ಚಿತ್ರದುರ್ಗಆಗಸ್ಟ್03:
ವಿದ್ಯಾರ್ಥಿಗಳು ಪಠ್ಯದ ಕಲಿಕೆ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಸಮಾಜದಲ್ಲಿ ಉತ್ತಮ ಅವಕಾಶಗಳು ದೊರೆತರೆ ನಾಡಿನಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯವಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಹೇಳಿದರು.
ನಗರದ ಜೋಗಿಮಟ್ಟಿ ರಸ್ತೆಯ ಪರಿಶಿಷ್ಟ ವರ್ಗಗಳ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತ, ಹಾರ್ಮೋನಿಯಂ ಹಾಗೂ ತಬಲಾ ವಾದ್ಯ ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಅಂಕ ಗಳಿಸಿ, ಉತ್ತೀರ್ಣರಾಗುವ ವಿದ್ಯಾರ್ಥಿಗಳು ಮಾತ್ರ ಪ್ರತಿಭಾವಂತರಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ಸಹ ಪ್ರತಿಭಾವಂತರಾಗಿ ನಮ್ಮ ನಾಡಿನ ಹಾಗೂ ದೇಶಕ್ಕೆ ಕೀರ್ತಿ ತರಲು ಸಾಧ್ಯವಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಯುವ ಜನರ ಪ್ರತಿಭೆಗಳ ಅನಾವರಣಕ್ಕೆ ಯುವ ಸೌರಭ, ಸಾಂಸ್ಕøತಿಕ ಸೌರಭ, ಸುಗ್ಗಿ-ಹುಗ್ಗಿ, ಜನಪರ ಉತ್ಸವ, ಗಿರಿಜನ ಉತ್ಸವ, ಚಿಗುರು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದ ಅವರು, ನಮ್ಮ ದೇಶವು ವೈವಿದ್ಯಮಯವಾದ ಸಂಸ್ಕøತಿ ಹೊಂದಿದ್ದು, ಒಂದೊಂದು ನಾಡಿನಲ್ಲಿ ಒಂದೊಂದು ಬಗೆಯ ಸಂಸ್ಕøತಿ ಇದೆ. ಭಾರತ ದೇಶ ಸುತ್ತಿದರೆ ಇಡೀ ಜಗತ್ತನ್ನು ಸುತ್ತಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಹಳಷ್ಟು ವಿದ್ಯಾರ್ಥಿಗಳು ಕಲೆಯಲ್ಲಿ ವೈವಿದ್ಯಮಯ ಪ್ರತಿಭೆ ಹೊಂದಿದ್ದು, ಸುಪ್ತವಾಗಿ ಅಡಗಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ, ಪ್ರತಿಭೆಗಳ ಗುರುತಿಸುವ ಕಾರ್ಯ ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಆಗಬೇಕಿದೆ. ಆಸಕ್ತಿದಾಯಕವಾಗಿರುವ ಕ್ಷೇತ್ರಗಳ ಗುರುತಿಸಿ, ಅವರಿಗೆ ಆ ಕ್ಷೇತ್ರದಲ್ಲಿ ತರಬೇತಿ ಕೊಡುತ್ತಿರುವುದು ನಿಜಕ್ಕೂ ಉತ್ತಮ ಕೆಲಸ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸುಗಮ ಸಂಗೀತ, ಹಾರ್ಮೋನಿಯಂ ಹಾಗೂ ತಬಲಾ ವಾದ್ಯ ಕಲಿಕಾ ತರಬೇತಿ ನೀಡುವುದರಿಂದ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ ಎಂದು ತಿಳಿಸಿದ ಅವರು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆಯ ಗುಣಮಟ್ಟ ಹೆಚ್ಚಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್ ಮಾತನಾಡಿ, ಮಾನಸಿಕ ನೆಮ್ಮದಿ ಹಾಗೂ ಹರ್ಷವನ್ನು ಕೊಡುವ ಮಾಧ್ಯಮ ಸಂಗೀತ, ಕಲಾ ಮಾಧ್ಯಮವಾಗಿದೆ. ಚಿತ್ರದುರ್ಗದ ನೆಲ ಸಂಗೀತ, ಸಾಹಿತ್ಯ, ಸಂಸ್ಕøತಿಗೆ ತುಂಬಾ ಹೆಸರುವಾಸಿಯಾದ ನೆಲ. ಸಂಗೀತ, ಸಾಹಿತ್ಯ, ಕಲೆ, ಸಂಸ್ಕøತಿಯು ನಮ್ಮ ಬದುಕಿನ ಭಾಗವೂ ಹೌದು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಸುಗಮ ಸಂಗೀತ, ಹಾರ್ಮೋನಿಯಂ ಹಾಗೂ ತಬಲಾ ವಾದ್ಯ ಕಲಿಕಾ ತರಬೇತಿಯನ್ನು ಸುಮಾರು 6 ತಿಂಗಳ ಕಾಲ ನೀಡಲಿದ್ದು, ವಾರದಲ್ಲಿ 3 ದಿನ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳು ಆಸಕ್ತಿವಹಿಸಿ ಕಲಿಯುಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಂ.ಟಿ. ಶಿವರಾಜ್, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಿಲಯ ಪಾಲಕಿ ಕೆ.ಎಸ್.ವೈಶಾಲಿ, ಹೊಸದುರ್ಗದ ಸುಗಮ ಸಂಗೀತ ಕಲಾವಿದ ಓ.ಮೂರ್ತಿ ಸೇರಿದಂತೆ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಇದ್ದರು.