ನವರಾತ್ರಿ ಹಬ್ಬದ ಎಂಟನೇ ದಿನವನ್ನು ದುರ್ಗಾದೇವಿಯ ಹೆಸರಿನಲ್ಲಿ ಆರಾಧಿಸುತ್ತಾರೆ. ಚಂಡ ಮುಂಡರನ್ನು ವಧಿಸಿದ ತಾಯಿ ಚಾಮುಂಡಿಯು ರಕ್ತ ಬೀಜಾಸುರನನ್ನು ಕೂಡ ಸಂಹರಿಸಿದಳು. ಪಾರ್ವತಿ ದೇವಿಯ ಎಂಟನೆಯ ಅವತಾರವೇ ದುರ್ಗಾದೇವಿ.
ದುರ್ಗಾದೇವಿಯು ಶಾಂತಿ ಮತ್ತು ಸಾಮರ್ಥ್ಯಗಳ ಅಧಿದೇವತೆಯಾಗಿದ್ದು ಆಕೆಯ ಸೌಂದರ್ಯ ತೊಳೆದ ಮುತ್ತಿನಂತಹ ಕಾಂತಿಯಿಂದ ಹೊಳೆಯುತ್ತದೆ.
ವೃಷಭವಾಹನಳಾಗಿರುವ ತಾಯಿ ದುರ್ಗಾದೇವಿಯು ಪ್ರಶಾಂತವಾದ ಮುಖ ಮುದ್ರೆಯನ್ನು ಹೊಂದಿದ್ದು
ನಾಲ್ಕು ಕೈಗಳನ್ನು ಹೊಂದಿದ್ದು ಎಡಗಡೆಯ ಮೇಲಿನ ಕೈಯಲ್ಲಿ ತ್ರಿಶೂಲವನ್ನು ಬಲಗಡೆಯ ಕೆಳಗಿನ ಕೈಯಲ್ಲಿ ಡಮರುವನ್ನು ಹಿಡಿದಿದ್ದು ಇನ್ನೆರಡು ಕೈಗಳು ಅಭಯಮುದ್ರೆಯನ್ನು ಹೊಂದಿದ್ದು ಭಕ್ತರಿಗೆ ಧೈರ್ಯವನ್ನು ಮತ್ತು ವರವನ್ನು ಕೊಡುವ ವರದಾಯಿನಿಯಾಗಿದ್ದಾಳೆ.
ತನ್ನ ಭಕ್ತರ ಮನದ ಕ್ಲೇಶವನ್ನು ಕಳೆಯುವ ಆಕೆ ಅತ್ಯಂತ ಸುಂದರವಾಗಿದ್ದು ಮಹಾ ಗೌರಿ ಎಂದು ಕರೆಯಲ್ಪಡುತ್ತಾಳೆ. ಶುದ್ಧತೆ,ಗೌರವರ್ಣ ಮತ್ತು ಅನುಗ್ರಹದ ಅಧಿದೇವತೆ ಗೌರಿ. ಹಾಲಿನಂತಹ ಗೌರವ ವರ್ಣವನ್ನು ಹೊಂದಿರುವ ಕಾರಣವೇ ಆಕೆಯನ್ನು ಮಹಾಗೌರಿ ಎಂದು ಕರೆಯುವುದು.
ಸ್ತ್ರೀತ್ವದ ಪಾರಮ್ಯವನ್ನು ತೋರುವ ಈ ದುರ್ಗಾಷ್ಟಮಿಯ ದಿನ ಕರುಣೆ ಶಾಂತಿ ಸಹಾನುಭೂತಿ ಮತ್ತು ತಾಯಿತನದ ಅನುಭೂತಿಗಳನ್ನು ಹೊಂದಿರುವ ಮಹಾಗೌರಿಯನ್ನು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗಬೇಕು. ಗುಲಾಬಿ ವರ್ಣವನ್ನು ಪ್ರತಿನಿಧಿಸುವ ಪ್ರೀತಿ ಸಹಾನುಭೂತಿಗಳನ್ನು ಹೊಂದಿರುವ ಮಹಾ ಗೌರಿಯು ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿದ್ದಾಳೆ. ಶ್ವೇತ ವರ್ಣದ ಮಲ್ಲಿಗೆ ಹೂಗಳನ್ನು ಮಹಾ ಗೌರಿಗೆ ಅರ್ಪಿಸಬೇಕು.
ಸರ್ವ ಸ್ವರೂಪೇ ಸರ್ವೇಶ ಸರ್ವಶಕ್ತಿ ಸಮನ್ವಿತೆ
ಬಯೋಭ್ಯಸ್ತ್ರ ತ್ರಾಹಿ ನೋ ದುರ್ಗೆ ದೇವಿ ನಮೋಸ್ತುತೆ
ಎಲ್ಲ ರೂಪಗಳನ್ನು ಒಳಗೊಂಡಿರುವ ಸರ್ವಶಕ್ತಿ ಮಯಿಯಾಗಿರುವ ಭಕ್ತರಿಗೆ ಅಭಯಪ್ರದಳಾಗಿರುವ
ಮಹಾಗೌರಿಗೆ ನಮಿಸೋಣ.
ಯಾ ದೇವಿ ಸರ್ವಭೂತೇಶು ತುಷ್ಠಿ ರೂಪೇಣ ಸಂಸ್ಥಿತ ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
ಎಂಬ ಮಂತ್ರವನ್ನು ಪಠಿಸಬೇಕು.
ಓ ಐ0 ಹ್ರೀ0 ಶ್ರೀಮ್ ದುರ್ಗಾಯೇ ನಮಃ
ಇಲ್ಲವೇ
ಓ ಐ0 ಹ್ರೀ0 ಶ್ರೀಮ್ ಮಹಾಗೌರಾಯೇ ನಮಃ
ಎಂಬುದು ಆಕೆಯ ಪ್ರಣವ ಮಂತ್ರ.
ಮಹಾಗೌರಿಯನ್ನು ಭಕ್ತಿಯಿಂದ ಪೂಜಿಸುವ ಭಕ್ತರ ನೋವು ಸಂಕಟ ದುಃಖ ದುಮ್ಮಾನ ಮತ್ತು ಬಡತನಗಳನ್ನು ಆಕೆ ನಿವಾರಿಸುತ್ತಾಳೆ.
ಎಲ್ಲರಿಗೂ ದುರ್ಗಾಷ್ಟಮಿಯ ಶುಭಾಶಯಗಳು.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್