ಧಾರವಾಡ ಡಿಸೆಂಬರ.24: ವಿವಿಧ ಮಾಧ್ಯಮಗಳಲ್ಲಿ ದಿನನಿತ್ಯ ಬಿತ್ತರವಾಗುವ ಬಣ್ಣದ ಮಾತಿನ, ಚಂದದ ಜಾಹಿರಾತುಗಳಿಗೆ ಮಾರು ಹೋಗಿ ; ಹಣ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳಬೇಡಿ. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು, ಜಾಗೃತಿ ವಹಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಕೆಪಿಇಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕೆಪಿಇ ಸೊಸೈಟಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಇಂದು ಉತ್ಪಾದನಾ ಕ್ಷೇತ್ರದಲ್ಲಿ ಅನಪೇಕ್ಷಿತ ಸ್ಪರ್ಧೆ ಬೆಳೆಯುತ್ತಿದೆ. ತಮ್ಮ ಉತ್ಪನ್ನಗಳ ಖರೀದಿಗಾಗಿ ಗ್ರಾಹಕರನ್ನು ಮೋಸ ಮಾಡವಲ್ಲಿಯೂ ಕಂಪನಿಗಳ ಮಧ್ಯ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಮೆಚ್ಚಿಸಿ, ಅವರನ್ನು ಸೆಳೆಯಲು ಚಂದದ ಭಾμÉ, ಆಕರ್ಷಕ ದೃಶ್ಯ ಬಳಸಿ ಜಾಹಿರಾತು ರೂಪಿಸುವ ಉತ್ಪಾದಕ ಕಂಪನಿಗಳು, ಅದಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಸಣ್ಣ ಅಕ್ಷರಗಳಲ್ಲಿ ನಮೂದಿಸಿರುತ್ತವೆ. ಇದನ್ನು ಗಮನಿಸಬೇಕು ಎಂದು ಅವರು ಹೇಳಿದರು.
ಉತ್ಪನ್ನಗಳ ರುಚಿ ಹೆಚ್ವಿಸಲು ಮತ್ತು ಆಕರ್ಷಕವಾಗಿ ಕಾಣಲು ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಳಸುತ್ತಾರೆ. ಇದಕ್ಕೆ ಮಕ್ಕಳು, ಯುವಕ, ಯುವತಿಯರು ಹೆಚ್ಚು ಆಕರ್ಷಿತರಾಗಿ ಖರೀದಿಸಿ, ತಿನ್ನುತ್ತಾರೆ. ಮುಂದೆ ಅನೇಕ ರೋಗಗಳಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದಷ್ಟು ನೈಸರ್ಗಿವಾಗಿ ಬೆಳೆಯುವ, ಸಿಗುವ ಆಹಾರ ಮತ್ತು ಇತರ ಉತ್ಪನ್ನಗಳನ್ನು ಖರೀದಿಸುವಲ್ಲಿ ನಾವು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಪ್ಲಾಸ್ಟಿಕ್ ಹಾಗೂ ಪರಿಸರ ಹಾನಿಕರವಾದ ಇತರ ಉತ್ಪನ್ನಗಳ ಬಳಕೆಯನ್ನು ತ್ಯಜಿಸಿ, ಪರಿಸರಸ್ನೆಹಿ ವಸ್ತುಗಳ ಖರೀದಿಗೆ ಮಹತ್ವ ನೀಡಬೇಕು. ಪ್ರತಿಯೊಬ್ಬರಿಗೆ ಗ್ರಾಹಕ ಕಾಯ್ದೆಯ ಬಗ್ಗೆ ತಿಳುವಳಿಕೆ ಮೂಡಿಸಲು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ವಿಶಾಲಾಕ್ಷಿ ಎ.ಬೊಳಶೆಟ್ಟಿ ಅವರು ಮಾತನಾಡಿ, ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅತೀ ಹೆಚ್ಚು ಗ್ರಾಹಕ ದೂರುಗಳನ್ನು ವಿಚಾರಣೆ ಮಾಡಿ, ವಿಲೇವಾರಿ ಮಾಡಿದೆ. ಮತ್ತು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಗಮನ ಸೆಳೆದಿದೆ. ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪುಗಳಿಂದ ಸಮಾಜದಲ್ಲಿ ಜಾಗೃತಿ ಉಂಟಾಗಿದ್ದು, ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹುಬ್ಬಳ್ಳಿ ತಾಲೂಕಿನ ಸಹಾಯಕ ನಿರ್ದೇಶಕಿ ವಸುಂಧರ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಪ್ರಭು ಸಿ.ಹಿರೇಮಠ, ಕೆ.ಪಿ.ಇ ಸೋಸೈಟಿ ಕಾರ್ಯದರ್ಶಿ ಬಿ.ವಿ.ಸೋಮಾಪುರ, ಎಚ್.ಪಿ.ಸಿ ಕಂಪನಿಯ ಅಧಿಕಾರಿ ಸರೋಜಕುಮಾರ ಬೆಹೆರಾ, ಬಿಪಿಸಿ ಕಂಪನಿ ಅಧಿಕಾರಿ ಶಿವಕುಮಾರ, ಐಒಸಿ ಕಂಪನಿ ಅಧಿಕಾರಿ ಸಂಜೀವಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕ ಶಿವಶಂಕರ ಹಿರೇಮಠ, ತಹಶಿಲ್ದಾರ ಕಚೇರಿ ಶಿರಸ್ತೆದಾರ ರಮೇಶ ಬಂಡಿ, ಆಹಾರ ನಿರೀಕ್ಷಕರಾದ ಕೆ.ಎಂ.ಜೋಶಿ, ವಿನಾಯಕ ದೀಕ್ಷಿತ, ಜಯದೇವ ವಂಟಮೂರಿಮಠ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜನಾದೇಶ ಸಂಘಟನೆಯ ಕಾರ್ಯದರ್ಶಿ ಮಾಧುರಿ ಕುಲಕರ್ಣಿ ಗ್ರಾಹಕರ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಹಾರ ಅಪವ್ಯಯ ಕುರಿತು ಜಾಗೃತಿಗಾಗಿ ಆಹಾರ ತಜ್ಞ ಬಸವರಾಜ ಬಿಳಿಅಂಗಡಿ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ವೀಣಾ ಎಲ್. ಕಡ್ಲಿಗುಂದಿ ಸ್ವಾಗತಿಸಿದರು. ಗಂಗಾ ಕರಡಿಗುದ್ದಿ ಕಾರ್ಯಕ್ರಮ ನಿರೂಪಿಸಿ, ನಾರಾಯಣ ಇಳಿಗೇರ ವಂದಿಸಿದರು.ಕಾರ್ಯಕ್ರಮದಲ್ಲಿ ಕೆಪಿಇಎಸ್ ಡಾ.ಜಿ.ಎಂ.ಪಾಟೀಲ ಕಾನೂನು ಕಾಲೇಜ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.