ಪ್ರಾಚ್ಯ ಅವಶೇಷಗಳ ಇತಿಹಾಸ ಹೇಳುವಂತೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೇ ಮಹೆಂಜೋದಾರೋ, ಹರಪ್ಪ, ಲೋಥಲ್ ಮತ್ತು ಇನ್ನಿತರ ಸಿಂಧೂ ಕಣಿವೆಯ ನಾಗರಿಕತೆಗಳು ಅತ್ಯಂತ ಆಧುನಿಕ ತಂತ್ರಜ್ಞಾನಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದರು ಎಂಬುದಕ್ಕೆ ನಮಗೆ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಸುಮಾರು 3000 ವರ್ಷಗಳ ಹಿಂದೆಯೇ ಅವರು ಬಳಸುತ್ತಿದ್ದ ವಸ್ತುಗಳನ್ನು ಕಾರ್ಬನ್ ಪರೀಕ್ಷೆಯ ಮೂಲಕ ಪತ್ತೆ ಹಚ್ಚಿರುವ ಪ್ರಾಚ್ಯಶಾಸ್ತ್ರಜ್ಞರು ಆ ಸಿಂಧೂ ನಾಗರಿಕತೆಯು ಅತ್ಯಂತ ಮುಂದುವರಿದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದ್ದರು ಎಂದು ದಾಖಲಿಸಿದ್ದಾರೆ.
ಉಳ್ಳವರು ತಮ್ಮ ಮನೆಗಳಲ್ಲಿ ಬಚ್ಚಲು ಕೋಣೆಗಳನ್ನು ಮತ್ತು ಶೌಚಾಲಯಗಳನ್ನು ಹೊಂದಿದ್ದು ಸಾಕಷ್ಟು ಮನೆಗಳಲ್ಲಿ ಒತ್ತು ಇಟ್ಟಿಗೆಯ ನಿರ್ಮಾಣದ ಪುಟ್ಟ ಕೋಣೆಗಳು ದೊರೆತಿವೆ ಮತ್ತು ಅವುಗಳಲ್ಲಿ ಬಳಸಿದ ನೀರು ಹೊರ ಹೋಗಲು ಗಾರೆಯಿಂದಲೇ ತಯಾರಿಸಿದ ಪೈಪಿನ ಮಾದರಿಗಳಿವೆ. ಮತ್ತೆ ಕೆಲವೆಡೆ ಶೌಚಾಲಯಗಳು ಇದ್ದು ಅವುಗಳ ತ್ಯಾಜ್ಯವೂ ಹೊರಹೋಗುವಂತೆ ಮುಖ್ಯ ಚರಂಡಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬುದು ಅವರ ತಾಂತ್ರಿಕ ಮುಂದುವರಿಕೆಯನ್ನು ಸೂಚಿಸುತ್ತದೆ.. ಇಂಗು ಗುಂಡಿಗಳು ಇರುವುದು ಕೂಡ ಪತ್ತೆಯಾಗಿದೆ.
ಒಳಚರಂಡಿ ವ್ಯವಸ್ಥೆಗಳನ್ನು ಕೂಡ ನಾವು ದೊಡ್ಡ ದೊಡ್ಡ ನಗರಗಳಲ್ಲಿ ಕಾಣಬಹುದು. ಈ ಒಳ ಚರಂಡಿಗಳ ಮೇಲೆ ಕೂಡ ದೊಡ್ಡ ದೊಡ್ಡ ಇಟ್ಟಿಗೆಯ ಮೇಲು ಹಾಸುಗಳನ್ನು ಮುಚ್ಚಿರುವುದು ಅವರ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ ಮತ್ತು ಈ ಒಳಚರಂಡಿಗಳನ್ನು ಕಟ್ಟಿಕೊಳ್ಳದಂತೆ ಪರೀಕ್ಷಿಸಲು ಮತ್ತು ನಿರ್ವಹಿಸಲು ಅಲ್ಲಲ್ಲಿ ಮನುಷ್ಯರು ತೂರಿ ಹೋಗುವಂತಹ ಮ್ಯಾನ್ ಹೋಲ್ ಗಳನ್ನು ನಿರ್ಮಿಸಿರುವುದು ಅವರ ಜಾಣ್ಮೆಯನ್ನು ತೋರುತ್ತದೆ. ಆ ಕಾಲ ಘಟ್ಟದ ಯಾವುದೇ ನಾಗರಿಕತೆಗಳಲ್ಲೂ ಕಾಣದ ಅತ್ಯುತ್ತಮ ಮಾದರಿಯ ಬಚ್ಚಲು, ಶೌಚಾಲಯಗಳು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ನಾವು ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಕಾಣುತ್ತೇವೆ.
ಒಳಚರಂಡಿ ವ್ಯವಸ್ಥೆಗೆ ಅನುಕೂಲವಾಗುವಂತಹ ಮತ್ತು ಸರಿಯಾದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಉತ್ತರ ದಕ್ಷಿಣ/ ಪೂರ್ವ ಪಶ್ಚಿಮ ದಿಕ್ಕುಗಳಲ್ಲಿ ಮನೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿರುವುದು ಅವರ ವಾಸ್ತು ಮತ್ತು ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸಾರ್ವಜನಿಕ ಸ್ನಾನ ಗೃಹಗಳ ಅವಶೇಷಗಳು ಕೂಡ ಮೊಹೆಂಜೋದಾರೋದಲ್ಲಿ ದೊರೆತಿದ್ದು ಅವು ಕೂಡ ಮೊತ್ತ ಮೊದಲು ಸಾರ್ವಜನಿಕರ ಬಳಕೆಗಾಗಿಯೇ ನಿರ್ಮಿಸಲ್ಪಟ್ಟ ಸ್ನಾನದ ಕೊಳಗಳಾಗಿವೆ ಎಂಬುದನ್ನು ಅವುಗಳ ವಿನ್ಯಾಸದಿಂದ ಗುರುತಿಸಬಹುದು. ಆಧುನಿಕವಾಗಿ ನೀರನ್ನು ಒಳಗೆ ಹರಿಸುವ ಮತ್ತು ಹೊರಗೆ ಚೆಲ್ಲುವ ತಂತ್ರಜ್ಞಾನಗಳನ್ನು ಅಲ್ಲಿ ಅಳವಡಿಸಲಾಗಿದೆ.
ನೀರನ್ನು ಹಿಡಿಯಲಾರದಂತಹ ಗಟ್ಟಿಯಾದ ಸುಟ್ಟ ಇಟ್ಟಿಗೆಗಳನ್ನು ತಯಾರಿಸಿ ಶೌಚಾಲಯಗಳಿಗೆ ಮತ್ತು ಸ್ನಾನ ಗೃಹಗಳಿಗೆ ಬಳಸಲಾಗಿದ್ದು ನೀರನ್ನು ಹೀರದಂತೆ ಜಿಪ್ಸಮ್ ಮತ್ತು ಬಿಟುಮಿನ್ ಗಳನ್ನು ಅವುಗಳ ಮೇಲೆ ಲೇಪನವಾಗಿ ಬಳಸಿದ್ಲು ಕಂಡು ಬರುತ್ತದೆ.
ನೆಲದ ಮೇಲೆ ಕುಳಿತುಕೊಳ್ಳುವಂತಹವಲ್ಲದೆ ಇಂದಿನ ಆಧುನಿಕ ಕಮೋಡ್ಗಳ ಮಾದರಿಯ ಶೌಚಾಲಯಗಳನ್ನು ಕೂಡ ಅವರು ಹೊಂದಿದ್ದು ಅವುಗಳಿಗೆ ಮೇಲಿನಿಂದ ನೀರು ಸುರಿದು ಸ್ವಚ್ಛಗೊಳಿಸುವ ವ್ಯವಸ್ಥೆಯನ್ನು ಅವರು ಹೊಂದಿದ್ದರು. ಹೀಗೆ ಮೇಲಿನಿಂದ ನೀರು ಸುರಿಯುವ ಮತ್ತು ಮನುಷ್ಯರು ಖುದ್ದಾಗಿ ನೀರಿನ ದೊಡ್ಡ ದೊಡ್ಡ ಹೂಜಿಗಳಿಂದ ನೀರನ್ನು ಸುರಿಯುವ ಮಾದರಿಯ ಶೌಚಾಲಯಗಳು ಮುಂದೆ ರೋಮನ್ ನಾಗರಿಕತೆಯ ಮತ್ತು ಇಂದಿನ ಆಧುನಿಕ ಶೌಚಾಲಯಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಸಿಂಧೂ ಕಣಿವೆಯ ನಾಗರಿಕತೆಗಳು ಉಳಿದೆಲ್ಲ ನಾಗರಿಕತೆಗಳಿಗಿಂತಲೂ ತಂತ್ರಜ್ಞಾನ ಮತ್ತು ಕೌಶಲಗಳಲ್ಲಿ ಮುಂದುವರೆದ ಜನಾಂಗವಾಗಿದ್ದು ಅದರಲ್ಲೂ ವಿಶೇಷವಾಗಿ ಶೌಚಾಲಯಗಳು, ತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಯ ನಿರ್ಮಾಣದಲ್ಲಿ ಅವರ ಪರಿಣತಿಯನ್ನು ಕಾಣಬಹುದಾಗಿದೆ. ಪ್ರಸ್ತುತ ಲಂಡನ್ ನ ಮ್ಯೂಸಿಯಂನಲ್ಲಿ ಇರುವ ವಿಕ್ಟೋರಿಯನ್ ಶೌಚಾಲಯ ಮತ್ತು ತಂತ್ರಜ್ಞಾನಗಳ ಪಳೆಯುಳಿಕೆಗಳು ಈ ಹಿಂದೆ ಲೋಥಲ್ ನಲ್ಲಿ ಬಳಸಿದ ಮಾದರಿಗಳಾಗಿವೆ ಆಧುನಿಕ ನಗರವಾದ ಧೊಲೆರ- ಸರ್ ಎಂಬ ನಗರವು ಅಂದಿನ ಲೋಥಲ್ ನಗರದ ಸ್ಥಳದಲ್ಲಿ ನಿರ್ಮಾಣವಾಗಿದೆ.
ನೋಡಿದಿರಾ ಸ್ನೇಹಿತರೆ, ನಮ್ಮ ಭವ್ಯ ಭಾರತ ದೇಶದ ಸನಾತನ ಸಂಪ್ರದಾಯವು ನೂತನವೂ ಆಗಿದ್ದು ನಮ್ಮ ಹಿರಿಯರು ಬಹುತೇಕ ಎಲ್ಲಾ ವಿಷಯಗಳಲ್ಲಿಯೂ ತಮ್ಮ ಅದ್ಭುತ ಪ್ರತಿಭೆಯನ್ನು ಮೆರೆದಿದ್ದಾರೆ.
ನಮ್ಮ ದೇಹದಲ್ಲಿ ಇರುವ ವಾತ ಪಿತ್ತ ಕಫ ದೋಷಗಳು ನಮ್ಮ ದೇಹದ ಪ್ರಕೃತಿಯನ್ನು ನಿರ್ಧರಿಸುತ್ತವೆ. ಋತುಗಳಿಗನುಸಾರವಾಗಿ ಆಹಾರ ದಿನಚರಿಗಳನ್ನು ಕಾಯ್ದುಕೊಂಡು ಹೋಗಬೇಕು ಎಂಬುದನ್ನು ಅರಿತಿದ್ದ ಅವರು ಆಯುರ್ವೇದದ ಗಿಡಮೂಲಿಕೆಗಳ ಅಪಾರ ಜ್ಞಾನವನ್ನು ಹೊಂದಿದ್ದರು. ಸಂಸ್ಕೃತ ಶ್ಲೋಕಗಳಲ್ಲಿ ನಮ್ಮ ಸನಾತನ ಸಂಪ್ರದಾಯದ ವಿಧಿ ವಿಧಾನಗಳನ್ನು ತಿಳುವಳಿಕೆಗಳನ್ನು ನಮಗೆ ತುಂಬಿಕೊಟ್ಟವರು ಅವರು. ಸಾಂಪ್ರದಾಯಿಕ ವಿಚಾರಗಳ ಜೊತೆ ಜೊತೆಗೆ ಆಧುನಿಕತೆಗಳನ್ನು ಮೇಳವಿಸಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈಜ್ಞಾನಿಕ ಆರ್ಥಿಕ ಸಾಂಸ್ಕೃತಿಕ ಧಾರ್ಮಿಕ ಪ್ರಗತಿಯ ಜೊತೆ ಜೊತೆಗೆ ಆಧುನಿಕ ವಿಚಾರಧಾರೆಗಳನ್ನು ತಮ್ಮದಾಗಿಸಿಕೊಂಡು ವಿಶ್ವ ಕುಟುಂಬಗಳಾಗಿದ್ದರು. ಹತ್ತು ಹಲವಾರು ಜಾತಿ ಮತ ಪಂಥಗಳನ್ನು ಹೊಂದಿದ್ದರೂ ಕೂಡ ಅವೆಲ್ಲವನ್ನು ಮೀರಿದ ಮಾನವೀಯ ನೆಲೆಗಟ್ಟು ಅವರದಾಗಿತ್ತು.
ಅಂದು ಅವರು ಹಾಕಿಕೊಟ್ಟ ಭದ್ರಬುನಾದಿಯ ಮೇಲೆ ಇಂದು ನೆಲೆ ನಿಂತಿರುವ ಭವ್ಯ ಭಾರತ ದೇಶವು ಸರ್ವಧರ್ಮ ಸಮಾನತೆಯ, ಎಲ್ಲಕ್ಕಿಂತಲೂ ಮುಂಚೆ ಭಾರತ ಭೂಮಿಯು ಸರ್ವ ಸಭ್ಯತೆಗಳನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ.
ಆಗಾಗ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಗಳು ಗಲಭೆಗಳು
ಉಂಟಾದರೂ ಕೂಡ ಅವು ನಮ್ಮ ದೇಶದ ಆತ್ಮವನ್ನು ದುರ್ಬಲಗೊಳಿಸುವಲ್ಲಿ ವಿಫಲವಾಗಿವೆ. ಧರ್ಮದ ಮೂಲಕ ನಮ್ಮನ್ನು ವಿಭಾಗಿಸಲು ನೋಡುವ ಜನರಿಗೆ ನಮ್ಮ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಏಕತೆಯ ಮೂಲಕ ಚಾಟಿ ಏಟಿನಂತಹ ಉತ್ತರವನ್ನು ನಮ್ಮ ದೇಶದ ಜನತೆ ವಿದೇಶಿ ನುಸುಳುಕೋರರಿಗೆ, ದಂಡಯಾತ್ರೆಯ ಮೂಲಕ ಭಾರತವನ್ನು ಗೆದ್ದು ಬಿಡುವೆ ಎಂದು ಬಂದ ಜಗತ್ತಿನ ಹತ್ತು ಹಲವು ಸಾಮ್ರಾಜ್ಯಗಳಿಗೆ ಆಯಾ ಸಮಯದಲ್ಲಿ ತೋರಿಸಿಕೊಟ್ಟಿದ್ದಾರೆ.
ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಮಾತಿನಂತೆ ನಮ್ಮ ಪ್ರಾಚೀನ ಸಭ್ಯತೆಗಳನ್ನು ಹಳೆಯವೆಂದು, ಪ್ರಾಚೀನ ಜನರನ್ನು ಹಳಬರೆಂದು ಅಗೌರವಿಸುವುದು ಬೇಡ…. ಏನಂತೀರಾ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್