ಚಿತ್ರದುರ್ಗ
ತಂಬಾಕು ಉತ್ಪನ್ನ ಮಾರಾಟ ಮಾಡಲು ಉದ್ಯಮ ಪರವಾನಗಿ ಕಡ್ಡಾಯ ಎಂದು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ ಹೇಳಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ನಗರಸಭೆ ಸಂಯುಕ್ತಾಶ್ರಯದಲ್ಲಿ ಹೋಟೆಲ್ ಮಾಲೀಕರಿಗೆ ಹಾಗೂ ತಂಬಾಕು ಉತ್ಪನ್ನ ಮಾರಾಟಗಾರರಿಗೆ ಉದ್ಯಮ ಪರವಾನಗಿ ನೀಡುವ ಕುರಿತು ಮತ್ತು ಕೋಟ್ಪಾ-2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನ, ಸಾಮಥ್ರ್ಯಾಭಿವೃದ್ಧಿ, ಮೇಲ್ವಿಚಾರಣೆ ಕುರಿತಂತೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನ ಮಾರಾಟ ಮಾಡಲು ಉದ್ಯಮ ಪರವಾನಗಿಯನ್ನು ಕಡ್ಡಾಯವಾಗಿ ನಗರಸಭೆ ವತಿಯಿಂದ ಪಡೆದುಕೊಂಡು ಮಾರಾಟ ಮಾಡಬೇಕೆಂದು ವ್ಯಾಪಾರಸ್ಥರಿಗೆ ಸೂಚಿಸಿದ ಅವರು, ಕೋಟ್ಪಾ-2003ರ ಕಾಯ್ದೆಯ ಎಲ್ಲಾ ಸೆಕ್ಷನ್ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಗೆಗಾರ ಬಿ.ಎಂ.ಪ್ರಭುದೇವ್ ಮಾತನಾಡಿ, ಕೋಟ್ಪಾ-2003ರ ಕಾಯ್ದೆಯ ಕುರಿತು ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸಿದರು. ಕಾನೂನು ಬಾಹಿರ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಮತ್ತು ತಂಬಾಕು ಉತ್ಪನ್ನಗಳನ್ನು ಜಾಹೀರಾತು ಮಾಡಬಾರದು. ಮಾಡಿದಲ್ಲಿ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಅವರು ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಕುರಿತು ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರ, ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವಂತಹ ಉಚಿತ ಆಪ್ತ ಸಮಾಲೋಚನೆ ಮತ್ತು ನಿಕೋಟಿನ್ ಗಮ್ಸ್ ನೀಡುವ ಬಗ್ಗೆ ಹಾಗೂ ನಗರ ಪ್ರದೇಶಗಳಲ್ಲಿ ಗರ್ಭಿಣಿ ಸ್ತ್ರೀಯರು ಧೂಮಪಾನವನ್ನು ಮಾಡುತ್ತಾರೆ. ಇದರಿಂದಾಗಿ ಮಹಿಳೆಯರಿಗೂ ಮತ್ತು ಮಗುವಿನ ಬೆಳವಣಿಗೆಗೆ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಸವಿವರವಾಗಿ ಮಾಹಿತಿ ನೀಡಿದರು.
ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಬಾಬುರೆಡ್ಡಿ ಮಾತನಾಡಿ, ಎಲ್ಲಾ ವ್ಯಾಪಾರಸ್ಥರು ಕೋಟ್ಪಾ-2003ರ ಕಾಯ್ದೆ ಪಾಲಿಸಬೇಕು ಮತ್ತು ಪರವಾನಗಿಯನ್ನು ಪಡೆದುಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ತಂಬಾಕು ಮಾರಾಟಗಾರರು, ಹೋಟೆಲ್ ಮಾಲೀಕರುಗಳು ಇದ್ದರು.