಿಗಳು ನೊಂದಣಿಯಾಗಿದೆ. 100 ಕ್ಕೂ ಅಧಿಕ ಕಂಪನಿಗಳು‌ ನೋಂದಣಿಯಾಗುವ ನಿರೀಕ್ಷೆ ಇದೆ.
ಈ ವರೆಗೆ 1110 ಉದ್ಯೋಗಾಂಕ್ಷಿಗಳು ನೊಂದಣಿಯಾಗಿದ್ದಾರೆ. ಇನ್ನು ನೋಂದಣಿ ಹೆಚ್ಚಿಸಲು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮುಖಂಡರು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಇದುವರೆಗೂ ಕಂಪನಿಗಳಿಂದ ಸುಮಾರು 2000 ಉದ್ಯೋಗ ಲಭ್ಯವಿದೆ ಎಂಬ ಮಾಹಿತಿ ಬಂದಿದೆ. ಉದ್ಯೋಗಾಂಕ್ಷಿಗಳಿಗೆ ಯಾವುದೇ ತಾಂತ್ರಿಕ ಅಥವಾ ತಾಂತ್ರಿಕೇತರ ಪದವಿ ಹೊಂದಿದ್ದರು ಅರ್ಹರಿಗೆ ತರಬೇತಿಯ ಜೊತೆಗೆ ಉದ್ಯೋಗ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳದಲ್ಲಿ ಅಂದಾಜು 100 ನಿಯೋಜಕರು/ಕಂಪನಿಗಳು ಭಾಗವಹಿಸಲ್ಲಿದ್ದು, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಮತ್ತು ವಿವಿಧ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿರುತ್ತದೆ.
ಉದ್ಯೋಗಮೇಳದಲ್ಲಿ ಭಾಗವಹಿಸುವ ಉದ್ಯೋಗಕಾಂಕ್ಷಿಗಳು https://bangalorerural.nic.in/en/job-fair/5 ನೋಂದಾಯಿಸಿ ಎಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಉದ್ಯೋಗ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಸ್ಥಳೀಯ ಅಧಿಕಾರಿಗಳು , ಸ್ವಚ್ಚತಾ ವಾಹಿನಿ, ಆಟೋಗಳ ಮೂಲಕ ಜಾಗೃತಿ ‌ಮೂಡಿಸುವ ಮೂಲಕ ವ್ಯಾಪಕ ಪ್ರಚಾರ ನೀಡಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ (ಬಯಪ)ಅಧ್ಯಕ್ಷರಾದ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಎ.ಸ್ಪಿ ಸಿ.ಕೆ ಬಾಬಾ, ಎ.ಸಿ ದುರ್ಗಶ್ರೀ, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.
WhatsApp Group Join Now
Telegram Group Join Now
Share This Article
error: Content is protected !!