ಬಳ್ಳಾರಿ,ಡಿ.14
ಹೆಣ್ಣುಮಕ್ಕಳು ತಮ್ಮ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು. ಸಾಧನೆಯ ಗುರಿ ತಲುಪುವ ತನಕ ಛಲವನ್ನು ಬಿಡಬಾರದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ರೇಡಿಯೋ ಪಾರ್ಕ್ ಹತ್ತಿರದ (ಡಯಟ್) ಮಹಿಳಾ ಪ್ರಥಮ ದರ್ಜೆ ಕಾಲೇಜಿಗನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್ ಯೂತ್ ರೆಡ್ ಕ್ರಾಸ್ ಮತ್ತು ವಿವಿಧ ಸಮಿತಿಗಳ ಉದ್ಘಾಟನೆ ಸಮಾರಂಭ ಹಾಗೂ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿಯರು ಸಮಾಜದಲ್ಲಿ ಗುರುತಿಸಿಕೊಳ್ಳಲು ಗುಣಮಟ್ಟ ಶಿಕ್ಷಣ ಪಡೆದುಕೊಂಡು ವಿವಿಧ ವಿಷಯಗಳ ಅರಿವು ಹೊಂದಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಯಶಸ್ಸು ಕಾಣಬೇಕು ಎಂದರು. ತಂದೆ-ತಾಯಂದಿರು ಮಕ್ಕಳ ಉಜ್ವಲ ಭವಿಷ್ಯ ಕಾಣಲು ಕಾತುರದಿಂದ ಕಾಯುತ್ತಿರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಅವರ ಕನುಸುಗಳನ್ನು ನನಸು ಮಾಡುವ ಆಶಾಭಾವನೆ ಹೊಂದಬೇಕು. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು ಎಂದರು.
ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರು ಸಾಗಿ ಬಂದ ಹಾದಿಯ ಕುರಿತು ವಿವರಿಸಿ, ವಿದ್ಯಾರ್ಥಿಗಳಿಗೆ ಹುರಿದಂಬಿಸಿದರು. ವಿದ್ಯಾರ್ಥಿನಿಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾಲೇಜಿನ ಆವರಣದಲ್ಲಿ ಭೇಟಿ ನೀಡಿ ಪರಿಶೀಲಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು, ಕಾಲೇಜಿನಲ್ಲಿ 349 ವಿದ್ಯಾರ್ಥಿನಿಯರಿಗೆ ಕೇವಲ ಎರಡೇ ಶೌಚಾಲಯ ಸಾಕಾಗುವುದಿಲ್ಲ. ವಿದ್ಯಾರ್ಥಿನಿಯರ ಸಂಖ್ಯಾನುಗುಣವಾಗಿ ಇನ್ನೂ ಕೆಲವು ಶೌಚಾಲಯಗಳ ಅವಶ್ಯಕತೆ ಇದ್ದು, ಮುಂಬರುವ ದಿನಗಳಲ್ಲಿ ಶೌಚಾಲಯ ನಿರ್ಮಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಇದಕ್ಕೂ ಮುನ್ನ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಬಾಣಂತಿಯರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎಂ.ವೀರ ರಾಘವಲು, ಪ್ರಾಂಶುಪಾಲರಾದ ಡಾ.ಪ್ರಜ್ಞಾ ಕೆ.ವಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.