ವೈದ್ಯರ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ

Vijayanagara Vani
ವೈದ್ಯರ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ

ವೈದ್ಯರ ಪ್ರತಿಭಟನೆ: ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಹೇಯ ಕೃತ್ಯದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸರ್ಕಾರಿ ಆಸ್ಪತ್ರೆ ಮತ್ತು IMA ,PHANA ಅಡಿ ಬರೋ ಖಾಸಗಿ ಆಸ್ಪತ್ರೆಗಳು 24 ಗಂಟೆ ಕಾಲ OPD ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿವೆ. ಇದರಿಂದ ಇಂದು ಭಾರಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ-ಕೊಲೆ ಘಟನೆಯನ್ನು ವಿರೋಧಿಸಿ ಜೈಪುರದ ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದಲ್ಲಿ ಮಾನವ ಸರಪಳಿ ನಿರ್ಮಿಸಿ ವೈದ್ಯರು ಮೌನ ಪ್ರತಿಭಟನೆ ನಡೆಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ ಪ್ರತಿಭಟನೆ ನಡೆಸಿದೆ. ನಗರದ ಮೆಗ್ಗಾನ್ ಆಸ್ಪತ್ರೆ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ನಡೆಸಿ ನಗರದ ಗೋಪಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆ ವೇಳೆ ವೈದ್ಯಕೀಯ ವಿದ್ಯಾರ್ಥಿನಿ ಅಸ್ವಸ್ಥ

ಧಾರವಾಡದಲ್ಲಿ ಮಹಾಗಣಪತಿ ಆಯುರ್ವೇದಿಕ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಪ್ರತಿಭಟನೆ ವೇಳೆ ವೈದ್ಯಕೀಯ ವಿದ್ಯಾರ್ಥಿನಿ ಅಸ್ವಸ್ಥಗೊಂಡರು. ಈ ವೇಳೆ ಸಹಪಾಠಿಗಳು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಮುಗಿಬಿದ್ದ ರೋಗಿಗಳು

ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದೆ. ಇದ್ರಿಂದ ರೋಗಿಗಳು ಒಪಿಡಿ ಬದಲು ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಮುಗಿಬಿದ್ದಿದ್ದು ರೋಗಿಗಳನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.

·  ಕೋಲಾರದಲ್ಲಿ ಸರ್ಕಾರಿ, ಖಾಸಗಿ ವೈದ್ಯರ ಪ್ರತಿಭಟನೆ

ಕೋಲಾರದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಲಾರ ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದೆ. ಪಶ್ಚಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿಯನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿದೆ. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಸರ್ಕಾರ ತಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನಾ ರ್ಯಾಲಿಯಲ್ಲಿ‌ ನೂರಾರು ಸಂಖ್ಯೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗಿಯಾಗಿದ್ದಾರೆ.

·  ಹಾಸನ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ

ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಸೇವೆ ಸ್ಥಗಿತವಾಗಿರಲಿದೆ. ಸದ್ಯ ಹಾಸನದ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೇ ಗರ್ಭಿಣಿ ಪರದಾಟ

ರಾಜ್ಯಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತ. ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೇ ಗರ್ಭಿಣಿ ಪರದಾಡಿದಂತಹ ಘಟನೆ ನಡೆದಿದೆ

ವಿಜಯಪುರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯ

ಐಎಂಎ ಅಧ್ಯಕ್ಷ ಡಾ. ರವಿ ಬಿರಾದಾರ್ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ‌ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲೆಯ 734 ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಆಗಿದೆ.

 ಇಂದು ಸರ್ಕಾರಿ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಆದೇಶ

ಇಂದು ವೈದ್ಯರ ಪ್ರತಿಭಟನೆ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಕರ್ನಾಟಕ ಸರ್ಕಾರಿ ವೈದ್ಯರಿಗೆ ಇಂದಿನ ರಜೆ ಮಂಜೂರು ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ

ಬಾಗಲಕೋಟೆಯಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯ

ಬಾಗಲಕೋಟೆಯಲ್ಲಿ ಜಿಲ್ಲಾಸ್ಪತ್ರೆ ಒಪಿಡಿ ಸೇರಿದಂತೆ ಜಿಲ್ಲಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಆಗಿವೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಇಂಡಿಯ‌ನ್ ಡೆಂಟಲ್ ಅಸೋಸಿಯೇಶನ್, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ವತಿಯಿಂದ ಒಪಿಡಿ ಬಂದ್ ಮಾಡಲಾಗಿದೆ. ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ತುರ್ತು ಚಿಕಿತ್ಸೆ ಸಂಬಂಧಿಸಿದಂತೆ ಆದ್ಯತೆ ಮೇರೆಗೆ ಚಿಕಿತ್ಸೆಗೆ ನಿರ್ಧಾರ ಮಾಡಲಾಗಿದೆ.

ಬೆಂಗಳೂರಿನಲ್ಲಿ ರೋಗಿಗಳಿಗೆ ತಟ್ಟಿದ ವೈದ್ಯರ ಪ್ರತಿಭಟನೆ ಬಿಸಿ

ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಡಯಾಲಿಸಿಸ್​ಗಾಗಿ ಬಂದಿದ್ದ ಹಲವು ರೋಗಿಗಳು ವಾಪಸ್​ ಆಗುತ್ತಿದ್ದಾರೆ. ಗೊರವನಹಳ್ಳಿ, ಹನುಮಂತನಗರದಿಂದ ಬಂದಿದ್ದ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಸಿಗದೆ ವಾಪಸ್​ ತೆರಳ್ತಿದ್ದಾರೆ. ಚಿಕಿತ್ಸೆ ಸಿಗದ ಹಿನ್ನೆಲೆ ಬೇಸರ ಹೊರಹಾಕಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!