ಬಳ್ಳಾರಿ,ಡಿ.13
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳಲ್ಲಿ ‘ಆಂತರಿಕ ದೂರು ಸಮಿತಿ’ ರಚಿಸಿ, ಇದರ ಕುರಿತು ವಿವಿಧೆಡೆ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅರಿವು ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ, 2013ನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದು, ಈ ಅಧಿನಿಯಮದನ್ವಯ ಎಲ್ಲಾ ಖಾಸಗಿ, ಸರ್ಕಾರಿ, ನಿಗಮ, ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಇದರಿಂದ ಮಹಿಳಾ ಅಧಿಕಾರಿ, ಸಿಬ್ಬಂದಿಗಳಿಗೆ ಹಲವಾರು ಸಂದರ್ಭದಲ್ಲಿ ವಿನಾಕಾರಣ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಅವರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳಿಗೆ ಸಂಬAಧಪಟ್ಟ ದೂರುಗಳನ್ನು ಪರಿಣಾಮಕಾರಿ ಮತ್ತು ತ್ವರಿತವಾಗಿ ಪರಿಹರಿಸಲು ಆಂತರಿಕ ದೂರು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರು ಮಾತನಾಡಿ, ಬಳ್ಳಾರಿ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ‘ನವದುರ್ಗಿ ಟೀಮ್’ ಆರಂಭಿಸಲಾಗಿದೆ. ಈ ತಂಡವು ಸಂಜೆ ವೇಳೆ ಶಾಲಾ-ಕಾಲೇಜು ಆವರಣ, ಉದ್ಯಾನವನ ಮತ್ತು ಬಸ್ ಸ್ಟ್ಯಾಂಡ್ ಗಳಲ್ಲಿ ಗಸ್ತು ನಡೆಸುವರು ಎಂದು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಯಾವ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಎಸ್ಪಿಯವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ಕುರಿತಾಗಿ ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎಸ್‌ಜೆಪಿಯು ಘಟಕವು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸಹಾಯವಾಣಿ ಸಂಖ್ಯೆ 112, 1098 ಕುರಿತಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಬಳಿಕ ಅಧ್ಯಕ್ಷರು ಮಾತನಾಡಿ, ಪೊಲೀಸರು ಸಮಾಜದಲ್ಲಿ ಜನಸ್ನೇಹಿಯಾಗಿರಬೇಕು. ಪೊಲೀಸ್ ಠಾಣೆಗಳು ಮಹಿಳಾಸ್ನೇಹಿಯಾಗಿಯೂ ಕಾರ್ಯನಿರ್ವಹಿಸಬೇಕು. ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಅತ್ಮವಿಶ್ವಾಸ ತುಂಬಬೇಕು. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಐ.ಸಿ.ಸಿ (ಇಂಟಗ್ನಲ್ ಕಂಪ್ರೈಟ್ ಕಮಿಟಿ) ಇರಬೇಕು. ಹೆಣ್ಣುಮಕ್ಕಳು ದೌರ್ಜನ್ಯ, ಹಿಂಸೆಗೊಳಗಾದಾಗ ಐ.ಸಿ.ಸಿ ಸಮಿತಿಯಲ್ಲಿ ದೂರು ದಾಖಲಿಸಬೇಕು ಎಂದರು.
ಜಿಲ್ಲೆಯಲ್ಲಿ 2017-3 ಪ್ರಕರಣ, 2018-3 ಪ್ರಕರಣ, 2019-1, 2020-1, 2021-2 ಪ್ರಕರಣಗಳು ಆಂತರಿಕ ದೂರು ನಿರ್ವಹಣಾ ಸಮಿತಿಗೆ ದೂರು ಸಲ್ಲಿಕೆಯಾಗಿದ್ದು, ಈಗಾಗಲೇ ಅವುಗಳನ್ನು ಪರಿಹರಿಸಲಾಗಿದೆ. 2022, 2023, 2024 ರಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸರ್ಕಾರವು ಮಕ್ಕಳ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದೆ. ಹಾಗಾಗಿ ಅಧಿಕಾರಿಗಳು ಜವಾಬ್ದಾರಿ ಹೊಂದಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಶಸ್ತçಚಿಕಿತ್ಸಾ ಕೊಠಡಿ, ಲ್ಯಾಬ್‌ಗಳು, ಕುಡಿಯುವ ನೀರು, ಓವರ್ ಹೆಡ್ ಟ್ಯಾಂಕ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿ, ಪರೀಕ್ಷಿಸಿದ ವರದಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಆಯೋಗದ ಅಧ್ಯಕ್ಷರು ಮಾತನಾಡಿ, ಜಿಲ್ಲೆಯ ಎಲ್ಲಾ ಬಾಲಕಿಯರ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಆರೋಗ್ಯದ ಕಾಳಜಿ, ವಸತಿ ನಿಲಯಗಳ ಶುಚಿತ್ವ ಕಾಪಾಡಿಕೊಳ್ಳುವಂತೆ ಸಂಬoಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಗನಕಲ್ಲು ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಮಹಿಳೆಯರು ಮದ್ಯದ ಅಂಗಡಿಗಳಿAದ ಕುಟುಂಬಗಳು ಕಷ್ಟಕೀಡಾಗುತ್ತಿವೆ ಎಂದು ಪ್ರಸ್ತಾಪಿಸಿದರು. ಈ ಕುರಿತು ಕ್ರಮ ಕೈಗೊಳ್ಳಬೇಕು. ಅನಿರೀಕ್ಷಿತ ಭೇಟಿ ನಡೆಸಬೇಕು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ.ವಿ.ಜೆ., ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಲಾಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲ್ಲೂಕು ತಹಶೀಲ್ದಾರರು, ತಾಪಂ ಇಓ ಗಳು ಉಪಸ್ಥಿತರಿದ್ದರು.