ಚಿತ್ರದುರ್ಗಜೂನ್.28:
“ಸೊಳ್ಳೆ ಚಿಕ್ಕದಾದರೂ ಕಾಟ ದೊಡ್ಡದು” ಸೋಂಕಿತ ಹೆಣ್ಣು ಅನಾಪಿಲಿಸ್ ಸೊಳ್ಳೆ ರಾತ್ರಿವೇಳೆ ಮನುಷ್ಯರನ್ನು ಕಚ್ಚುವುದರಿಂದ ಮಲೇರಿಯಾ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. “ಮಲೇರಿಯಾ ನಿವಾರಣೆ ಮಾಡಬೇಕಾದರೆ ಎಲ್ಲರ ಸಹಭಾಗಿತ್ವದಿಂದಷ್ಟೆ ಸಾಧ್ಯ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿರಿಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಇವರ ಸಹಯೋಗದೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯಿತಿ ಸದಸ್ಯರುಗಳಿಗೆ ಮಲೇರಿಯಾ ಕುರಿತು ಸಮರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.
ಮಳೆಗಾಲ ಆರಂಭವಾದ್ದರಿಂದ ಕೆರೆಕಟ್ಟೆ ಬಾವಿಗಳಲ್ಲಿ, ಜಾನುವಾರು ಹೆಜ್ಜೆಗಳಲ್ಲಿ, ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಸೊಳ್ಳೆಗಳ ನಿವಾರಣೆಗೆ ಸರ್ವರು ಶ್ರಮಿಸಬೇಕಾಗಿದೆ. “ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯ ವಿರುದ್ಧದ ಹೋರಾಟವನ್ನು ತೀವ್ರ ಗೊಳಿಸೋಣ” 2024ರ ಘೋಷಣೆಯಾಗಿದ್ದು, ಮಲೇರಿಯಾ ವಿರುದ್ಧ ಹೋರಾಟ ಮಾಡಿ ಮಲೇರಿಯವನ್ನು 2025ಕ್ಕೆ ನಿವಾರಣೆ ಮಾಡೋಣ ಎಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಚಳಿ ಜ್ವರ, ತಲೆನೋವು, ಹಲವರಿಗೆ ಹೊಟ್ಟೆ ನೋವು, ಇವು ಮಲೇರಿಯಾ ರೋಗದ ಲಕ್ಷಣಗಳಾಗಿದ್ದು, ಯಾವುದೇ ಜ್ವರ ಬರಲಿ ಆಶಾ ಕಾರ್ಯಕರ್ತೆಯರಲ್ಲಿ ಅಥವಾ ಆರೋಗ್ಯ ಸಂಸ್ಥೆಗಳಲ್ಲಿ ರಕ್ತಪರೀಕ್ಷೆ ಮಾಡುವುದರ ಮುಖಾಂತರ ಮಲೇರಿಯಾ ರೋಗವನ್ನು ಪತ್ತೆಹಚ್ಚಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಿಗದಿತ ಚಿಕಿತ್ಸೆ ಲಭ್ಯವಿರುವುದರಿಂದ ಯಾರು ಆತಂಕ ಪಡಬೇಕಾಗಿಲ್ಲ. ಶೀಘ್ರ ಪತ್ತೆ ತ್ವರಿತ ಚಿಕಿತ್ಸೆಯಿಂದ ಮಲೇರಿಯಾ ರೋಗವನ್ನು ನಿಯಂತ್ರಣದಲ್ಲಿಡಬಹುದು ಎಂದರು.
ವೈದ್ಯಾಧಿಕಾರಿ ಡಾ.ಜಿ.ಆರ್.ತಿಮ್ಮೇಗೌಡ ಮಾತನಾಡಿ, ಪರಿಸರ ಸ್ವಚ್ಛತೆ, ಚರಂಡಿಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸುವುದು, ಘನ ತ್ಯಾಜ್ಯ ಮತ್ತು ನಿರುಪಯುಕ್ತ ವಸ್ತುಗಳ ವಿಲೇವಾರಿ ಮಾಡುತ್ತಾ, ಉತ್ತಮ ಆರೋಗ್ಯ ಅಭ್ಯಾಸಗಳಿಂದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, “ನಿಂತ ನೀರು ಸೊಳ್ಳೆಗಳ ತವರು”, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಿಗಾವಹಿಸುವುದು ಮನೆಯ ಕೆಟಕಿಗಳಿಗೆ ಜಾಲರಿ ಅಳವಡಿಸುವುದು, ಮನೆಯ ಮುಂದೆ ಚೆಂಡು ಹೂವು, ಸೇವಂತಿಗೆ, ತುಳಸಿ ಬೆಳೆಸುವುದರ ಮುಖಾಂತರ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಹಾಗೂ ಶಾಲೆಗೆ ಹೋಗುವ ಮಕ್ಕಳು ಕೈಕಾಲುಗಳಿಗೆ ಕೊಬ್ಬರಿ ಎಣ್ಣೆ ಲೇಪನ ಮಾಡಿಕೊಳ್ಳುವುದರ ಜೊತೆಗೆ ತುಂಬು ತೋಳಿನ ಬಟ್ಟೆಗಳನ್ನು ಧರಿಸಬೇಕು. ವಯಸ್ಸಾದವರು ಮಕ್ಕಳು ಹಗಲು ವೇಳೆ ಮಲಗಿದರೂ ಕೂಡ ಸೊಳ್ಳೆ ಪರದೆ ಬಳಕೆ ಮಾಡುತ್ತಾ ಸೊಳ್ಳೆ ಕಚ್ಚಿಸಿಕೊಳ್ಳದಂತೆ ಎಚ್ಚರ ವಹಿಸಿದರೆ ಕೀಟ ಜನ್ಯ ರೋಗಗಳಿಂದ ದೂರ ಇರಬಹುದು ಎಂದರು.
ಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ ಮಾತನಾಡಿ, ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಗ್ರಾಮಗಳಲ್ಲಿ ಕೀಟಜನ್ಯ ರೋಗಗಳ ಕುರಿತು ಜಿಂಗಲ್ಸ್ ಮುಖಾಂತರ ಕಸದ ಗಾಡಿಗಳಲ್ಲಿ ಸಾರ್ವಜನಿಕರಿಗೆ ಪ್ರಚಾರ ಮಾಡುತ್ತಾ ಜಾಗೃತಿ ಮೂಡಿಸುತ್ತೇವೆ. ಜೊತೆಗೆ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳ ತಜ್ಞರಾದ ಡಾ.ತಿಮ್ಮೇಗೌಡ ಅವರು ಲಭ್ಯವಿರುವುದು ನಮಗೆ ಸಂತಸ ತಂದಿದೆ. ತಜ್ಞ ವೈದ್ಯರಿಗಾಗಿ ಜಿಲ್ಲಾ ಮಟ್ಟಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದು ವೈದ್ಯರ ಸೇವೆ ಪ್ರಶಂಸಿಸಿದರು.
ಸಿರಿಗೆರೆ ಗ್ರಾಮದ ಸಂತೆ ಮೈದಾನ ಸೇರಿದಂತೆ ವಿವಿಧಡೆ “ಸೊಳ್ಳೆ ಚಿಕ್ಕದು ಕಾಟ ದೊಡ್ಡದು” “ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ” “ತುಳಸಿ ಬೆಳಸಿ, ಸೊಳ್ಳೆಯ ನಿಯಂತ್ರಿಸಿ” “ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ” “ನಿಂತ ನೀರು ಸೊಳ್ಳೆಗಳ ತವರು” ಎಂಬ ಘೋಷಣೆಗಳನ್ನು ಶಾಲಾ ವಿದ್ಯಾರ್ಥಿಗಳಿಂದ ಕೂಗಿಸುತ್ತಾ ಜಾಥಾ ಮುಖಾಂತರ ಸಾರ್ವಜನಿಕರಿಗೆ ಕೀಟ ಜನ್ಯ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹನ್ಸಿರಾಬಾನು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೇವರಾಜ್, ಸದಸ್ಯರಾದ ಮೋಹನ್ ಸಿದ್ದೇಶ್, ನಾಗರಾಜ್ ವಿ. ಸಿಹೆಚ್ಒ ರಮ್ಯಾ, ಶಾಲಾ ಮುಖ್ಯೋಪಾಧ್ಯಾಯರಾದ ದ್ರಾಕ್ಷಾಯಣಮ್ಮ, ಸಹ ಶಿಕ್ಷಕ ಮಧು, ಶಾಲಾ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.