ಬಳ್ಳಾರಿ,ಜು.04
ಡೆಂಗ್ಯು ರೋಗದ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆ, ಡಯಾಗ್ನೋಸ್ಟೀಕ್ ಸೆಂಟರ್ ಮತ್ತು ಪ್ರಯೋಗಾಲಯಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಪರೀಕ್ಷೆ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ತಿಳಿಸಿದ್ದಾರೆ.
ಡೆಂಗ್ಯು ರೋಗದ ಪರೀಕ್ಷೆಯನ್ನು ಕೈಗೊಳ್ಳುವಾಗ ಯಾವುದೇ ಮಾನದಂಡವಿಲ್ಲದೆ ರೋಗಿಗಳಿಂದ ಹೆಚ್ಚು ಹಣ ಪಡೆಯುತ್ತಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಮತ್ತು ನಿಗದಿಪಡಿಸಿದ ದರದಂತೆ ರೋಗಿಗಳಿಂದ ಹಣ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದಿದ್ದಾರೆ.
*ದರ:*
ಡೆಂಗ್ಯು ಎಲಿಸಾ ಎನ್ಎಸ್1 ಟೆಸ್ಟ್ಗೆ ರೂ.300, ಡೆಂಗ್ಯು ಎಲಿಸಾ ಐಜಿಎಮ್ ಟೆಸ್ಟ್ಗೆ ರೂ.300, ಸ್ಕ್ರೀನಿಂಗ್ ಟೇಸ್ಟ್ನಲ್ಲಿ ರ್ಯಾಪಿಡ್ ಕಾರ್ಡ್ ಟೆಸ್ಟ್ (ಎನ್ಎಸ್1, ಐಜಿಎಮ್ ಹಾಗೂ ಐಜಿಜಿ) ಒಟ್ಟು ರೂ.250 ದರ ನಿಗದಿಪಡಿಸಲಾಗಿದೆ.
ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಜಿಲ್ಲೆಯ ಎಲ್ಲಾ ಐದು ತಾಲ್ಲೂಕುಗಳ ಖಾಸಗಿ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಸೆಂಟರ್, ಪ್ರಯೋಗಾಲಯಗಳಲ್ಲಿ ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಡೆಂಗ್ಯು ಪರೀಕ್ಷೆಯನ್ನು ಕೈಗೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.