ಧಾರವಾಡ ಏ.03:ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ. ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ಧಗೊಳಸುವ ಮಾಗಿ ಉಳುಮೆ ಪಾರಂಪರಿಕ ಕೃಷಿ ವಿಧಾನ. ಈ ವಿಧಾನ ವೈಜ್ಞಾನಿಕವೂ ಆಗಿದೆ. ಮಾಗಿ ಉಳುಮೆ ಅಂದರೆ ಸರಿ ಸುಮಾರು ಹಿಂಗಾರು ಬೆಳೆಗಳ ಕಟಾವು ಮಾಡಿ ಮುಗಿಸಿದ ಕೃಷಿ ಜಮೀನನ್ನು ಆಳವಾಗಿ ಉಳುಮೆ ಮಾಡಿ ಮುಂದಿನ ಎರಡು ತಿಂಗಳಿನಲ್ಲಿ ಸೂರ್ಯನ ಬಿಸಿಲಿನ ತಾಪಕ್ಕೆ ಭೂಮಿಯನ್ನು ಒಡ್ಡುವ ಪದ್ಧತಿಯೇ ಮಾಗಿ ಉಳುಮೆಯಾಗಿದೆ. ಸಾಮಾನ್ಯವಾಗಿ ಇದನ್ನು ಇಳುಕಲಿಗೆ ಅಡ್ಡವಾಗಿ ಮಾಡಲಾಗುವುದು. ಇದನ್ನು ಸ್ಥಳೀಯವಾಗಿ ಮಾಗಿ ಬಿಡುವುದು, ನೆಲ ಕಾಯಸಿವುದು, ಬಿಸಿಲು ತಿನ್ನಿಸುವುದು ಎಂದೆಲ್ಲಾ ಕರೆಯಲಾಗುತ್ತದೆ.
ಮಾಗಿ ಉಳುಮೆ ಮಾಡುವ ಮೊದಲು ರೈತರು ತಮ್ಮ ಹೊಲಗಳಿಗೆ ಹೆಕ್ಟೇರಿಗೆ 10 ಟನ್ಗಳಷ್ಟು ಕೊಟ್ಟಿಗೆ ಅಥವಾ ಸಗಣಿ ಗೊಬ್ಬರವನ್ನು ಸಮನಾಗಿ ಹರಡಿ ನಂತರ ನೇಗಿಲಿನಿಂದ ಉಳುಮೆ ಮಾಡಿ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬಹುದು.
*ಮಾಗಿ ಉಳುಮೆ ಪ್ರಯೋಜನಗಳು:* ಮಾಗಿ ಉಳುಮೆಯಿಂದ ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ಕಾಯ್ದು ಮಣ್ಣಿನಲ್ಲಿರುವ ಹಿಂದಿನ ಬೆಳೆಗೆ ಬಾದಿತ ಕೀಟಗಳ ಕೋಶಗಳು ಮತ್ತು ತತ್ತಿಗಳು ಮತ್ತು ರೋಗಾಣುಗಳು ನಾಶ ಹೊಂದಿ ಭೂಮಿಯ ಮರು ಚೈತನ್ಯಕ್ಕೆ ಸಹಾಯ ಮಾಡುತ್ತದೆ.
ಮಾಗಿ ಉಳುಮೆಯಿಂದ ಭೂಮಿಯ ಮಣ್ಣು ತಿರುವು ಮುರುವು ಆಗಿ ಬೇಸಿಗೆಯಲ್ಲಿ ಆಗುವ ಮುಂಗಾರು ಮಳೆಯ ನೀರು ಇಂಗುವುದು. ಮಣ್ಣಿನಲ್ಲಿ ಗಾಳಿನ ಸಂವಹನ ಕ್ರಿಯೆಯ ವೇಗ ವೃದ್ಧಿಸುವುದು, ಜೊತೆಗೆ ಭೂಮಿಯ ಮಣ್ಣಿನ ತಿರುವು ಮುರುವಿಕೆಯಿಂದ ಮಳೆಯ ನೀರು ಆಳವಾಗಿ ಭೂಮಿಯಲ್ಲಿ ಇಂಗುವುದು. ಮಾಗಿ ಉಳುಮೆಯಿಂದ ಬಹುವಾರ್ಷಿಕ ಕಳೆಗಳಾದ ಜೇಕು ಮತ್ತು ಕರಿಕೆಯ ಬೇರುಗಳು ಬಿಸಿಲಿನ ತಾಪಕ್ಕೆ ಸಿಲುಕಿ ಮೊಳಕೆ ಒಡೆಯುವ ಸಾಮಥ್ರ್ಯ ಇಳಿಮುಖವಾಗುವದು.
ಹಿಂದಿನ ಬೆಳೆಯ ಕಟಾವಿನ ನಂತರ ಉಳಿಯುವ ಬೆಳೆ ಉಳಿಕೆಗಳು ಮಣ್ಣಿನಲ್ಲಿ ಸೇರಿಸಿ ಬೇಗನೇ ಕಳೆತು ಸಾವಯವ ಗೊಬ್ಬರವಾಗಲು ಸಹಾಯ ಮಾಡುವುದರ ಜೊತೆಗೆ ಭೂಮಿಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮ ಸುಧಾರಿಸಿ ಭೂಮಿಯ ಫಲವತ್ತತೆ ಮತ್ತು ಗುಣಮಟ್ಟವನ್ನು ಉತ್ತಮ ಪಡಿಸಲು ಅತ್ಯಂತ ಪ್ರಮುಖ ಪ್ರಾಥಮಿಕ ಬೇಸಾಯ ಕ್ರಮವಾಗಿದೆ.
ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಕೆಂಪು ಮಣ್ಣಿನಲ್ಲಿ ಪ್ರತಿ ವರ್ಷ ಹಾಗೂ ಕಪ್ಪು ಮಣ್ಣಿನಲ್ಲಿ ಪರ್ಯಾಯ ವರ್ಷದಲ್ಲಿ ಮಾಡುವುದು ಸೂಕ್ತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.