ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಿಲ್ಲಾಮಟ್ಟದ ಜಾಗೃತಿ ಜಾಥಾ ಕಾರ್ಯಕ್ರಮ ಜನಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ: ಮೇಯರ್ ಮುಲ್ಲಂಗಿ ನಂದೀಶ್

Vijayanagara Vani
ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಿಲ್ಲಾಮಟ್ಟದ ಜಾಗೃತಿ ಜಾಥಾ ಕಾರ್ಯಕ್ರಮ ಜನಸಂಖ್ಯೆ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ: ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ,ಜು.11
ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಯೋಜನೆಗಳ ಜೊತೆಗೆ ಜನ ಸಮುದಾಯವು ಸಕ್ರಿಯವಾಗಿ ಭಾಗವಹಿಸಿದ್ದಲ್ಲಿ ಮಾತ್ರ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಬಳ್ಳಾರಿ ಮಹನಾಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ವಿಭಾಗ, ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ಆಸ್ಪತ್ರೆಯ ಡಿಎನ್ಬಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದಿನ ದೇಶದಾದ್ಯಂತ ನಾವು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಜನಸಂಖ್ಯೆ ನಿಯಂತ್ರಣದ ಜಾಗೃತಿಗೋಸ್ಕರ ಆಚರಿಸುತ್ತಿದ್ದೇವೆ. 1987 ರಲ್ಲಿ ವಿಶ್ವದ ಜನಸಂಖ್ಯೆ 500 ಕೋಟಿ ದಾಟಿದ ಹಿನ್ನಲೆಯಲ್ಲಿ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ದೇಶದ ಜನಸಂಖ್ಯೆ 144 ಕೋಟಿ ದಾಟಿದ್ದು, ಜಗತ್ತಿನ ಶೇ.17 ಜನಸಂಖ್ಯೆ ಭಾರತದ್ಲದೆ. 6.82 ಕೋಟಿ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿದೆ. ಹಾಗಾಗಿ ಜನಸಂಖ್ಯೆ ನಿಯಂತ್ರಣ ಕೈಗೊಳ್ಳುವ ಕಾರ್ಯವನ್ನು ಸಮುದಾಯದ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸೋಣ ಎಂದು ಅವರು ವಿನಂತಿಸಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯು ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ದಿಯಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. \ ನಮ್ಮ ಮುಂದೆ ಜನಸಂಖ್ಯಾ ಸ್ಥಿರತೆಯನ್ನು ಕಾಯ್ದುಕೊಳ್ಳುವ ಬಹುದೊಡ್ಡ ಜವಾಬ್ದಾರಿಯಿದೆ ಎಂದು ಅಭಿಪ್ರಾಯ ಪಟ್ಟರು.
ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾದರೆ, ಜನ್ಮ ನೀಡುವ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಬದ್ದತೆಯನ್ನು ಕಾಪಾಡುವುದಾಗಿದೆ. ಅದಕ್ಕಾಗಿ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಆರೋಗ್ಯ ಸೇವಾ ಸೌಲಭ್ಯಗಳನ್ನು ನೀಡುತ್ತಿದೆ. ಗರ್ಭಿಣಿಯರ ಆರೈಕೆಗಾಗಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ನಗು ಮಗು ಅನುಷ್ಠಾನಗೊಳಿಸಿದ್ದು, ಅದಕ್ಕೆ ಪೂರಕವಾಗಿ ನವಜಾತ ಶಿಶು ಆರೈಕೆ, ರಾಷ್ಟ್ರೀಯ ಬಾಲವಿಕಾಸ, ಶಾಲಾ ಆರೋಗ್ಯ, ಹದಿಹರೆಯದವರ ಆರೈಕೆ, ಅಪೌಷ್ಠಿಕ ಮಕ್ಕಳ ಆರೋಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ, ಹೀಗೆ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜನಸಂಖ್ಯೆ ಸ್ಥಿರತೆಗೆ ತರಲು ಆರೋಗ್ಯ ಇಲಾಖೆಯು ಉತ್ತೇಜನ ನೀಡುತ್ತಿದೆ ಎಂದರು.
ಮದುವೆ ನಂತರ ಕನಿಷ್ಟ ಮೂರು ವರ್ಷಗಳವರೆಗೆ ಮಕ್ಕಳಾಗುವುದನ್ನು ತಡೆಗಟ್ಟುವುದು, ಎರಡು ಮಕ್ಕಳಿಗೆ ಸಂತಾನ ನಿಯಂತ್ರಿಸುವುದು, ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷ ಅಂತರವಿಡುವುದು. ಕುಟುಂಬ ಕಲ್ಯಾಣ ಪದ್ಧತಿ ಅಳವಡಿಸುವಂತೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮೇಲಿನ ಎಲ್ಲಾ ರೀತಿಯಿಂದ ಜನಸಂಖ್ಯೆ ನಿಯಂತ್ರಿಸಿ ಜನಸಂಖ್ಯೆ ಸ್ಥಿರತೆಯನ್ನು ಕಾಪಾಡಿ ದೇಶದ ಸಮಗ್ರ ಅಭಿವೃದ್ದಿಯಲ್ಲಿ ಪಾಲುದಾರರಾಗೋಣ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು ಅವರು ಮಾತನಾಡಿ, ಕುಟುಂಬ ಕಲ್ಯಾಣದ ಶಾಶ್ವತ ವಿಧಾನ ಮತ್ತು ತಾತ್ಕಾಲಿಕ ವಿಧಾನಗಳ ಅನುಷ್ಟಾನವನ್ನು ಕೈಗೊಳ್ಳುವ ಮೂಲಕ 10 ವರ್ಷಗಳಲ್ಲಿ ಜನನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಆದರೂ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಲ್ಯಾಪ್ರೊಸ್ಕೋಪಿಕ್ ಮತ್ತು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಇಲ್ಲಿಯವರೆಗೆ 13825 ಮಹಿಳಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಾಯವಿಲ್ಲದ, ಹೊಲಿಗೆ ಇಲ್ಲದ ನೋ ಸ್ಕಾಲ್ಪೇಲ್ ವೆಸಕ್ಟಮಿ ಶಸ್ತ್ರಚಿಕಿತ್ಸೆಯನ್ನು ಇಲ್ಲಿಯವರೆಗೆ 03 ಜನ ಫಲಾನುಭವಿಗಳಿಗೆ ಮಾಡಲಾಗಿದೆ ಎಂದು ತಿಳಿಸಿದರು.
ತಾತ್ಕಾಲಿಕ ವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಗರ್ಭ ನಿರೋಧಕ ಚುಚ್ಚುಮದ್ದು, ಅಂತರ ಇಂಜೆಕ್ಷನ್ಅನ್ನು 2292 ಫಲಾನುಭವಿಗಳಿಗೆ ನೀಡಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಚುಚ್ಚುಮದ್ದು ಮೂಲಕ ಪಡೆಯಬಹುದಾದ ಚುಚ್ಚುಮದ್ದು ಇದಾಗಿದೆ. ಇಲ್ಲಿಯವರೆಗೆ 4976 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದೆ. ನುಂಗುವ ಮಾತ್ರೆಗಳನ್ನು 3037 ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗಿದೆ. ವಿಶೇಷವಾಗಿ ಹೆರಿಗೆಯಾದ ತಕ್ಷಣ 48 ಗಂಟೆ ಒಳಗಡೆ ಬಾಣಂತಿಗೆ ಅಳವಡಿಸುವ ಪಿಪಿಐಯುಸಿಡಿ (ವಂಕಿ) ಅನ್ನು 6451 ಮಹಿಳೆಯರಿಗೆ ಅಳವಡಿಸಲಾಗಿದೆ. ಪುರುಷರಿಗೆ ನಿರೋಧ್ ಲಭ್ಯವಿದ್ದು, 4035 ಫಲಾನುಭವಿಗಳಿಗೆ ನಿರೋಧ್ ವಿತರಿಸಿ ಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಿಸಲು ವ್ಯಾಪಕ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಾಧಕ ವೈದ್ಯರು ಮತ್ತು ಸಿಬ್ಬಂದಿಯವರಿಗೆ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಾಗೃತಿ ಜಾಥ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ರಾಷ್ಟ್ರೀಯ ಬಾಲ್ಯಸ್ವಾಸ್ಥ್ಯ ಕಾರ್ಯಕ್ರಮದ ಉಪನಿರ್ದೇಶಕರಾದ ಡಾ.ವೀಣಾ ಅವರು ಚಾಲನೆ ನೀಡಿದರು. ಜಾಥಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಯವರು ನಗರ ವಿವಿಧ ಬಡವಾಣೆಗಳಲ್ಲಿ ಸಂಚರಿಸಿ ಜಾಗೃತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಆರೋಗ್ಯ ಶಿಕ್ಷಣ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪದ್ಮ ರೋಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಸ್ಥಳೀಯ ಮುಖಂಡರಾದ ವಿವೇಕ್, ಫಯಾಜ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ.ಆರ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!