ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸರ್ಕಾರಿ ಶಾಲಾ-ಕಾಲೇಜು, ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಪಿ.ಸಿ ಜಾಫರ್ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿದ್ದು, ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ ಪಾಸ್ ಆದ ನಂತರ ಜೆ.ಇ.ಇ, ನೀಟ್ ನಂತಹ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಉನ್ನತ ವ್ಯಾಸಂಗಕ್ಕೆ ಹೋಗಬೇಕು. ಹಾಗಾಗಿ ವಸತಿ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 09 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಿ. ಶಿಶು ಮರಣ ಮತ್ತು ತಾಯಿ ಮರಣಗಳನ್ನು ತಡೆಯಲು ತಾಯಂದಿರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ವೈದ್ಯರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿ ಜಾಗೃತಿ ಮೂಡಿಸಿ. ಡೆಂಗಿ ನಿಯಂತ್ರಣಕ್ಕೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜೊತೆಗೆ ಆಗಾಗ್ಗೆ ಆಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳನ್ನು ಗುರ್ತಿಸಿ ಯೋಜನೆಯ ಸೌಲಭ್ಯ ಕಲ್ಪಿಸಿ. ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಪಡಿತರ ಚೀಟಿ ಪಡೆದಿರುವ ಸರ್ಕಾರಿ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ನಿಗಮಗಳಲ್ಲಿ ಬಾಕಿ ಇರುವ ಅರ್ಜಿಗಳು ಎಷ್ಟು, ನೀರು ಸಿಕ್ಕಿರುವ ಕೊಳವೆ ಬಾವಿಗಳಲ್ಲಿ ಎಷ್ಟು ಎಂಬುದರ ಬಗ್ಗೆ ವರದಿ ನೀಡಿ. ನೀರು ಸಿಕ್ಕಿರುವ ಕೊಳವೆ ಬಾವಿಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಿ ರೈತ ಫಲಾನುಭವಿಗಳಿಗೆ ಒಪ್ಪಿಸಿ ಎಂದರು.
ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿ. ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವ ಅಂಗಡಿ-ಮಳಿಗೆಗಳು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.
ವಿವಿಧ ಇಲಾಖೆಗಳಡಿ ಬರುವ ಯೋಜನೆಗಳಿಗೆ ಅಗತ್ಯ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದು ಮಾರ್ಚ್ ಅಂತ್ಯದವರೆಗೆ ಕಾಯದೆ ತ್ವರಿತವಾಗಿ ಅನುದಾನ ಖರ್ಚು ಮಾಡಿ ಶೇಕಡ 100% ರಷ್ಟು ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಪ್ರಾದೇಶಿಕ ಅರಣ್ಯ ವಿಭಾಗದ ಉಪವಿಭಾಗಾಧಿಕಾರಿ ಸರೀನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಎನ್. ದುರ್ಗಶ್ರೀ, ನಾಲ್ಕು ತಾಲ್ಲೂಕು ತಹಶೀಲ್ದಾರ್ ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.