Ad image

ಮೆದುಳು ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು : ಡಾ.ತಿಮ್ಮಪ್ಪ*

Vijayanagara Vani
ಮೆದುಳು ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು : ಡಾ.ತಿಮ್ಮಪ್ಪ*
ಶಿವಮೊಗ್ಗ, 
ಪ್ರಸ್ತುತ ಮಾನಸಿಕ ಮತ್ತು ಮೆದುಳು ಆರೋಗ್ಯದ ಕುರಿತು ಹೆಚ್ಚಿನ ಅರಿವು ಮತ್ತು ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಜರು ಇದರ ಸದ್ಬಳಕೆ ಮಾಡಿಕೊಂಡು ಮಾನಸಿಕ ಆರೋಗ್ಯ ಸುಧಾರಣೆ ಕಡೆ ಗಮನ ಹರಿಸಬೇಕು ಎಂದು ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ತಿಮ್ಮಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮೆಗ್ಗಾನ್ ಬೋಧನ ಆಸ್ಪತ್ರೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಸಿಮ್ಸ್ ಸೂಪರ್ ಸ್ಲೆಲಿಟಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಮೆದುಳು ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಮಾನಸಿಕ ಆರೋಗ್ಯದಲ್ಲಿ ಏರುಪೇರಾದರೆ ಹುಚ್ಚು ಹಿಡಿದಿದೆ ಎನ್ನುತ್ತಿದ್ದರು. ಪ್ರಸ್ತುತದಲ್ಲಿ ಮಾನಸಿಕ ಆರೋಗ್ಯ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಆಗಿರುವುದು ಒಂದು ಉತ್ತಮ ಸಾಧನೆ.
ಉತ್ತಮ ಮಾನಸಿಕ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗಬಾರದು. ಒತ್ತಡ ನಿರ್ವಹಣೆ ಮಾಡುವುದನ್ನು ಕಲಿಯಬೇಕು. ಅತಿ ಸಾಮಾಜಿಕ ಮಾಧ್ಯಮ ಬಳಕೆ ನಿಲ್ಲಿಸಬೇಕು. ಸರಳ ವ್ಯಾಯಾಮ, ಯೋಗಾಭ್ಯಾಸದೊಂದಿಗೆ ಉತ್ತಮ ಆಹಾರ ಸೇವನೆ ಮಾಡಬೇಕು. ಯುವಜನತೆ ಕೌಶಲ್ಯಾಭಿವೃದ್ದಿ ಕಡೆ ಗಮನ ಹರಿಸಿ, ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ಕುಮಾರ್ ಮಾತನಾಡಿ, ದೇಹದ ಮೂಲ ಮೆದುಳು. ನಮ್ಮ ಇಡೀ ದೇಹವನ್ನು ನಿಯಂತ್ರಿಸುವುದು ಮೆದುಳು. ಇದು 1.5 ಕೆಜಿ ಇದ್ದು, ದೇಹದಿಂದ 20 % ರಕ್ತ ಹಾಗೂ ಸತತವಾಗಿ ಆಮ್ಲಜನಕ ಮತ್ತು ಗ್ಲುಕೋಸ್ನ್ನು ಪಡೆಯುತ್ತಿರುತ್ತದೆ. ಆದ್ದರಿಂದ ಮೆದುಳಿನ ಆರೋಗ್ಯ ಕಾಪಾಡುವುದು ಬಹು ಮುಖ್ಯ. ಹೊತ್ತಿಗೆ ಸರಿಯಾಗಿ ಸಮರ್ಪಕ ಆಹಾರ , ಸಾಕಷ್ಟು ನೀರು, 7 ರಿಂದ 8 ಗಂಟೆ ನಿದ್ರೆ ಮಾಡಬೇಕು. ಶೇ. 20 ಜನರಲ್ಲಿ ತಲೆನೋವಿನ ಖಾಯಿಲೆ ಇರುತ್ತದೆ. ಸಮಸ್ಯೆ ಹೆಚ್ಚಾದಲ್ಲಿ ಪಾಶ್ರ್ವವಾಯು ಕೂಡ ಆಗುತ್ತದೆ. ಗೋಲ್ಡನ್ ಅವಧಿಯಲ್ಲಿ ರೋಗಿಯನ್ನು ಕರೆತಂದರೆ ಉತ್ತಮ ಸುಧಾರಣೆ ಸಾಧ್ಯ.
ಖಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬಾರದಂತೆ ತಡೆಯುವುದು ಒಳ್ಳೆಯದು. 40 ವರ್ಷ ಆದ ಮೇಲೆ ನಿಯಮಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಚಟುವಟಿಕೆ, ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಗಂಭೀರ ಮೆದುಳಿನ ಖಾಯಿಲೆಗಳು ಕಂಡು ಬಂದಾಗ ಎಲ್ಲ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಹೋಗಬೇಕು. ಫಿಟ್ಸ್ ಖಾಯಿಲೆಯನ್ನು ನಿರ್ಲಕ್ಷ್ಯ ಮಾಡಬಾರದು. ಚಿಕಿತ್ಸೆ ನಿಯಮಿತವಾಗಿ ಪಡೆಯಬೇಕು. ಡಿಮೆನ್ಷಿಯಾ, ಪಾರ್ಕಿನ್ಸನ್ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದಲ್ಲಿ ಜೀವನ ಗುಣಮಟ್ಟ ಸುಧಾರಣೆ ಮಾಡಬಹುದು. ಮೆಡಿಕಲ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಈ ಕುರಿತು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ.ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನಶೈಲಿ ಬದಲಾವಣೆ, ಅತಿ ಉಪ್ಪು, ಕೊಬ್ಬು ತಿನ್ನುವುದು, ವ್ಯಾಯಾಮ ಮಾಡದಿರಿವುದರಿಂದ ಬಿಪಿ, ಸಕ್ಕರೆ ಖಾಯಿಲೆ ಹೆಚ್ಚುತ್ತಿದೆ. ಹಾಗೂ ವಯಸ್ಸಾದವರದಲ್ಲಿ ವಯೋಸಹಜ ಖಾಯಿಲೆಗಳಾದ ಮರೆಗುಳಿತನ, ಪಾರ್ಕಿನ್ಸನ್ ಇತರೆ ಖಾಯಿಲೆ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದು ವಾಹನ ಚಲಾವಣೆ ವೇಳೆ ಹೆಚ್ಚುತ್ತಿರುವ ಅಪಘಾತಗಳಲ್ಲಿ ಮೆದುಳಿಗೇ ಹೆಚ್ಚು ಪೆಟ್ಟಾಗುತ್ತಿರುವುದು ಕಂಡು ಬಂದಿದ್ದು, ಒಟ್ಟಾರೆ ಮೆದುಳಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ’ ಎಂಬ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಿದೆ.
ನಾವು ಹೃದಯ ಇತರೆ ಭಾಗಗಳ ಬಗ್ಗೆ ಗಮನ ಹರಿಸುತ್ತೇವೆ. ಬಹಳ ನಿಲ್ರ್ಷಕ್ಷ್ಯಕ್ಕೆ ಒಳಗಾದ ಅಂಗ ಮೆದುಳು. ಆದ್ದರಿಂದ ಮೆದುಳಿಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ಬೇಗ ಗುರುತಿಸಬೇಕು. ಗೋಲ್ಡನ್ ಅವಧಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತಂದಲ್ಲಿ ಗುಣಪಡಿಅಲು ಸಾಧ್ಯ. ಈ ಬಗ್ಗೆ ಅರಿವು ಹೆಚ್ಚಬೇಕು. ಮೆದುಳಿನ ಆರೋಗ್ಯ ಉಪಕ್ರಮದಡಿ, ವೈದ್ಯರು, ಆಡಿಯಾಲಜಿಸ್ಟ್, ಫಿಸಿಯೋ ಥೆರಪಿಸ್ಟ್, ಶುಶ್ರೂಷಕರು ಇರುತ್ತಾರೆ. ಹಾಗೂ ಜಿಲ್ಲಾ ಆಸ್ಪತ್ರೆ ಸಹಕಾರ ಇರುತ್ತದೆ. ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಟೆಲಿ ಮೆಡಿಸಿನ್, ಮೆಂಟರಿಂಗ್ ಮತ್ತು ರಿಹ್ಯಾಬಿಲಿಟೇಷನ್ ಸೌಲಭ್ಯ ಕೂಡ ಲಭ್ಯವಿದೆ. ಮಾನಸಿಕ ಸಮಸ್ಯೆ ಉಳ್ಳವರು ಉಚಿತವಾಗಿ 14416 ಗೆ ಕರೆ ಮಾಡಿ ‘ಟೆಲಿ ಮನಸ್’ ನ ಸೌಲಭ್ಯ ಪಡೆಯಬಹುದು ಎಂದರು.
ಮಾನಸಿಕ ಆರೋಗ್ಯ ತಜ್ಞರಾದ ಡಾ. ಪ್ರಮೋದ್ ಮಾತನಾಡಿ, ಮಾನಸಿಕ ಸಮಸ್ಯೆಗಳಾದ ಖಿನ್ನತೆ, ದುಶ್ಚಟ, ವ್ಯಸನ, ಒತ್ತಡ ಇತರೆ ಮಾನಸಿಕ ಸಮಸ್ಯೆಗಳನ್ನು ಪತ್ತೆ ಹಚ್ಚುವುದು, ಅದಕ್ಕೆ ಲಭ್ಯವಿರುವ ಚಿಕಿತ್ಸೆ, ನಿರ್ವಹಣೆ ಹಾಗೂ ಮೆದುಳಿನ ಮೇಲಿನ ಒತ್ತಡ ಮತ್ತು ಪೆಟ್ಟಿನಿಂದಾಗುವ ಖಾಯಿಲೆಗಳ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೆಗ್ಗಾನ್ ಆಸ್ಪತ್ರೆ ಮನೋವೈದ್ಯರಾದ ಡಾ.ಶ್ರೀಧರ್ ಸ್ವಾಗತಿಸಿದರು. ಶುಶ್ರೂಷಕಾಧೀಕ್ಷಕರಾದ ಅನ್ನಪೂರ್ಣ, ಇತರೆ ವೈದ್ಯರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು.
Share This Article
error: Content is protected !!
";